ಹನೂರು: ತಾಲೂಕಿನಲ್ಲಿರುವ ಕೊರಮ ಸಮುದಾಯಕ್ಕೆ ಅಗತ್ಯ ಮೂಲಸೌಕರ್ಯ ಒದಗಿಸುವಂತೆ ರಾಜ್ಯ ಕುಳುವ ಮಹಾಸಭಾ ಜಂಟಿ ಕಾರ್ಯದರ್ಶಿ ಕಿರಣ್‌ಕುಮಾರ್ ಕೊತ್ತಗೆರೆ ಒತ್ತಾಯಿಸಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಬುಧವಾರ ಕುಂದುಕೊರತೆ ಸಂಬಂಧ ಆಯೋಜಿಸಿದ್ದ ಅಧಿಕಾರಿಗಳು ಹಾಗೂ ಸಮುದಾಯದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು. ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಂಚಾಪುರ, ಗಂಗನದೊಡ್ಡಿ, ಪುಷ್ಪಾಪುರ, ಜಿನಕನಹಳ್ಳಿ, ಚಿಕ್ಕಲ್ಲೂರು, ಕಳ್ಳಿದೊಡ್ಡಿ, ರಾಮಾಪುರ, ಮಹದೇಶ್ವರ ಬೆಟ್ಟ ಸೇರಿದಂತೆ 11 ಗ್ರಾಮಗಳಲ್ಲಿ ಕೊರಮ ಸಮುದಾಯದ ಜನರು ವಾಸಿಸುತ್ತಿದ್ದು, ಸುಮಾರು 10 ಸಾವಿರ ಜನಸಂಖ್ಯೆ ಇದೆ. ಆದರೆ ಸ್ವಾತಂತ್ರೃ ಗಳಿಸಿ 75 ವರ್ಷ ಕಳೆದರೂ ಈ ಗ್ರಾಮಗಳಿಗೆ ಈವರೆಗೂ ಸಮರ್ಪಕ ಕುಡಿಯುವ ನೀರು, ವಸತಿ, ಸ್ಮಶಾನ, ರಸ್ತೆ, ಬಸ್ ಸೌಕರ್ಯ, ಸಮುದಾಯ ಭವನ ನಿರ್ಮಾಣ, ಗ್ರಂಥಾಲಯ ಸ್ಥಾಪನೆ ಸೇರಿದಂತೆ ಇನ್ನಿತರೆ ಅಗತ್ಯ ಮೂಲಸೌಕರ್ಯಗಳ ಕೊರತೆ ಇದೆ. ಇದರಿಂದ ಕೂಲಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಸಮುದಾಯದ ಜನರು ಕಷ್ಟದ ನಡುವೆ ಜೀವನ ಸಾಗಿಸುತ್ತಿದ್ದು, ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ಆದ್ದರಿಂದ ಈ ಬಗ್ಗೆ ಮುತುವರ್ಜಿ ವಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಯುವ ಸಂಪುಟ ಸಭೆಯಲ್ಲಿ ಗಮನಕ್ಕೆ ತಂದು ಅಗತ್ಯ ಮೂಲಸೌಕರ್ಯವನ್ನು ಒದಗಿಸಬೇಕು. ಜತೆಗೆ ಬಗರ್‌ಹುಕುಂಗೆ ಅರ್ಜಿ ಸಲ್ಲಿಸಿರುವ ರೈತರಿಗೆ ಸಾಗುವಳಿ ಪತ್ರ ವಿತರಿಸಬೇಕು. ಪರಿಶಿಷ್ಟ ಜಾತಿ, ಪ.ಪಂಗಡ ಸಮಿತಿಯಲ್ಲಿ ಸಮುದಾಯದ ಪ್ರತಿನಿಧಿಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮುನಿರಾಜು ಮಾತನಾಡಿ, ಸಮಾಜದಲ್ಲಿ ಕೊರಮ ಸಮುದಾಯ ಹಿಂದುಳಿದಿದೆ. ಹಾಗಾಗಿ ಅಗತ್ಯ ಮೂಲ ಸೌಕರ್ಯವನ್ನು ಒದಗಿಸುವುದು ನಮ್ಮ ಆದ್ಯ ಕರ್ತವ್ಯ. ಪಿಡಿಒಗಳು ಈ ಬಗ್ಗೆ ಮನದಟ್ಟು ಮಾಡಿಕೊಂಡು ಆಯಾ ಗ್ರಾಮದಲ್ಲಿ ಅಗತ್ಯ ಮೂಲಸೌಕರ್ಯ ಒದಗಿಸಲು ಮುಂದಾಗಬೇಕು ಎಂದು ಸೂಚಿಸಿದರು.
ತಹಸೀಲ್ದಾರ್ ವೈ.ಕೆ ಗುರುಪ್ರಸಾದ್ ಮಾತನಾಡಿ, ಮೂಲಸೌಕರ್ಯ ಒದಗಿಸುವ ಸಂಬಂಧ ಆಯಾ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. ಸಭೆಯಲ್ಲಿ ತಾಲೂಕು ಪಂಚಾಯಿತಿ ಇಒ ಉಮೇಶ್, ಆರ್‌ಐಗಳಾದ ಮಹದೇವಸ್ವಾಮಿ, ಶಿವಕುಮಾರ್, ಪಿಡಿಒಗಳಾದ ಮಾದೇಶ್, ಕಿರಣ್, ಗಂಗಾಧರ್, ಸಿದ್ದಪ್ಪ, ಮಹಾಸಭಾ ರಾಜ್ಯ ಉಪಾಧ್ಯಕ್ಷೆ ಪುತ್ರಿ ನಾಗಮ್ಮ, ಕಾರ್ಯಕಾರಿಣಿ ಸಮಿತಿ ಸದಸ್ಯ ಮಹದೇವು, ಜಿಲ್ಲಾಧ್ಯಕ್ಷ ಮಾದೇಶ್, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಮೈಸೂರು ಮಹಾಸಭಾ ಅಧ್ಯಕ್ಷ ರವಿಕುಮಾರ್, ಉಪಾಧ್ಯಕ್ಷ ನಂಜುಂಡಸ್ವಾಮಿ, ಮುಖಂಡರಾದ ಬಸವರಾಜು, ನಟರಾಜು, ವಿನಯ್, ಹನುಮಂತ ಹಾಗೂ ಇನ್ನಿತರರು ಇದ್ದರು.