

ಕೊಪ್ಪಳ: ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಮಳೆ ಕೊರತೆಯಾಗಿದ್ದು, ಜಿಲ್ಲೆಯನ್ನು ಬರ ಪೀಡತವೆಂದು ಘೋಷಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದ ಜಿಲ್ಲಾ ಪದಾಧಿಕಾರಿಗಳು ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಜಿಲ್ಲೆ ಹಲವಾರು ಬಾರಿ ಬರಕ್ಕೆ ತುತ್ತಾಗಿದೆ. ಈ ವರ್ಷ ಮುಂಗಾರಿನಲ್ಲಿ ನಿರೀಕ್ಷಿತ ಮಳೆಯಾಗಿಲ್ಲ. ಬಿತ್ತನೆಯಾಗಿದ್ದರೂ ಮಳೆ ಬಾರದೆ ಬೆಳೆಗಳು ಒಣಗುತ್ತಿವೆ. ಬಿತ್ತನೆ, ಕೃಷಿ ಚಟುವಟಿಕೆ ಮಾಡಿದ ಖರ್ಚು ಮರಳಿ ಬಾರದಂತಾಗಿದೆ. ಸಾಲ ಮಾಡಿದ್ದು, ಸಾಲ ತೀರಿಸದ ಸ್ಥಿತಿ ನಮಗೆ ನಿರ್ಮಾಣವಾಗಿದೆ. ಮತ್ತೊಂದೆಡೆ ನಿರಂತರ ಲೋಡ್ ಶೆಡ್ಡಿಂಗ್ ಮಾಡುತ್ತಿದ್ದು, ಬೋರ್‌ವೆಲ್‌ಗಳಿಗೆ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಇದರಿಂದ ನೀರಾವರಿ ಬೆಳೆಗಳನ್ನು ಉಳಿಸಿಕೊಳ್ಳುವುದು ಕಷ್ಟವಾಗುತ್ತಿದೆ. ತುಂಗಭದ್ರಾ ಜಲಾಶಯ ಜಿಲ್ಲೆಯಲ್ಲಿ ಇದ್ದರೂ ನೀರಾವರಿ ಯೋಜನೆಗಳು ಸಾಕಾರಗೊಳ್ಳುತ್ತಿಲ್ಲ ಎಂದು ಅಳಲು ತೋಡಿಕೊಂಡರು.
ಕೂಡಲೇ ಬರಗಾಲ ಘೋಷಿಸಬೇಕು. ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಏತ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು. ಕಳಪೆ ಬೀಜ ಪೂರೈಕೆ ವಿರುದ್ಧ ಕೃಷಿ ಇಲಾಖೆ ಕ್ರಮ ಕೈಗೊಳ್ಳಬೇಕು. ಗುಡ್ಡಗಾಡು ಪ್ರದೇಶದಲ್ಲಿ ಕರಡಿ ಹಾವಳಿ ಹೆಚ್ಚಿದ್ದು, ಪರಿಹಾರ ಕ್ರಮ ಕೈಗೊಳ್ಳಬೇಕು. ಸಮೀಕ್ಷೆ ಕೈ ಬಿಟ್ಟು ಮೊದಲಿನಂತೆ ಬರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಜಿಲ್ಲಾಧ್ಯಕ್ಷ ಭೀಮಸೇನ ಕಲಿಕೇರಿ, ಉಪಾಧ್ಯಕ್ಷರಾದ ಹನುಮಂತಪ್ಪ ಇರಕಲ್‌ಗಡಾ, ಯಂಕಪ್ಪ ಕಾಸನಕಂಡಿ, ಪದಾಧಿಕಾರಿಗಳಾದ ಮದ್ದಾನಯ್ಯ ಹಿರೇಮಠ, ಕರಿಯಪ್ಪ ಕಾಸನಕಂಡಿ, ದೇವಪ್ಪ ಮುದ್ಲಾಪುರ, ನಾಗರಾಜ ಯಲಿಗಾರ ಇತರರಿದ್ದರು.