

ಅರಸೀಕೆರೆ: ಕೊಬ್ಬರಿ ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ತೆಂಗು ಬೆಳೆಗಾರರ ನೆರವಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ತಕ್ಷಣವೇ ಧಾವಿಸಬೇಕು ಎಂದು ಒತ್ತಾಯಿಸಿ ರೈತ ಸಂಘದ ಮುಖಂಡರು ಶುಕ್ರವಾರ ಮಧ್ಯಾಹ್ನ ದಿಢೀರ್ ಪ್ರತಿಭಟನೆ ನಡೆಸಿದರು.
ಪ್ರವಾಸಿ ಮಂದಿರದಿಂದ ಎಪಿಎಂಸಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ ಎಪಿಎಂಸಿ ಅಧಿಕಾರಿ ಶೀಲಾ ಅವರಿಗೆ ಮನವಿ ಸಲ್ಲಿಸಲಾಯಿತು.
ರೈತಸಂಘದ ರಾಜ್ಯ ಸಂಚಾಲಕ ಕನಕೆಂಚೇನಹಳ್ಳಿ ಪ್ರಸನ್ನಕುಮಾರ್ ಮಾತನಾಡಿ, ಕಳೆದ ವರ್ಷ ಪ್ರತಿ ಕ್ವಿಂಟಾಲ್ ಕೊಬ್ಬರಿಯನ್ನು 17 ರಿಂದ 18 ಸಾವಿರ ರೂ.ಗಳಿಗೆ ಮಾರಾಟ ಮಾಡಲಾಗುತ್ತಿತ್ತು. ಇದೀಗ ಕೊಬ್ಬರಿ ಧಾರಣೆ ಈಗ 9,800 ರೂ.ಗಳಿಗೆ ಕುಸಿದಿದೆ. ಬೆಂಬಲ ಬೆಲೆ ಮೂಲಕ 11,700 ರೂ.ಗಳಿಗೆ ಖರೀದಿ ಮಾಡಲು ಆದೇಶ ಹೊರಡಿಸಲಾಗಿದೆ. ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ಅನ್ನದಾತರನ್ನು ರಕ್ಷಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು 20 ಸಾವಿರ ರೂ.ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.
ರೈತಮುಖಂಡರಾದ ಕೆಲ್ಲಂಗೆರೆ ಬಾಬು, ಬಸವರಾಜ್, ರೈತ ಸಂಘದ ತಾಲೂಕು ಗೌರವಾಧ್ಯಕ್ಷ ಜವೇನಹಳ್ಳಿ ನಿಂಗಪ್ಪ , ಜಿಲ್ಲಾ ಸಂಚಾಲಕ ಅಯೂಬ್ ಪಾಷ, ಜಿಲ್ಲಾ ಕಾರ್ಯಾಧ್ಯಕ್ಷ ಎಜಾಜ್ ಪಾಷಾ, ಮೊಹಮ್ಮದ್ ದಸ್ತಗೀರ್, ವಕೀಲ ವೆಂಕಟೇಶ್ , ಶಾಂತಮ್ಮ, ರಂಗಸ್ವಾಮಣ್ಣ ,ಹನುಮಂತು, ರಾಮಚಂದ್ರ, ಸೋಮಣ್ಣ, ಶಾಂತಕುಮಾರ್, ಚಂದ್ರಪ್ಪ, ರಮೇಶ್, ತಿಮ್ಮಪ್ಪ ಇತರರು ಇದ್ದರು.