ಕೊಪ್ಪಳದಾದ್ಯಂತ ವರುಣನ ಅಬ್ಬರ

0409-Kpl-Ravi-4
Published on

ಕೊಪ್ಪಳ: ನಗರ ಸೇರಿ ಜಿಲ್ಲಾದ್ಯಂತ ಭಾನುವಾರ ರಾತ್ರಿಯಿಂದ ವರುಣ ಅಬ್ಬರಿಸಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಕೊಪ್ಪಳ ತಾಲೂಕಿನ ಕಿನ್ನಾಳ ಹಿರೇಹಳ್ಳ ಜಲಾಶಯ ಭರ್ತಿಯಾಗಿದ್ದು, ಹಳ್ಳಕ್ಕೆ ನೀರು ಬಿಡಲಾಗಿದೆ.


ಕೆಲ ದಿನಗಳಿಂದ ಬರಿ ಆಗಸ ನೋಡಿ ಬೇಸರವಾಗಿದ್ದ ರೈತರು ಮಳೆ ಆಗಮನದಿಂದ ಖುಷಿಯಾಗಿದ್ದಾರೆ. ಆದರೆ, ವಾರದ ಹಿಂದೆ ಮಳೆಯಾಗಿದ್ದರೆ ಫಸಲು ಉಳಿಸಿಕೊಳ್ಳುವ ಅವಕಾಶವಿತ್ತು. ಕೆಲವೆಡೆ ತೀವ್ರ ಮಳೆ ಕೊರತೆ ಕಾಡಿದ ಕಾರಣ ರೈತರು ಬೆಳೆನಾಶ ಪಡಿಸಿದ್ದಾರೆ. ಸದ್ಯ ಮಳೆ ಮುಂದುವರೆದಿದ್ದು, ಉಳಿದ ಬೆಳೆ ಉಳಿಸಿಕೊಳ್ಳುವ ಭರವಸೆ ಮೂಡಿಸಿದೆ. ನಿಸ್ತೇಜಗೊಂಡ ಬೆಳೆಗೆ ರಸಗೊಬ್ಬರ ಹಾಕುವ ಕಾರ್ಯ ಚುರುಕು ಪಡೆದಿದೆ.


ಮಳೆ ಬರುವಿಕೆಯಿಂದ ರೈತರು ಫುಲ್ ಖುಷಿಯಾಗಿದ್ದಾರೆ. ಕೃಷಿ ಚಟುವಟಿಕೆ ಮುಂದುವರೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸೋಮವಾರವೂ ಬೆಳಗ್ಗೆಯಿಂದ ಜಿಟಿ ಮಳೆ ಮುಂದುವರೆದಿದೆ. ಇದರಿಂದ ನಿತ್ಯದ ಕೃಷಿ ಚಟುವಟಿಕೆಗೆ ಒಂದಿಷ್ಟು ಅಡಿಯಾಗಿದೆ. ಗದಗ, ಯಲಬುರ್ಗಾ ಭಾಗದಲ್ಲಿ ಉತ್ತಮ ಮಳೆಯಾದ ಕಾರಣ ಹಿರೇಹಳ್ಳಕ್ಕೆ ಒಳ ಹರಿವು ಗಣನೀಯವಾಗಿ ಹೆಚ್ಚಿದೆ. ಕಿನ್ನಾಳ ಹಿರೇಹಳ್ಳ ಜಲಾಶಯ ಭರ್ತಿಯಾಗಿದ್ದು, ಸೋಮವಾರ ಜಲಾಶಯದಿಂದ ಹಳ್ಳಕ್ಕೆ ಹೆಚ್ಚುವರಿ ನೀರು ಬಿಡುಗಡೆ ಮಾಡಲಾಗಿದೆ. ಕಿರು ಜಲಾಶಯ ಭರ್ತಿಯಾದ ವಿಷಯ ಕೇಳಿ ಜನರು ಆಗಮಿಸಿ ಮನಮೋಹಕ ದೃಶ್ಯ ಕಣ್ತುಂಬಿಕೊಳ್ಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net