ಕೊಪ್ಪ ತಾಲೂಕಿನಲ್ಲಿ ಶೇ.87 ಅನ್ನಭಾಗ್ಯ ಅಕ್ಕಿ ವಿತರಣೆ

kpp meeting
ಕೊಪ್ಪ ತಾಪಂನಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ಸಭೆ ನಡೆಯಿತು. ಸಮಿತಿ ಅಧ್ಯಕ್ಷ ಎಚ್.ಶಶಿಕುಮಾರ್, ಶ್ರೀಕಾಂತ್, ಡಿ.ಎಸ್.ಸಂತೋಷ್, ವಸಂತಿ, ಶೋಭಾ, ಪೂರ್ಣಿಮಾ, ಎಸ್.ವಿಜಯಕುಮಾರ್ ಇತರರಿದ್ದರು.
Published on

ಕೊಪ್ಪ: ತಾಲೂಕಿನಲ್ಲಿ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗುತ್ತಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ತಾಲೂಕು ಸಮಿತಿ ಅಧ್ಯಕ್ಷ ಎಚ್.ಶಶಿಕುಮಾರ್ ಹೇಳಿದರು.

ತಾಪಂನಲ್ಲಿ ಮಂಗಳವಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿ, ಅನ್ನಭಾಗ್ಯ ಯೋಜನೆಯ ಡಿಬಿಟಿ ಹಣದ ಬದಲು ಅಕ್ಕಿ ವಿತರಿಸುವಲ್ಲಿ ಯಾವುದಾದರು ತೊಂದರೆ ಇದೆಯೇ ಎಂದು ಪ್ರತಿ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಪರಿಶೀಲಿಸಲಾಗಿದ್ದು, ಯಾವುದೇ ತೊಡಕುಗಳಿಲ್ಲ ಎಂದು ತಿಳಿಸಿದರು.

ಆಹಾರ ನಿರೀಕ್ಷಕ ಶ್ರೀಕಾಂತ್ ಮಾತನಾಡಿ, ತಾಲೂಕಿನಲ್ಲಿ ನವೆಂಬರ್ ಹೊತ್ತಿಗೆ ಡಿಬಿಟಿ ಮೂಲಕ 80,63,780 ರೂ. ಜಮಾವಾಗಿದ್ದು, ನಂತರದ ಡಿಬಿಟಿ ಮಾಹಿತಿ ಸಿಕ್ಕಿಲ್ಲ. ಫೆಬ್ರವರಿಯಿಂದ ಅಕ್ಕಿ ವಿತರಿಸುತ್ತಿದ್ದು, ಕೆಲವು ನ್ಯಾಯಬೆಲೆ ಅಂಗಡಿಗಳಿಗೆ ಅಕ್ಕಿ ಪೂರೈಕೆ ಕೊರತೆಯಾಗಿದೆ. ಆದರೆ ಶೇ.87 ವಿತರಣೆ ಗುರಿ ತಲುಪಲಾಗಿದೆ ಎಂದರು.

ಜಿಲ್ಲೆಯಲ್ಲಿ ಕೊಪ್ಪ ತಾಲೂಕು ಹೆಚ್ಚು ಗುರಿ ತಲುಪಿದೆ. ಹೆಬ್ಬೆಟ್ಟು ಗುರುತು ಕೊಟ್ಟು ಕಡ್ಡಾಯವಾಗಿ ಪಡಿತರ ಪಡೆಯಬೇಕು. ಪಡಿತರ ಬೇಡ ಎಂದರೆ ಹೆಬ್ಬೆಟ್ಟು ಗುರುತು ಕೊಡುವುದು ಬೇಡ. ಮೂರು ತಿಂಗಳಿಗೊಮ್ಮೆ ಪಡಿತರ ಪಡೆದರೆ ಕಾರ್ಡ್ ವಜಾ ಆಗುವುದಿಲ್ಲ ಎಂದು ತಿಳಿಸಿದರು.

ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಶಕ್ತಿ, ಯುವ ನಿಧಿ, ಗೃಹ ಜ್ಯೋತಿ ಅನುಷ್ಠಾನದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆಯಲಾಯಿತು.

ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾದ ಡಿ.ಎಸ್.ಸಂತೋಷ್, ವಸಂತಿ, ಶೋಭಾ, ಪೂರ್ಣಿಮಾ, ರಾಘವೇಂದ್ರ, ವಿಜಯಾನಂದ, ಎಚ್.ಎಸ್.ಆದರ್ಶ, ನರೇಂದ್ರ ಶೆಟ್ಟಿ, ಎಸ್.ವಿಜಯಕುಮಾರ್, ಎಸ್.ಅಬ್ದುಲ್ ಖಾದರ್, ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಎಚ್.ಎಂ.ಜಯಶ್ರೀ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಂ.ಅನಸೂಯಾ, ಮೆಸ್ಕಾಂ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net