

ಕೊಪ್ಪಳ: ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಕ್ಕೆ ಮುಂದಾಗಿರುವ ಸಿಎಂ ಸಿದ್ದರಾಮಯ್ಯ ಮಂಗಳವಾರ ಬೆಂಗಳೂರಿನಲ್ಲಿ ಜಿಲ್ಲೆಯ ಕಾಂಗ್ರೆಸ್ ಶಾಸಕರೊಂದಿಗೆ ಸಭೆ ನಡೆಸಿ ಅಸಮಾಧಾನ ತಣಿಸಿದರು.
ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್, ಸಚಿವ ಶಿವರಾಜ್ ತಂಗಡಗಿ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಭೆಯಲ್ಲಿ ಭಾಗಿಯಾಗಿದ್ದರು. ಕ್ಷೇತ್ರವಾರು ಬೇಡಿಕೆಗಳು, ಸಚಿವರ ಬಗೆಗಿನ ಅಸಮಾಧಾನ ಕುರಿತು ಪ್ರಶ್ನಿಸಿದ ಸಿಎಂ, ಶಾಸಕರ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ತಿಳಿಸಿದರು.
ಸಚಿವರು ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವಂತೆ ಸೂಚಿಸಿದರೆನ್ನಲಾಗಿದೆ.
ಸಭೆ ಕುರಿತು ವಿಜಯವಾಣಿಯೊಂದಿಗೆ ಮಾತನಾಡಿದ ಶಾಸಕ ಬಸವರಾಜ ರಾಯರಡ್ಡಿ, ಸಿಎಂ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚಿಸಿದ್ದು, ಜಿಲ್ಲೆಯ ಅಭಿವೃದ್ಧಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದ್ದಾರೆ. ರಾಜಕೀಯವಾಗಿ ಸಚಿವರ ಬಗ್ಗೆ ನನಗೆ ಯಾವುದೇ ಅಸಮಾಧಾನವಿಲ್ಲ. ನಾನು ಹಿರಿಯ ಶಾಸಕನಿದ್ದು, ಸಚಿವ ತಂಗಡಿ, ಶಾಸಕ ಹಿಟ್ನಾಳ್ ಅವರೊಂದಿಗೆ ಭಿನ್ನಾಭಿಪ್ರಾಯ ಇಲ್ಲ.
ಯಲಬುರ್ಗಾ ಕೆರೆ ತುಂಬಿಸುವ ಯೋಜನೆಗೆ ಮುಂದಿನ ಬಜೆಟ್ ನಲ್ಲಿ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಜೆಜೆಎಂ ಕಾಮಗಾರಿ ಅವ್ಯವಹಾರ ತನಿಖೆಗೆ ಐಎಎಸ್ ಅಧಿಕಾರಿ ತಂಡ ನೇಮಿಸಲು ಮನವಿ ಸಲ್ಲಿಸಿರುವುದಾಗಿ ಮಾಹಿತಿ ನೀಡಿದರು.