ಕೊಪ್ಪಳದಲ್ಲಿ‌ ಸತತ ಮಳೆ ಜನ ಜೀವನ ಅಸ್ತವ್ಯಸ್ತ, ಜಲಾಶಯಕ್ಕೆ ಹೆಚ್ಚಿದ ಒಳ ಹರಿವು

IMG-20230725-WA0021
Published on

ಕೊಪ್ಪಳ: ನಗರ ಸೇರಿ‌ ಜಿಲ್ಲಾದ್ಯಂತ ಕಳೆದ‌ರಾತ್ರಿಯಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ.

ಕಳೆದೊಂದು ವಾರದಿಂದ ನಿರಂತರ ಮಳೆ ವಾತಾವರಣವಿದೆ. ಆದರೆ, ನಿರಂತರ ಮಖೆ ಸುರಿದಿರಲಿಲ್ಲ. ಆಗಾಗ ಮಳೆ ಬಿಡುವು ಕೊಟ್ಟಿತ್ತು. ಸೋಮವಾರವೂ ಬಹುತೇಕ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಮಂಗಳವಾರ ಬೆಳಗಿನ ಜಾವದಿಂದ ಸತತ ಮಳೆ ಸುರಿಯುತ್ತಿದೆ. ಪರಿಣಾಮ ಶಾಲಾ-ಕಾಲೇಜಿಗೆ ತೆರಳಲು ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಕೂಲಿ ಕೆಲಸಕ್ಕೆ ತೆರಳುವವರಿಗೂ ಅಡ್ಡಿಯುಂಟಾಗಿದೆ. ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ.

ಜಲಾಶಯಕ್ಕೆ 6ಟಿಎಂಸಿ ನೀರು : ಮಲೆನಾಡು ಭಾಗದಲ್ಲಿ ನಿರಂತರ ಮಳೆ‌ ಸುರಿಯುತ್ತಿದ್ದು, ಮುನಿರಾಬಾದ್ ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗಿದೆ. ಭದ್ರಾ, ತುಂಗಾ ಜಲಾಶಯ ಭರ್ತಿಯಾಗಿದ್ದು, ನದಿಗೆ ನೀರು ಬಿಟ್ಟಿದ್ದರಿಂದ ತುಂಗಭದ್ರಾ ಜಲಾಶಯಕ್ಕೆ 70 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕಳೆದ 24 ಗಂಟೆಯಲ್ಲಿ 6ಟಿಎಂಸಿ ಅಡಿ ನೀರು ಬಂದಿದ್ದು, 31.568ಟಿಎಂಸಿ ನೀರು ಸಂಗ್ರಹವಾಗಿದೆ‌.

ಗರಿಗೆದರಿದ ಕೃಷಿ ಚಟುವಟಿಕೆ: ಜಲಾಶಯಕ್ಕೆ ನೀರು ಹರಿದು ಬರುತ್ತಿದ್ದು, ಅಚ್ಚುಕಟ್ಟು ವ್ಯಾಪ್ತಿಯ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಗರಿಗೆದರಿದೆ. ಭತ್ತ ನಾಟಿ ಚುರುಕಾಗಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿದೆ. ಇದೇ ಪರಿಸ್ಥಿತಿ ಮುಂದುವರೆದಲ್ಲಿ ಒಂದು ವಾರದಲ್ಲಿ ಜಲಾಶಯ ಭರ್ತಿಯಾಗಲಿದ್ದು, ಆಗಸ್ಟ್ ಎರಡನೇ ವಾರದಲ್ಲಿ ಕಾಲುವೆಗಳಿಗೆ ನೀರು ಬಿಡುವ ಸಾಧ್ಯತೆ ಮೂಡಿಸಿದೆ.

ಶಾಲಾ-ಕಾಲೇಜಿಗಿಲ್ಲ ರಜೆ: ಸೋಮವಾರ ತಡ ರಾತ್ರಿಯಿಂದ ಮಳೆ ಸುರಿದಿದ್ದರೂ ಸದ್ಯ ಕಡಿಮೆ ಆಗಿದೆ. ಜಿಟಿ ಜಿಟಿ ಸುರಿಯುತ್ತಿದ್ದು, ವಾಹನ ಸಂಚಾರಕ್ಕೆ ಯಾವುದೇ ತೊಂದರೆ ಆಗಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಶಾಲಾ-ಕಾಲೇಜಿಗೆ ಯಾವುದೇ ರಜೆ ಘೋಷಿಸಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net