

ಚಾಮರಾಜನಗರ: ಕಳೆದ ಎರಡು ವಾರಗಳಿಂದ ಯಳಂದೂರು ತಾಲೂಕಿನ ಮಲ್ಲಿಗೆಹಳ್ಳಿ, ಕೆಸ್ತೂರು, ಕಟ್ನವಾಡಿ, ಕಿನಕಹಳ್ಳಿ, ಹೊನ್ನೂರು ಗ್ರಾಮಗಳ ಬಳಿ ಅಡ್ಡಾಡಿ, ಬೀದಿ ನಾಯಿ, ಹಸು, ಹಾಗೂ ಬಾಲಕನ ಮೇಲೆ ದಾಳಿ ಮಾಡಿದ್ದ ಚಿರತೆ ಕೊನೆಗೂ ಬಂಧಿಯಾಗಿದೆ. ತಾಲೂಕಿನ ಕುಂತೂರು ಗುಡ್ಡದಲ್ಲಿ ಇಟ್ಟಿದ್ದ ಬೋನಿಗೆ ಸುಮಾರು 5 ರಿಂದ 6 ವರ್ಷದ ಗಂಡು ಚಿರತೆ ಬುಧವಾರ ಬೆಳ್ಳಂಬೆಳಗ್ಗೆ ಬಿದ್ದಿದ್ದು, ಬನ್ನೇರುಘಟ್ಟ ಉದ್ಯಾನಕ್ಕೆ ಕರೆದೊಯ್ದಿದ್ದಾರೆ.
ಜು.22 ರಂದು ತಾಲೂಕಿನ ಕೆಸ್ತೂರು, ಮಲ್ಲಿಗೆಹಳ್ಳಿ ಬಳಿ ಇಲ್ಲಿನ ರೈತರಿಗೆ ಮೊದಲ ಬಾರಿಗೆ ಈ ಚಿರತೆ ಕಾಣಿಸಿಕೊಂಡಿತ್ತು. ಅಂದಿನಿಂದ ಈ ಭಾಗದಲ್ಲಿ ಆತಂಕ ಮೂಡಿಸಿತ್ತು. ನಿತ್ಯ ರಾತ್ರಿ ಗದ್ದೆ, ಪೊದೆ ಹಾಗೂ ತೋಟಗಳಲ್ಲಿ ಅಡ್ಡಾಡುತ್ತಿತ್ತು. ಬೀದಿ ನಾಯಿ, ದನಕರುಗಳ ಮೇಲೆ ದಾಳಿ ಮಾಡಿ ಬೇಟೆಯಾಡುತ್ತಿತ್ತು.
ಇಷ್ಟೆ ಅಲ್ಲದೆ ಜು. 25 ರಂದು ರಾತ್ರಿ ಮಲ್ಲಿಗೆಹಳ್ಳಿ ಗ್ರಾಮದ 8 ವರ್ಷದ ಬಾಲಕನ ಮೇಲೆ ದಾಳಿ ಮಾಡಿ ಗಾಯಗೊಳಿಸಿ ಪರಾರಿಯಾಗಿತ್ತು. ಅಂದಿನಿಂದ ಇಲ್ಲಿನ ಶಾಲಾ ಮಕ್ಕಳು ಶಾಲೆಗೆ ತೆರಳಲು ಹಿಂದೇಟು ಹಾಕುತ್ತಿದ್ದರು. ಪರಿಣಾಮ ಶಾಲೆಗೆ ತೆರಳುವ ಮಕ್ಕಳಿಗೆ ಅರಣ್ಯಇಲಾಖೆ ಸಿಬ್ಬಂದಿ ರಕ್ಷಣೆ ಕಲ್ಪಿಸಿಕೊಟ್ಟಿದ್ದರು. ನಂತರ ಚಿರತೆ ಇಲ್ಲಿಂದ ಸಮೀಪದ ಕುಂತೂರು ಗ್ರಾಮದ ಬಳಿ ಇರುವ ಗುಡ್ಡದಲ್ಲಿ ತನ್ನ ನೆಲೆಯನ್ನು ಕಂಡುಕೊಂಡಿತ್ತು.
ಚಿರತೆ ಸೆರೆಹಿಡಿಯುವ 40 ಸದಸ್ಯರ ವಿಶೇಷ ಕಾರ್ಯಪಡೆ , ಬಿಆರ್‌ಟಿ, ಕೊಳ್ಳೇಗಾಲ, ಬಫರ್ ಜೋನ್ ಹಾಗೂ ಮಲೆಮಹದೇಶ್ವರ ವನ್ಯಜೀವಿ ವಿಭಾಗದ ನೂರಾರು ಸಿಬ್ಬಂದಿ ಚಿರತೆ ಸೆರೆಗೆ ಸ್ಥಳದಲ್ಲೇ ಮೊಕ್ಕಾಂ ಹೂಡಿ ಹರಸಾಹಸ ಪಟ್ಟಿದ್ದಾರೆ. ಕಾರ್ಯಾಚರಣೆಯಲ್ಲಿ ಬಿಆರ್‌ಟಿ ಹುಲಿ ಯೋಜನೆಯ ನಿರ್ದೇಶಕಿ ದೀಪ್ ಜೆ. ಕಾಂಟ್ರ್ಯಾಕ್ಟರ್, ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಡಿಸಿಎಫ್ ಸಂತೋಷ್‌ಕುಮಾರ್, ಎಸಿಎಫ್ ಸುರೇಶ್, ಆರ್‌ಎಫ್‌ಒಗಳಾದ ಲೋಕೇಶ್‌ಮೂರ್ತಿ, ವಾಸು, ನಿತಿನ್‌ಕುಮಾರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.