

ಚನ್ನರಾಯಪಟ್ಟಣ: ಕೊಬ್ಬರಿಗೆ ಬೆಂಬಲ ಬೆಲೆ ಕಲ್ಪಿಸುವುದರ ಜತೆಗೆ ನಫೆಡ್ ಮೂಲಕ ಕೊಬ್ಬರಿ ಖರೀದಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿ ಶಾಸಕ ಸಿ.ಎನ್.ಬಾಲಕೃಷ್ಣ ನೇತ್ರತ್ವದಲ್ಲಿ ವಿವಿಧ ರೈತಪರ ಸಂಘಟನೆಗಳೊಂದಿಗೆ ಪಟ್ಟಣದ ಕೆ.ಆರ್.ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.
ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಕೊಬ್ಬರಿಗೆ ಬೆಂಬಲ ಬೆಲೆ ನಿಗಧಿಪಡಿಸುವುದರ ಜತೆಗೆ ನಫೆಡ್ ಮೂಲಕ ಖರೀದಿಗೆ ಮುಂದಾಗದಿದ್ದರೆ ರೈತ ವರ್ಗದ ಬದುಕು ಬೀದಿಗೆ ಬರಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಒಂದು ಕ್ವಿಂಟಾಲ್ ಕೊಬ್ಬರಿ ದರ 17,600 ರೂ. ಗಡಿ ದಾಟಿದ್ದು ಇತ್ತೀಚಿನ ದಿನಗಳಲ್ಲಿ ಧಿಡೀರ್ 11 ಸಾವಿರಕ್ಕೆ ಕುಸಿದಿದೆ. ಆರ್ಥಿಕವಾಗಿ ತೆಂಗು ಬೆಳೆಯನ್ನೇ ನಂಬಿರುವ ರೈತ ಕುಟುಂಬಗಳು ದಿಕ್ಕು ತೋಚದ ಸ್ಥಿತಿಗೆ ಬಂದು ನಿಂತಿವೆ ಎಂದರು.
ಈ ಬಾರಿ ಪೂರ್ವ ಮುಂಗಾರಿನಿಂದ ಸತತ 6 ತಿಂಗಳ ಕಾಲ ವ್ಯಾಪಕ ಮಳೆ ಸುರಿದಿದ್ದು ತೇವಾಂಶ ಹೆಚ್ಚಾಗಿ ಶೀತಪೀಡೆಗೆ ಒಳಗಾಗಿ ತಾಲೂಕಿನಲ್ಲಿ ಸುಮಾರು 20 ರಿಂದ 25 ಸಾವಿರ ತೆಂಗಿನ ಮರಗಳು ನಾಶವಾಗಿವೆ. ಇರುವ ಮರಗಳು ನಿರೀಕ್ಷೆಯಂತೆ ಫಸಲು ಹಿಡಿದಿಲ್ಲ. ಇದರಿಂದ ರೈತರು ಕಂಗಾಲಾಗಿದ್ದಾರೆ ಎಂದು ತಿಳಿಸಿದರು.
ಇನ್ನು 22 ರೂ. ಗಡಿ ದಾಟಿದ್ದ ಸಿಪ್ಪೆ ತೆಂಗಿನಕಾಯಿ ಬೆಲೆ ಕೇವಲ 14 ರೂ.ಗೆ ಕುಸಿದಿದ್ದು ಕೇಳುವವರೇ ಇಲ್ಲದಂತಾಗಿದೆ. ಕೊಬ್ಬರಿಗೆಂದು ಖರೀದಿಸುವವರೂ ಸಹ ಕೈಚೆಲ್ಲಿ ಬಿಟ್ಟಿದ್ದಾರೆ. ಹೊರ ರಾಜ್ಯಗಳಿಗೆ ಸಾಗಾಟ ಮಾಡುವಲ್ಲಿ ಮಧ್ಯವರ್ತಿಗಳ ಹಾವಳಿ ತಲೆನೋವಾಗಿ ಪರಿಣಮಿಸಿದೆ. ಹೀಗಾದರೆ ರೈತರ ಗತಿ ಏನಾಗಬೇಕು ಎಂದು ಆತಂಕ ವ್ಯಕ್ತಪಡಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರವು ರೈತ ಸಂಘಗಳೊಂದಿಗೆ ಸಭೆ ನಡೆಸಿ ತೆಂಗು ಹಾಗೂ ಇತರೆ ಬೆಳೆಗಳ ಕುಂದು-ಕೊರತೆಗಳನ್ನು ಆಲಿಸುವ ಹಾಗೂ ಬಗೆಹರಿಸುವ ಬಗ್ಗೆ ಚಿಂತನೆ ಮಾಡುವಲ್ಲಿ ವಿಫಲವಾಗಿರುವುದು ಇಂದು ರೈತರು ಬೀದಿಗಿಳಿಯಬೇಕಾದ ಪ್ರಮೇಯಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.
ಡಿ.19 ಸೋಮವಾರದಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆಯಲಿದ್ದು ಪ್ರಮುಖ ಅಂಶವಾಗಿ ಕೊಬ್ಬರಿಗೆ ಬೆಂಬಲ ಬೆಲೆ ನಿಗಧಿ ಹಾಗೂ ನಫೆಡ್ ಮೂಲಕ ಖರೀದಿಸುವ ವಿಚಾರವನ್ನು ಪ್ರಸ್ತಾವನೆ ಇರಿಸಿ ಶೀಘ್ರ ಜಾರಿಗೊಳಿಸುವಂತೆ ಒತ್ತಡ ಏರಲಾಗುವುದು ಎಂದು ಭರವಸೆ ನೀಡಿದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಅರಳಾಪುರ ಮಂಜೇಗೌಡ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ರೈತ ವರ್ಗದ ಮೇಲೆ ಚಿಂತನೆ ಇಲ್ಲ. ತೀರ್ವ ಮಳೆ ಸುರಿದ ಪರಿಣಾಮ ಬೆಳೆಗಳು ಹಾಳಾಗಿದ್ದು ಅಲ್ಲದೆ ತೆಂಗಿನ ಮರಗಳು ಶೀತಬಾಧೆಯಿಂದ ನೆಲ ಹಿಡಿಯುತ್ತಿವೆ. ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಅಗತ್ಯ ಪರಿಹಾರ ಕಲ್ಪಿಸಬೇಕು ಎಂಬ ಪರಿಜ್ಞಾನವೇ ಇಲ್ಲದಾಗಿದೆಯೇ ಎಂದು ಅಸಮಾಧಾನ ಹೊರ ಹಾಕಿದರು.
ರೈತ ವರ್ಗವು ಸರ್ಕಾರದಿಂದ ಪ್ರತಿಯೊಂದನ್ನೂ ಭಿಕ್ಷೆ ರೀತಿಯಲ್ಲಿ ಕೇಳಿ ಕೇಳಿ ಪಡೆಯಬೇಕಾದ ಪರಿಸ್ಥಿತಿ ಬಂದೊದಗಿದೆ. ನಾವು ಅಧಿಕಾರ ನೀಡಿರುವುದು ಸಾಮಾಜದ ಆಗು-ಹೋಗುಗಳನ್ನು ಗಮನಿಸಿ ಕೆಲಸ ಮಾಡಲೆಂದೇ ಹೊರತು ಇಲ್ಲದ ಯೋಜನೆಗಳನ್ನು ರೂಪಿಸಿ ರೈತ ವರ್ಗದ ಮೇಲೆ ಬರೆ ಎಳಯಲೆಂದು ಅಲ್ಲ ಎಂದು ಗುಡುಗಿದರು.
ಡಿ.18 ರಂದು ಬೆಳಗಾವಿ ಚಲೋ ಕಾರ್ಯಕ್ರಮದಡಿ ರೈತ ವರ್ಗವು ಬೆಳಗಾವಿಗೆ ತೆರಳಲಿದ್ದು ಅಧಿವೇಶದ ವೇಳೆ ಮುಖ್ಯಮಂತ್ರಗಳಿಗೆ ಹಲವು ಬೇಡಿಕೆಗಳನ್ನು ಸಲ್ಲಿಸಿ ಅನುಮೋದನೆಗೊಳಿಸಿಯೇ ತೀರುತ್ತೇವೆ. ಇಲ್ಲವಾದಲ್ಲಿ ಸುವರ್ಣಸೌಧವನ್ನು ಮುತ್ತಿಗೆ ಹಾಕಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಕಬ್ಬು ಬೆಳೆಯ ಪ್ರೋತ್ಸಾಹ ಧನ ಹೆಚ್ಚಿಸಿ: ಕಬ್ಬು ಬೆಳೆಗಾರರ ಬೆಂಬಲಕ್ಕೂ ಸರ್ಕಾರ ನಿಲ್ಲಬೇಕಿದೆ. ಸದ್ಯ ಕ್ವಿಂಟಾಲ್ ಕಬ್ಬಿಗೆ ನೀಡುತ್ತಿರುವ ಕೇವಲ 50 ರೂ. ಪ್ರೋತ್ಸಾಹ ಧನ ಯಾವ ದೇವರಿಗೆ ಪ್ರೀತಿ ನೀವೇ ಹೇಳಿ. ದಯವಿಟ್ಟು ಕ್ವಿಂಟಾಲ್ ಕಬ್ಬು ಫಸಲಿಗೆ 1,500 ರೂ. ಪ್ರೋತ್ಸಾಹ ಧನ ಕಲ್ಪಿಸಬೇಕು. ಇಲ್ಲವಾದಲ್ಲಿ ಕಬ್ಬು ಬೆಳೆಗಾರರು ಸಹ ಬೀದಿಗಿಳಿದು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಿದ್ದಾರೆ. ಅದಕ್ಕೆ ಅವಕಾಶ ನೀಡದಂತೆ ಶೀಘ್ರ ಪ್ರೋತ್ಸಾಹ ಧನವನ್ನು ಹೆಚ್ಚಿಸಿ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ರಾಗಿ ಖರೀದಿ ನಿಯಮ ಸಡಿಲಿಕೆ ಅಗತ್ಯ: ನಫೆಡ್ ಮೂಲಕ ರಾಗಿಯನ್ನು ಖರೀದಿ ಮಾಡುವ ವೇಳೆ 5 ಎಕರೆ ಒಳಪಟ್ಟ ರೈತರಿಂದ ಮಾತ್ರ ರಾಗಿ ಖರೀದಿಸಲಾಗಿದ್ದು ಸಣ್ಣ ಹಿಡುವಳಿದಾರರಿಗೆ ಅನುಕೂಲವಾಗಿದೆ. ಆದರೆ 5 ಎಕರೆ ಮೇಲ್ಪಟ್ಟ ರೈತರು ತಾವು ಬೆಳೆದ ರಾಗಿಯನ್ನು ಮಾರಾಟ ಮಾಡಲಾಗದೆ ನಷ್ಟ ಅನುಭವಿಸಿದ್ದಾರೆ. ಸರ್ಕಾರ ಈ ಬಗ್ಗೆ ಚಿಂತನೆ ನಡೆಸಿ ನಿಯಮಗಳನ್ನು ಸಡಿಲಗೊಳಿಸಿ 7 ರಿಂದ 10 ಎಕರೆಗೆ ವಿಸ್ತರಿಸಿದರೆ ಎಲ್ಲ ರೈತ ವರ್ಗಕ್ಕೂ ಅನುಕೂಲ ಕಲ್ಪಿಸಿದಂತಾಗಲಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಸರ್ಕಾರಕ್ಕೆ ಮನವಿ ಮಾಡಿದರು.
ಪ್ರತಿಭಟನಾ ಜಾಥಾ: ಶಾಸಕ ಸಿ.ಎನ್.ಬಾಲಕೃಷ್ಣ ನೇತ್ರತ್ವದಲ್ಲಿ ಎಪಿಎಂಸಿ ಆವರಣದಿಂದ ಜಾಥಾ ಪ್ರಾರಂಭಗೊಂಡು ಕೆ.ಆರ್.ವೃತದ ವರಗೆ ಸಾಗಿತು. ಸುಮಾರು ಎರಡುವರೆ ಸಾವಿರಕ್ಕೂ ಹೆಚ್ಚು ರೈತರು ಪಾಲ್ಗೊಂಡು ನಫೆಡ್ ತೆರೆದು ಕೊಬ್ಬರಿ ಖರೀದಿಸುವಂತೆ ಹಾಗೂ ಕೊಬ್ಬರಿಗೆ ಬೆಂಬಲ ಬೆಲೆ ನಿಗಧಿ ಪಡಿಸುವಂತೆ ಆಗ್ರಹಿಸಿ ಘೋಷಣೆ ಕೂಗಿದರು. ಬಳಿ ಶಾಸಕ ಸಿ.ಎನ್.ಬಾಲಕೃಷ್ಣ ರೈತರ ಪರವಾಗಿ ತಹಸೀಲ್ದಾರ್ ಬಿ.ಎಂ.ಗೋವಿಂದರಾಜ್ ಅವರಿಗೆ ಮನವಿ ಸಲ್ಲಿಸಿದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಜಿ.ರಾಮಕೃಷ್ಣ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಎನ್.ಪುಟ್ಟಸ್ವಾಮಿಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಕುಂಬಾರಹಳ್ಳಿ ರಮೇಶ್, ಪ್ರಮುಖರಾದ ಎಚ್.ಎನ್.ಲೋಕೇಶ್, ಪರಮದ ದೇವರಾಜೇಗೌಡ, ಮರಗೂರು ಅನಿಲ್, ಜಗದೀಶ್, ಜಯರಾಂ, ಮರಿದ್ಯಾವೇಗೌಡ, ಬೋರೇಗೌಡ, ವಿವಿಧ ರೈತಪರ ಸಂಘಟನೆಗಳ ಮುಖಂಡರು ಹಾಗೂ ತಾಲೂಕು ವ್ಯಾಪ್ತಿಯ ರೈತರು ಪಾಲ್ಗೊಂಡಿದ್ದರು.
''ಕೇಂದ್ರ ಹಾಗೂ ರಾಜ್ಯ ಸರ್ಕಾರವು ಶೀಘ್ರ ಎಚ್ಚೆತ್ತು ತಲಾ ಕ್ವಿಂಟಾಲ್ ಕೊಬ್ಬರಿಗೆ 20 ಸಾವಿರ ರೂ. ನಿಗಧಿಪಡಿಸುವುದರ ಜತೆಗೆ ನಫೆಡ್ ಮೂಲಕ ಕೊಬ್ಬರಿ ಖರೀದಿಗೆ ಯೋಜನೆ ರೂಪಿಸುವ ಮೂಲಕ ರೈತ ವರ್ಗಕ್ಕೆ ನೆರವಾಗಬೇಕು''
ಸಿ.ಎನ್.ಬಾಲಕೃಷ್ಣ, ಶಾಸಕ
''ಬೆಳಗಾವಿ ಅಧಿವೇಶನದಲ್ಲಿ ಮುತ್ತಿಗೆ ಹಾಕಿ ರೈತ ಪರವಾದ ವಿವಿಧ ಭೇಡಿಕೆಗಳನ್ನು ಮುಂದಿಡಲಿದ್ದು ಈಡೇರಿಸುವ ವರೆಗೂ ಬಿಡುವುದಿಲ್ಲ. ಜೈಲಿಗೆ ಹಾಕಿದರೂ ರೈತರಿಗೋಸ್ಕರ ಅದಕ್ಕೂ ಸಿದ್ಧನಾಗಿದ್ದೇನೆ. ರೈತರ ಬೆಳೆಗಳಿಗೆ ಸೂಕ್ತ ಬೆಲೆ ಸಿಗುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ.''
ಅರಳಾಪುರ ಮಂಜೇಗೌಡ, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ.