ಕೊಪ್ಪಳದಲ್ಲಿ ಗೃಹಜ್ಯೋತಿ ಯೋಜನೆಗೆ ಚಾಲನೆ

0508-Kpl-Ravi-1
Published on

ಕೊಪ್ಪಳ: ನಮ್ಮ ಸರ್ಕಾರ ನುಡಿದಂತೆ ಜನರಿಗೆ ಐದು ಗ್ಯಾರಂಟಿ ಯೋಜನೆಗಳನ್ನು ನೀಡಲಿದೆ. ಈಗಾಗಲೇ ಮೂರು ಗ್ಯಾರಂಟಿ ಜಾರಿಗೊಳಿಸಿದ್ದೇವೆ. ನಮ್ಮ ಅಧಿಕಾರಿಗಳು ಮನೆ ಮನೆಗೆ ತೆರಳಿ ಜನರಿಗೆ ಯೋಜನೆಗಳನ್ನು ಮುಟ್ಟಿಸಬೇಕೆಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸೂಚಿಸಿದರು.

ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ ಹಾಗೂ ಜೆಸ್ಕಾಂನಿಂದ ಶನಿವಾರ ಹಮ್ಮಿಕೊಂಡಿದ್ದ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.

ನಾವು ನುಡಿದಂತೆ ನಡೆದಿದ್ದೇವೆ. ಸಿಎಂ ಸಿದ್ದರಾಮಯ್ಯ ಜನರಿಗೆ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ಆರಂಭದಲ್ಲಿ ವಿಪಕ್ಷದವರು ಗ್ಯಾರಂಟಿ ಯೋಜನೆ ಟೀಕಿಸಿದರು. ಮಾಧ್ಯಮಗಳಲ್ಲಿ ಸಾಕಷ್ಟು ವಿಮರ್ಶೆಗಳು ನಡೆದವು. ಆದರೆ, ಬಜೆಟ್‌ನಲ್ಲಿ ಎಲ್ಲ ಗ್ಯಾರಂಟಿ ಯೋಜನೆಗಳಿಗೆ ಅನುದಾನ ಮೀಸಲಿರಿಸಿ ಒಂದೊಂದೇ ಜಾರಿ ಮಾಡುತ್ತಿದ್ದೇವೆ. ಈಗಾಗಲೇ ಅನ್ನಭಾಗ್ಯದಡಿ ಹೆಚ್ಚುವರಿ 5 ಕೆಜಿ ಅಕ್ಕಿ ಬದಲಾಗಿ ಹಣ ನೀಡಲಾಗುತ್ತಿದೆ. ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತವಾಗಿ ಸಾರಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾರೆ. ಈಗ ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್‌ವರೆಗೆ ವಿದ್ಯುತ್ ಉಚಿತವಾಗಿ ನೀಡುತ್ತಿದ್ದೇವೆ. ಇನ್ನೆರೆಡು ಗ್ಯಾರಂಟಿಗಳು ಶೀಘ್ರದಲ್ಲೇ ಜನರಿಗೆ ತಲುಪಲಿವೆ. ಇದು ನಮ್ಮ ಬದ್ಧತೆ ಎಂದರು.

ಕೊಪ್ಪಳ ಜಿಲ್ಲೆಯಲ್ಲಿ 2.41 ಲಕ್ಷ ಫಲಾನುಭವಿಗಳು ಗೃಹಜ್ಯೋತಿ ಯೋಜನೆ ಲಾಭ ಪಡೆದಿದ್ದಾರೆ. ಜನರು ನೆಮ್ಮದಿ, ಸ್ವಾಭಿಮಾನದಿಂದ ಬದುಕಲಿ ಎಂದು ಗೃಹಲಕ್ಷ್ಮೀ ಯೋಜನೆ ಮಾಡಲಾಗಿದೆ ಹೊರತು ಅತ್ತೆ-ಸೊಸೆಗೆ ಜಗಳ ಹಚ್ಚಲಲ್ಲ. ನಮ್ಮ ಅಧಿಕಾರಿಗಳು ವ್ಯವಸ್ಥಿತವಾಗಿ ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪಿಸುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಸಾಮಾನ್ಯ ಜನರಿಗೆ ತೊಂದರೆ ಆಗಿಲ್ಲ. ಬಡವರು ಉದ್ಧಾರ ಆಗುತ್ತಾರೆಂಬ ಹೊಟ್ಟೆಕಿಚ್ಚು ಇದ್ದವರಿಗೆ ಸಮಸ್ಯೆಯಾಗಿದೆ. ಆ.17ರಂದು ಬೆಳಗಾವಿಯಲ್ಲಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ದೊರೆಯಲಿದೆ ಎಂದು ಮಾಹಿತಿ ನೀಡಿದರು.

ಶಾಸಕ ರಾಘವೇಂದ್ರ ಹಿಟ್ನಾಳ್ ಮಾತನಾಡಿ, ಗ್ಯಾರಂಟಿ ಯೋಜನೆಗಳು ಅನುಷ್ಠಾನಗೊಳ್ಳುತ್ತಿದ್ದು, ವಿಪಕ್ಷದವರಿಗೆ ನಡುಕ ಶುರುವಾಗಿದೆ. ಟೀಕಿಸಲು ವಿಷಯಗಳಿಲ್ಲದ ಕಾರಣ ಸುಖಾಸುಮ್ಮನೇ ಆರೋಪ ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಜನರಿಗೆ ಕೊಟ್ಟ ಮಾತು ನಡೆಸಿಕೊಡುತ್ತಿದ್ದಾರೆ. ಈಗಾಗಲೇ ರಾಜ್ಯದಲ್ಲಿ ವಿಪಕ್ಷಗಳು ಮೂಲೆ ಸೇರಿದ್ದು, ಲೋಕಸಭೆ ಚುನಾವಣೆಯಲ್ಲೂ ಕಾಂಗ್ರೆಸ್‌ಗೆ ಜನರು ಬೆಂಬಲ ನೀಡಲಿದ್ದಾರೆ. ಗ್ಯಾರಂಟಿ ಯೋಜನೆಗಳು ಜನರಿಗೆ ಅನುಕೂಲವಾಗಿವೆ. ಜಿಲ್ಲೆಯ ಕಾಂಗ್ರೆಸ್ ಶಾಸಕರು, ಸಚಿವರು ಒಡಗೂಡಿ ಮಾಸ್ಟರ್ ಪ್ಲಾೃನ್ ರಚಿಸಿಕೊಂಡು ಜಿಲ್ಲೆ ಅಭಿವೃದ್ಧಿಪಡಿಸಲಾಗುವುದೆಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಗೃಹಜ್ಯೋತಿ ಫಲಾನುಭವಿಗಳಿಗೆ ಶೂನ್ಯ ವಿದ್ಯುತ್ ಬಿಲ್ ನೀಡಲಾಯಿತು. ನಗರಸಭೆ ಅಧ್ಯಕ್ಷೆ ಶಿವಗಂಗಾ ಭೂಮಕ್ಕನವರ, ಸದಸ್ಯರಾದ ಮುತ್ತು ಕುಷ್ಟಗಿ, ಅಕ್ಬರ್ ಪಾಷಾ, ಅಮ್ಜದ್ ಪಟೇಲ್, ಡಿಸಿ ಎಂ.ಸುಂದರೇಶ ಬಾಬು, ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ಎಸ್ಪಿ ಯಶೋದಾ ವಂಟಗೋಡಿ, ಜೆಸ್ಕಾಂ ಅಧಿಕಾರಿಗಳಾದ ಮಹಮದ್ ಷರೀಪ್, ಬಸವರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net