

ಕೊಪ್ಪಳ: ಜಿಲ್ಲಾದ್ಯಂತ ಕಳೆದೆರೆಡು ದಿನದಿಂದ ವರುಣನ ಸಿಂಚನವಾಗುತ್ತಿದ್ದು, ಮಳೆ ಕೊರತೆಯಿಂದ ಕಂಗಾಲಾಗಿದ್ದ ಜನತೆ ನಿಟ್ಟುಸಿರು ಬಿಡುವಂತಾಗಿದೆ.
ಜೋರಾಗಿ ಮಳೆ ಬಾರದಿದ್ದರೂ ಬುಧವಾರ ಬೆಳಗ್ಗಿನಿಂದಲೂ ಜಿಟಿ ಮಳೆಯಾಗುತ್ತಿದ್ದು, ಮಲೆನಾಡಿನ ವಾತಾವರಣ ನಿರ್ಮಾಣವಾಗಿದೆ. ಬಿಸಿಲ ನಾಡಿನಲ್ಲಿ ಏಕಾಏಕಿ ವಾತಾವರಣ ಬದಲಾಗಿದ್ದು, ತಂಪಾದ ವಾತಾವರಣ ಜನತೆಗೆ ಮುದ ನೀಡುತ್ತಿದೆ. ಮಳೆಯಲ್ಲಿಯೇ ಶಾಲಾ-ಕಾಲೇಜು ವಿದ್ಯಾರ್ಥಿಗಳು ಕೊಡೆ ಹಿಡಿದು ಓಡಾಡುವ ದಶ್ಯಗಳು ಸಾಮಾನ್ಯವಾಗಿವೆ. ಆಗಾಗ ಜೋರಾದ ಮಳೆ ಸುರಿಯುತ್ತಿದ್ದು ಚರಂಡಿಗಳು ತುಂಬಿ ಹರಿಯುತ್ತಿವೆ. ಕೃಷಿ ಹೊಂಡ, ಹಳ್ಳಗಳಲ್ಲಿ ನೀರಿನ ಪ್ರಮಾಣ ಏರಿಕೆಯಾಗುತ್ತಿದೆ. ರಸ್ತೆಗಳ ಗುಂಡಿಗಳಲ್ಲಿ ನೀರು ಸಂಗ್ರಹವಾಗಿ ಸಂಚಾರಕ್ಕೆ ತೊಂದರೆಯುಂಟಾಗುವಂತಾಗಿದೆ.
ಜಿಲ್ಲೆಯಲ್ಲಿ ಜನೆವರಿಯಿಂದ ಈವರೆಗೆ ನಿರೀಕ್ಷಿತ ಮಳೆಯಾಗಿಲ್ಲ. ಜೂನ್ ತಿಂಗಳಲ್ಲೂ ತೀವ್ರ ಮಳೆ ಕೊರತೆ ಕಾಡಿದ ಕಾರಣ ಈ ಬಾರಿ ಮುಂಗಾರು ಬಿತ್ತನೆಗೆ ಹಿನ್ನಡೆಯಾಗಿದೆ. 3.01ಲಕ್ಷ ಹೆಕ್ಟರ್ ಬಿತ್ತನೆ ಕ್ಷೇತ್ರ ಪೈಕಿ ಈವರೆಗೆ ಶೇ.49ರಷ್ಟು ಬಿತ್ತನೆಯಾಗಿದೆ. ಮಳೆಯಾಗಿದ್ದರಿಂದ ಜೂನ್ ಅಂತ್ಯ ಹಾಗೂ ಜುಲೈ ಮೊದಲ ವಾರದಲ್ಲಿ ಬಿತ್ತಿದ ಬೆಳೆಗಳಿಗೆ ಅನುಕೂಲವಾಗಿದೆ. ಇನ್ನೆರೆಡು ದಿನ ಮಳೆ ಮುಂದುವರೆಯುವ ಸಾಧ್ಯತೆ ಇದ್ದು, ಭೂಮಿಯಲ್ಲಿ ತೇವಾಂಶ ಹೆಚ್ಚಳ ಹಾಗೂ ಅಂತರ್ಜಲ ಮಟ್ಟ ವೃದ್ಧಿಗೆ ಪೂರಕವಾಗಲಿದೆ. ಒಟ್ಟಾರೆ ಜನೆವರೆಯಿಂದ ಈವರೆಗೆ ಹೋಲಿಸಿದಲ್ಲಿ ಶೇ.17ರಷ್ಟು, ಜೂನ್‌ನಿಂದ ಈವರೆಗೆ ಶೇ.16ರಷ್ಟು ಮಳೆ ಕೊರತೆಯಾಗಿದೆ. ಆದರೆ, ಜುಲೈ ಆರಂಭದಿಂದ ಈವರೆಗೆ ವಾಡಿಕೆ ಮಳೆಗಿಂತ ಶೇ.60ರಷ್ಟು ಹೆಚ್ಚುವರಿ ಮಳೆಯಾಗಿದೆ. ಮುಂದೆಯೂ ಮಳೆಯಾಗುವ ನಿರೀಕ್ಷೆ ಮೂಡಿಸಿದ್ದು, ರೈತರ ಆತಂಕ ದೂರವಾಗುತ್ತಿದೆ.