

ಅರಸೀಕೆರೆ: ಕೊಬ್ಬರಿ ಧಾರಣೆ ಹೆಚ್ಚಳ ಹಾಗೂ ಕೃಷಿ ಪಂಪ್‌ಸೆಟ್ ಸಕ್ರಮಕ್ಕೆ ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತಸಂಘದ ಮುಖಂಡರು ಅರಸೀಕೆರೆ ನಗರದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.
ಪ್ರವಾಸಿ ಮಂದಿರದ ಆವರಣದಿಂದ ಬ್ಯಾನರ್, ಬಂಟಿಂಗ್ಸ್, ಭಿತ್ತಿಪತ್ರ ಹಿಡಿದ ಹೋರಾಟಗಾರರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಮೊಳಗಿಸಿ ಟ್ರ್ಯಾಕ್ಟರ್ ರ‌್ಯಾಲಿ ನಡೆಸಿ ಗಮನಸೆಳೆದರು.
ಬಸವೇಶ್ವರ ವೃತ್ತದಲ್ಲಿ ಜಮಾಯಿಸಿ ಕೆಲಕಾಲ ಧರಣಿ ನಡೆಸಿ ಆಕ್ರೋಶ ಹೊರಹಾಕಿದರು. ಇದರಿಂದಾಗಿ ಕೆಲಕಾಲ ವಾಹನ ಸಂಚಾರದಲ್ಲಿ ವ್ಯತ್ಯಯವುಂಟಾಗಿತ್ತು. ಹೋರಾಟದ ಕಿಚ್ಚಿಗೆ ದೂರದ ಊರುಗಳಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಪರದಾಡುವಂತಾಗಿತ್ತು.
ಸಂಘದ ಅಧ್ಯಕ್ಷ ಕೆಸರಟ್ಟಿ ಶರಣಗೌಡ ಮಾತನಾಡಿ, ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ಪ್ರತಿ ಕ್ವಿಂಟಾಲ್ ಕೊಬ್ಬರಿಗೆ 20 ಸಾವಿರ ರೂ. ನಿಗದಿ ಮಾಡಿ ಖರೀದಿಗೆ ಅವಕಾಶ ಕಲ್ಪಿಸಬೇಕು. ಇಲ್ಲದಿದ್ದಲ್ಲಿ ಹೋರಾಟ ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ರಾಜ್ಯ ಉಪಾಧ್ಯಕ್ಷ ಶರಣಪ್ಪ ಕೊತ್ವಾಲ್ ಮಾತನಾಡಿ, ಕೃಷಿಕರು ವಿದ್ಯುತ್ ಪರಿವರ್ತಕ ಅಳವಡಿಸಿಕೊಂಡು ಸಂಪರ್ಕ ಸಕ್ರಮಗೊಳಿಸಿ ಕೊಳ್ಳಲು ಹಣ ಪಾವತಿಸಿ ವರ್ಷಗಳೇ ಕಳೆದಿವೆ. ಪರಿಸ್ಥಿತಿ ಹೀಗಿದ್ದರೂ ಅನ್ನದಾತರ ಸಂಕಷ್ಟ ಅಧಿಕಾರಿಗಳು ಹಾಗೂ ಸರ್ಕಾರದ ಗಮನಕ್ಕೆ ಬಂದಂತೆ ಕಾಣುತ್ತಿಲ್ಲ. ಜತೆಗೆ ಸುಟ್ಟುಹೋದ ವಿದ್ಯುತ್ ಪರಿವರ್ತಕ ಬದಲಿಸಲು ಸತಾಯಿಸಲಾಗುತ್ತಿದೆ. ಉಭಯ ಸರ್ಕಾರಗಳು ತಕ್ಷಣವೇ ಎಚ್ಚೆತ್ತು ಕೊಬ್ಬರಿ ದರ ಹೆಚಿಸುವ ಜತೆಗೆ ಕೃಷಿ ವಿದ್ಯುತ್ ಪಂಪ್‌ಸೆಟ್ ಸಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಮಹಿಳಾ ಘಟಕದ ಅಧ್ಯಕ್ಷೆ ಸರೋಜಮ್ಮ, ಸಂಚಾಲಕ ಚಂದ್ರಶೇಖರ ಭೋವಿ,ಜಿಲ್ಲಾ ಉಪಾಧ್ಯಕ್ಷ ನಟರಾಜ್, ತಾಲೂಕು ಅಧ್ಯಕ್ಷ ಈರಪುರ ಮಧುಸೂದನ್,ರಾಜಶೇಖರ್, ದೇವರಾಜ್ ಸೇರಿ ನೂರಾರು ರೈತ ಮುಖಂಡರಿದ್ದರು. ತಹಸೀಲ್ದಾರ್ ವಿಭಾ ವಿ. ರಾಥೋಡ್ ಹಾಗೂ ಸೆಸ್ಕ್ ಎಇಇ ಜಯಪ್ಪ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಶಾಸಕ ಕೆ.ಎಂ.ಶಿವಲಿಂಗೇಗೌಡ ಮನವಿ ಸ್ವೀಕರಿಸಿ ಮಾತನಾಡಿ, ನಿಮ್ಮ ಹೋರಾಟಕ್ಕೆ ಸದಾ ನಮ್ಮ ಬೆಂಬಲವಿದೆ. ಬೆಲೆ ಕುಸಿತದ ಬಗ್ಗೆ ಸರ್ಕಾರದ ಗಮನಸೆಳೆದಿದ್ದೇನೆ ಎಂದು ಹೇಳಿದರು.