

ಕೊಳ್ಳೇಗಾಲ: ತಾಲೂಕಿನ ಮುಳ್ಳೂರು ಗ್ರಾಮದ ಉಪ್ಪಾರ ಬಡಾವಣೆಯ ನಿವಾಸಿಗಳಾದ ವೃದ್ಧ ದಂಪತಿ ವೆಂಕಟಮ್ಮ ಮತ್ತು ವೆಂಕಟೇಶ್ ಎಂಬುವರಿಗೆ ಕೊನೆಗೂ ತಾಲೂಕು ಆಡಳಿತ ವೃದ್ಧಾಪ್ಯ ವೇತನದ ಮಂಜೂರಾತಿ ಪತ್ರವನ್ನು ವಿತರಿಸಿದೆ.
ಡಿ.10 ರಂದು ‘ವಿಜಯವಾಣಿ’ ಪತ್ರಿಕೆಯಲ್ಲಿ ವೃದ್ಧಾಪ್ಯ ವೇತನದಿಂದ ವಂಚಿತವಾದ ವೃದ್ಧ ದಂಪತಿ ಎಂಬ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು. ಪರಿಣಾಮ, ಎಚ್ಚೆತ್ತ ತಹಸೀಲ್ದಾರ್ ಮಂಜುಳಾ ಅವರು ಕಾರ್ಯೋನ್ಮುಖರಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಂತರ ವೃದ್ಧಾಪ್ಯ ವೇತನಕ್ಕೆ ಬೇಕಾದ ದಾಖಲೆಗಳನ್ನು ವೆಂಕಟಮ್ಮ ಮತ್ತು ವೆಂಕಟೇಶ್ ವೃದ್ಧ ದಂಪತಿಯ ಮನೆ ಬಾಗಿಲಿಗೆ ಖುದ್ದು ಅಧಿಕಾರಿಗಳು ತೆರಳಿ ಪಡೆದಿದ್ದು, ತಹಸೀಲ್ದಾರ್ ಮಂಜುಳಾ ನಿರ್ದೇಶನದಂತೆ ತ್ವರಿತವಾಗಿ ಪಿಂಚಣಿ ಪಡೆಯಲು ಬೇಕಾದ ದಾಖಲೆಗಳ ದೋಷವನ್ನು ಸರಿಪಡಿಸಿ ಬುಧವಾರ ಪಿಂಚಣಿ ಮಂಜೂರಾತಿ ಪತ್ರವನ್ನು ಕೊಟ್ಟಿದ್ದಾರೆ.
ಇನ್ನು 2019 ರಲ್ಲಿ ಕಾವೇರಿ ಪ್ರವಾಹದಿಂದ ವಾಸವಿದ್ದ ಮನೆಯು ಹಾನಿಗೊಂಡಿತು. ನೂತನ ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ನೀಡಲಾಗುತ್ತಿತ್ತು. ಅಂತೆಯೆ, ಮನೆ ನಿರ್ಮಾಣಕ್ಕೆ ಕಳೆದ ನಾಲ್ಕು ವರ್ಷದಿಂದ ಕೇವಲ ಎರಡು ಕಂತಿನಲ್ಲಿ 2.50 ಲಕ್ಷ ರೂ. ಬಿಡುಗಡೆಯಾಗಿದ್ದು, ಉಳಿದ ಹಣ ವೃದ್ಧ ದಂಪತಿಯ ಕೈ ಸೇರದೆ ಮನೆಯ ನಿರ್ಮಾಣಕ್ಕೆ ತೊಂದರಯಾಗಿದೆ ಎಂದು ವೆಂಕಟಮ್ಮ ಅಳಲು ತೋಡಿಕೊಂಡಿದ್ದರು. ಈ ಬಗ್ಗೆ ತಹಸೀಲ್ದಾರ್ ಮಂಜುಳಾ ಮನೆ ನಿರ್ಮಾಣ ಮಾಡಿಕೊಳ್ಳುವಲ್ಲಿ ವಿಳಂಬವಾದ್ದರಿಂದ ಈ ಸಮಸ್ಯೆಯಾಗಿದೆ. ಈ ಪ್ರಕರಣದ ಬಗ್ಗೆ ನಾನೇ ಫಾಲೋ ಅಪ್ ಮಾಡುತ್ತಿದ್ದೇನೆ. ಶೀಘ್ರದಲ್ಲೇ ಉಳಿದ ಎರಡು ಕಂತಿನ ಹಣವನ್ನು ಬಿಡುಗಡೆ ಮಾಡಿಸಲು ಕ್ರಮವಹಿಸುತ್ತೇನೆ ಎಂದರು.