ಕೊರಮ ಸಮುದಾಯದ ಅಭಿವೃದ್ಧಿ ನಿಗಮ ಸ್ಥಾಪಿಸಲು ಸಿಎಂಗೆ ಮನವಿ

CTD KULUVA SAMAVESH-----
Published on

ಚಿತ್ರದುರ್ಗ: ಕೊರಮ ಸಮುದಾಯದ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸುವುದಾಗಿ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹೇಳಿದರು.

ಜಿಲ್ಲಾ ಕೊರಮ ಸಮುದಾಯದ ಕ್ಷೇಮಾಭಿವೃದ್ಧಿ ಸಂಘ ಶನಿವಾರ ನಗರದ ಗಾಯತ್ರಿಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಕುಳುವ ಜನಾಂಗದ ಸಮಾವೇಶ ಹಾಗೂ ಕಾಯಕಯೋಗಿ ಶಿವಶರಣ ಶ್ರೀ ನುಲಿಯ ಚಂದಯ್ಯ ಅವರ 918ನೇ ಜಯಂತ್ಯುತ್ಸವ ಉದ್ಘಾಟಿಸಿ ಸಚಿವರು ಮಾತನಾಡಿದರು.

ಬಹು ದಿನದ ಬೇಡಿಕೆಯಾದ ನಿಗಮ ಸ್ಥಾಪನೆಯಿಂದ ಅನುಕೂಲವಾಗಲಿದೆ. ಬೆಂಗಳೂರಲ್ಲಿ ಬೃಹತ್ ಸಮಾವೇಶ ಏರ್ಪಡಿಸಿ ಶಕ್ತಿ ಪ್ರದರ್ಶಿಸಬೇಕಿದೆ. ನಿಗಮದ ಬೇಡಿಕೆಯನ್ನು ಸಿಎಂ ಈಡೇರಿಸಲಿದ್ದಾರೆ. ಕೊರಚ, ಕೊರಮ ಹಾಗೂ ಭಜಂತ್ರಿ ಸಮುದಾಯಗಳು ಸಂಕಷ್ಟ ದಲ್ಲಿವೆ. ಮನವಿಗೆ ಸ್ಪಂದಿಸಿದ್ದ ಸಿಎಂ ಸಮಾಜದ ವಸತಿ ಫಲಾನುಭವಿಗಳ ಸಾಲ, ಬಡ್ಡಿ ಮನ್ನಾ ಮಾಡಿದ್ದಾರೆ ಎಂದು ತಿಳಿಸಿದರು.

ಪರಿಶಿಷ್ಟ ಜಾತಿಯ 101 ಸಮುದಾಯಗಳಿಗೂ ಸಾಮಾಜಿಕ ನ್ಯಾಯ ಒದಗಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಅಲೆಮಾರಿ ಸಮುದಾಯದ ಬೇಡಿಕೆ ಕುರಿತು ಅವರ ಗಮನಕ್ಕೆ ತರಲಾಗುವುದು. ಒಳಮೀಸಲಾತಿ ಜಾರಿಗೊಳಿಸಲಾಗಿದೆ. ಸ್ಪರ್ಶ ಜಾತಿ ಪದ ತೆಗೆಯ ಬೇಕೆಂಬ ಮನವಿ ಕುರಿತು ಚರ್ಚಿಸಲಾಗುವುದು. ಶಿಕ್ಷಣದಿಂದ ಸಾಧನೆ ಮಾಡಬಹುದೆಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಪಾದಿಸಿರುವಂತೆ ಶಿಕ್ಷಣ, ಹೋರಾಟ, ಸಂಘಟನೆಯತ್ತ ಮುಖಮಾಡಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕೊರಮ ಸಮುದಾಯದ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಕೆ. ಕೃಷ್ಣಪ್ಪ ಮಾತನಾಡಿ, ರಾಜ್ಯದಲ್ಲಿ ಅಲೆಮಾರಿ ಪರಿಶಿಷ್ಟ ಜಾತಿಗೆ ಸೇರಿರುವ ಕುಳುವ ಸಮಾಜ ಸಾಮಾಜಿಕ ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಅತ್ಯಂತ ಹಿಂದುಳಿದ, ಅಸಂಘಟಿತ ಮತ್ತು ಶೋಷಣೆಗೆ ಒಳಾಗಿದೆ. ಬಡತನದಲ್ಲಿ ಸಿಲುಕಿರುವ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಗದೆ ಅನ್ಯಾಯವಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿದರು. ದಾವಣಗೆರೆ ವಿರಕ್ತಮಠದ ಡಾ.ಶ್ರೀಬಸವಪ್ರಭು ಸ್ವಾಮೀಜಿ, ಇರಕಲ್ ಮಠದ ಜಗದ್ಗುರು ಶ್ರೀ ಶಿವಶಕ್ತಿ ಪೀಠದ ಶ್ರೀ ಬಸವಪ್ರಸಾದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕುಡಾ ಆಧ್ಯಕ್ಷ ಎಂ.ಕೆ. ತಾಜ್‌ಪೀರ್, ಅಖಿಲ ಕರ್ನಾಟಕ ಕುಳುವ ಮಹಾ ಸಂಘದ ಅಧ್ಯಕ್ಷ ಶಿವಾನಂದ ಎಂ. ಭಜಂತ್ರಿ, ಜಂಟಿ ಕಾರ್ಯದರ್ಶಿ ಕಿರಣ್‌ಕುಮಾರ್, ಮಾಜಿ ಶಾಸಕ ಜಿ. ಚಂದ್ರಣ್ಣ, ಕರ್ನಾಟಕ ಪ.ಜಾ.ಮತ್ತು ಪ.ಪಂ.ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೆಶಕ ಗುರುನಾಥ್, ನಗರಸಭೆ ಸದಸ್ಯರಾದ ನರಸಿಂಹಮೂರ್ತಿ, ಗಂಗರಾಜು, ಆನಂದಪ್ಪ, ಸಂಘದ ಜಿಲ್ಲಾ ಗೌರವಾಧ್ಯಕ್ಷ ಹನುಮಂತಪ್ಪ ಗುಡೇರಿ, ಉಪಾಧ್ಯಕ್ಷ ರಾಮಪ್ಪ, ಪ್ರಧಾನ ಕಾರ್ಯದರ್ಶಿ ದ್ವಾರಕನಾಥ್, ಬುಚ್ಚಪ್ಪ, ಪರಮೇಶ್ವರಪ್ಪ, ಅಂಜನಮೂರ್ತಿ ಇತರರು ಇದ್ದರು.

ಸಮಾರಂಭಕ್ಕೂ ಮುನ್ನ ನಗರದ ನೀಲಕಂಠೇಶ್ವರ ದೇವಾಲಯದಿಂದ ಕುಲಗುರು ಕಾಯಕಯೋಗಿ ಶಿವಶರಣ ಶ್ರೀ ನುಲಿಯ ಚಂದಯ್ಯ ಅವರ ಭಾವಚಿತ್ರದ ಮೆರವಣಿಗೆ ನಡೆಯಿತು. ವಿವಿಧ ಜಾನಪದ ಕಲಾತಂಡಗಳು ಪಾಲ್ಗೊಂಡಿದ್ದವು.

...ಕೋಟ್...

ಒಳ ಮೀಸಲಾತಿಗೆ ಸಂಬಂಧಿಸಿದಂತೆ ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ. ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ಸಿಗುವಂತಾಗಬೇಕು. ಎಲ್ಲರೂ ಮುಖ್ಯವಾಹಿನಿಗೆ ಬರಬೇಕಿದೆ. ಪರಿಶಿಷ್ಟ ಜಾತಿಯ ಎಲ್ಲ ಸಮುದಾಯಗಳು ಒಗ್ಗಟ್ಟು ಪ್ರದರ್ಶಿಸಬೇಕು. ಒಳಮೀಸಲಾತಿ ಅನುಷ್ಠಾನಕ್ಕೆ ಚಾಲನೆ ನೀಡಿದ್ದ ಕಾಂಗ್ರೆಸ್ ಈಗ ಅದನ್ನು ಜಾರಿ ಮಾಡಿದೆ.

ಡಿ. ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ, ಚಿತ್ರದುರ್ಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net