

ಗದಗ: ಗದಗ ನಗರದ ರಂಗನವಾಡಿ ಗಲ್ಲಿಯ 80 ವರ್ಷದ ವೃದ್ಧೆಯೊಬ್ಬರಿಗೆ ಕರೊನಾ ಸೋಂಕು ತಗುಲಿದೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ ಕರೊನಾ ವೈರಸ್ ಸೋಂಕಿತರು ಇಲ್ಲ ಎಂದು ನಿಟ್ಟುಸಿರು ಬಿಡುತ್ತಿದ್ದವರಿಗೆ ಇದೀಗ ಗಂಟಲು ಆರತೊಡಗಿದೆ. ಮಹಾಮಾರಿ ನಮ್ಮೂರಿಗೂ ಲಗ್ಗೆಯಿಟ್ಟಿತಲ್ಲ ಎಂದು ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಇಲ್ಲಿಯವರೆಗೆ ಜಿಲ್ಲೆ ಕರೊನಾ ವೈರಸ್ ಮುಕ್ತ ಜಿಲ್ಲೆಯಾಗಿತ್ತು. ಆದರೆ, ಮಂಗಳವಾರ ನಗರದ ವೃದ್ಧೆಯೊಬ್ಬರಿಗೆ ಸೋಂಕು ಇರುವುದು ದೃಢಪಟ್ಟಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಅಧಿಕೃತವಾಗಿ ಘೊಷಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಮನೆಯಲ್ಲಿರುವ ವೃದ್ಧೆಗೆ ಸೋಂಕು ತಗುಲಿದ್ದು ಹೇಗೆ ಎಂಬ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಆದರೆ ಪ್ರಾಥಮಿಕ ಮಾಹಿತಿ ಪ್ರಕಾರ ಮಾ. 23ರಂದು ನಗರದ ಎಸ್.ಎಂ. ಕೃಷ್ಣ ನಗರದಲ್ಲಿರುವ ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆ ಕಾರ್ಯಕ್ರಮಕ್ಕೆ ವೃದ್ಧೆ ಹೋಗಿ ಊಟ ಮಾಡಿಕೊಂಡು ಬಂದಿದ್ದರು. ಅಲ್ಲದೇ, ಇದೇ ಕಾರ್ಯಕ್ರಮಕ್ಕೆ ಗೋವಾದಿಂದ 7 ಜನರು ಬಂದಿದ್ದರು. ಆದರೆ, ಅಜ್ಜಿಗೆ ಸೋಂಕು ಹೇಗೆ ಬಂದಿತು ಎಂಬುದು ಇನ್ನೂ ನಿಗೂಢವಾಗಿದ್ದು, ಈ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಕ್ವಾರಂಟೈನ್ನಲ್ಲಿ 44 ಜನರು: ಅಜ್ಜಿಯ ಮನೆಯಲ್ಲಿ ಅಜ್ಜಿ, ಅಜ್ಜಿಯ ಸಹೋದರಿ ಮತ್ತು ಸಹೋದರಿಯ ಇಬ್ಬರು ಮಕ್ಕಳು ಸೇರಿ ನಾಲ್ಕು ಜನರು ಇದ್ದಾರೆ. ಇಬ್ಬರು ಮಕ್ಕಳ ಪೈಕಿ ಒಬ್ಬರು ಆಟೋ ಚಾಲಕರು ಮತ್ತೊಬ್ಬ ಮಗ ಗದಗ ಜಿಲ್ಲಾಡಳಿತ ಭವನದ ಎದುರು ಪುಟ್ಟ ಹೋಟೆಲ್ವೊಂದನ್ನು ನಡೆಸುತ್ತಾರೆ. ಎಂ.ಎಸ್. ಕೃಷ್ಣ ನಗರದವರು ಸೇರಿ 32 ಜನರು ಅಜ್ಜಿಯ ಸಂಬಂಧಿಕರು ಹಾಗೂ 7 ಜನ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಇತರೆ ವರು ಸೇರಿ ಒಟ್ಟು 44 ಜನರನ್ನು ಸದ್ಯ ನಗರದ ಮಲ್ಲಸಮುದ್ರದಲ್ಲಿರುವ ವಸತಿ ಶಾಲೆಯಲ್ಲಿ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ. ಇವರೆಲ್ಲ ಗಂಟಲ ದ್ರವ ಹಾಗೂ ರಕ್ತದ ಮಾದರಿಯನ್ನು ತಪಾಸಣೆಗೆ ಕಳುಹಿಸಲಾಗಿದೆ. ಸದ್ಯ ಎಲ್ಲರೂ ಆರೋಗ್ಯದಿಂದ ಇದ್ದಾರೆ ಎಂದು ಸಚಿವ ಸಿ.ಸಿ. ಪಾಟೀಲ ತಿಳಿಸಿದ್ದಾರೆ. ಶಾಸಕ ಎಚ್.ಕೆ. ಪಾಟೀಲ, ಜಿಪಂ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ, ಡಿಸಿ ಎಂ.ಜಿ. ಹಿರೇಮಠ, ಎಸ್ಪಿ ಯತೀಶ ಮತ್ತಿತರರು ಇದ್ದರು.
ರಂಗನವಾಡಿ ಗಲ್ಲಿ ಸುತ್ತಮುತ್ತ ಬಿಗಿ ಪಹರೆ: ಏಪ್ರಿಲ್ ನಾಲ್ಕರಂದು ನೆಗಡಿ, ಕೆಮ್ಮು, ಉಸಿರಾಟದ ತೊಂದರೆಯಿಂದ ವೃದ್ಧೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಅದೇ ದಿನ ಪರೀಕ್ಷೆಗಾಗಿ ವೃದ್ಧೆಯ ಗಂಟಲ ದ್ರವ ಮತ್ತು ರಕ್ತದ ಮಾದರಿಯನ್ನು ಶಿವಮೊಗ್ಗ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಏಪ್ರಿಲ್ 6ರಂದು ಸೋಂಕು ಇರುವ ಕುರಿತು ವೈದ್ಯಕೀಯ ವರದಿ ಜಿಲ್ಲಾಡಳಿತದ ಕೈಗೆ ಸಿಕ್ಕಿದೆ. ವೃದ್ಧೆಯ ವೈದ್ಯಕೀಯ ವರದಿ ಕರೊನಾ ಪಾಸಿಟಿವ್ ಬಂದ ಮೇಲೆ ಮಂಗಳವಾರ ಜಿಲ್ಲಾಡಳಿತವು ವೃದ್ಧೆ ವಾಸಿಸುವ ಗಲ್ಲಿ ಹಾಗೂ ಎಸ್.ಎಂ. ಕೃಷ್ಣ ನಗರವನ್ನು ಕಂಟೇನ್ವೆುಂಟ್ ಪ್ರದೇಶ ಎಂದು ಬಿಗಿ ಪಹರೆ ನಿಯೋಜಿಸಿತು. ಸೋಂಕಿತೆ ವಾಸಿಸುವ ಪ್ರದೇಶದ 500 ಮೀ. ಸುತ್ತಳತೆಯಲ್ಲಿ ಇರುವ ಎಲ್ಲ ಮನೆಗಳ ಜನರಿಗೆ ಯಾರೂ ಹೊರಗೆ ಬರಬಾರದು ಎಂದು ಸೂಚನೆ ನೀಡಲಾಯಿತಲ್ಲದೇ, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮನೆ ಮನೆ ತೆರಳಿ ಸರ್ವೆ ಕಾರ್ಯ ಆರಂಭಿಸಿದರು. ಆದರೆ, ಸೋಂಕು ಇರುವ ಕುರಿತು ಜಿಲ್ಲಾಡಳಿತ ಅಧಿಕೃತವಾಗಿ ಘೊಷಣೆ ಮಾಡದ್ದರಿಂದ ತೀವ್ರ ಗೊಂದಲ ಉಂಟಾಯಿತು. ಸೋಂಕು ಕುರಿತಂತೆ ಜಿಲ್ಲಾಧಿಕಾರಿ ಸಹಿವುಳ್ಳ ಜಿಲ್ಲಾಡಳಿತ ಪತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಅವಳಿನಗರದ ಜನರನ್ನು ಮತ್ತಷ್ಟು ಆತಂಕಕ್ಕೆ ದೂಡಿತು. ಒಂದು ಕಡೆಗೆ ಜಿಲ್ಲಾಧಿಕಾರಿ ವೃದ್ಧೆಗೆ ಸೋಂಕು ಇಲ್ಲ ಎಂದು ಹೇಳುತ್ತಿದ್ದರು. ಇನ್ನೊಂದು ಕಡಗೆ ಜಿಲ್ಲಾಧಿಕಾರಿ ಅವರ ಸಹಿವುಳ್ಳ ಪತ್ರಗಳು ಜಾಲತಾಣಗಳಲ್ಲಿ ಹರಿದಾಡಿದ್ದರಿಂದ ಸ್ವತಃ ಜಿಲ್ಲಾಡಳಿತವೇ ಏನೂ ಮಾಡದಂತಹ ಅಸಹಾಯಕ ಸ್ಥಿತಿಯನ್ನು ತಂದುಕೊಂಡಿತು.
ಕೇಸ್ ನಂ. 166!: ಮಂಗಳವಾರ ಸಂಜೆ ವೃದ್ಧಗೆ ಕರೊನಾ ಸೋಂಕು ಇರುವ ಕುರಿತು ಪ್ರಾಥಮಿಕ ವರದಿ ಬಂದ ನಂತರ ಅವರು ವಾಸಿಸುವ ಸ್ಥಳವನ್ನು ವಶಕ್ಕೆ ಪಡೆದು ಕಂಟೇನ್ವೆುಂಟ್ ಪ್ರದೇಶ ಎಂದು ಘೊಷಿಸಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಯಿತು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದರು. ಕರೊನಾ ವೈರಸ್ ಪಾಸಿಟಿವ್ ಕುರಿತು ಆರೋಗ್ಯ ಇಲಾಖೆ ನಿತ್ಯ ಅಧಿಕೃತವಾಗಿ ಘೊಷಣೆ ಮಾಡುತ್ತಿದ್ದು, ಈ ವಿಷಯವನ್ನು ತಿಳಿಸಲು ಜಿಲ್ಲಾಧಿಕಾರಿಗೆ ಸಂಪೂರ್ಣ ಅಧಿಕಾರ ಇಲ್ಲ. ಹೀಗಾಗಿ ರಾಜ್ಯಮಟ್ಟದಲ್ಲಿ ಆರೋಗ್ಯ ಇಲಾಖೆ ಘೊಷಿಸಿದ ನಂತರ ಜಿಲ್ಲಾಡಳಿತದಿಂದ ಅಧಿಕೃತ ಮಾಹಿತಿ ನೀಡಲಾಗುತ್ತಿದೆ. ಕರೊನಾ ರೋಗಿಗಳ ರಾಜ್ಯಮಟ್ಟದ ಪಟ್ಟಿಯಲ್ಲಿ 166 ನಂಬರ್ನ ರೋಗಿಯೂ ಗದಗ ನಗರದವರಾಗಿದ್ದು, ಉಸಿರಾಟದ ತೊಂದರೆಯಿಂದ ಕರೊನಾ ಕಾಣಿಸಿಕೊಂಡಿದೆ ಎಂದು ಅವರು ಅಧಿಕೃತವಾಗಿ ತಿಳಿಸಿದರು. ಕರೊನಾ ವೈರಸ್ ವಿಷಯದಲ್ಲಿ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.
ಮನೆಬಿಟ್ಟು ಹೊರಗೆ ಬರಬೇಡಿ: ಗದಗ ಜಿಲ್ಲೆಯಲ್ಲಿ ಪ್ರಥಮ ಕರೊನಾ ಪಾಸಿಟಿವ್ ಪ್ರಕರಣ ಬಂದಿದೆ. ಜಿಲ್ಲಾಡಳಿತ, ಆರೋಗ್ಯ ಇಲಾಖೆ ಸಾಕಷ್ಟು ತಿಳಿವಳಿಕೆ ನೀಡಿ ಜಾಗೃತಿ ಮೂಡಿಸಿದರೂ ಸೋಂಕು ತಗುಲಿದ್ದು ನೋವು ತರಿಸಿದೆ ಎಂದು ಸಚಿವ ಸಿ.ಸಿ. ಪಾಟೀಲ ಹೇಳಿದರು. ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣ ಬಂದಿದ್ದರಿಂದ ಲಾಕ್ಡೌನ್ನನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ. ಮನೆಯಿಂದ ಹೊರಬಂದು ವಿನಾಕಾರಣ ಸಂಚರಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲು ಸೂಚಿಸಲಾಗಿದೆ. ಯಾರೂ ಕೂಡ ಸುಖಾಸುಮ್ಮನೆ ಹೊರಗೆ ಸಂಚರಿಸಬಾರದು. ಆದೇಶ ಉಲ್ಲಂಘಿಸಿದರೆ ಅಂಥವರ ವಿರುದ್ಧ ಮುಲಾಜಿಲ್ಲದೇ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ವರಿಷ್ಠಾಧಿಕಾರಿ ಯತೀಶ ಅವರಿಗೆ ಸೂಚನೆ ನೀಡಿದರು.
ಲಾಕ್ಡೌನ್ ಮತ್ತಷ್ಟು ಬಿಗಿ: ಸೋಂಕು ನಿಯಂತ್ರಿಸಲು ಲಾಕ್ಡೌನ್ ಮತ್ತಷ್ಟು ಬಿಗಿಗೊಳಿಸಲು ನಿರ್ಧರಿಸಿದ್ದು ಹೀಗಾಗಿ ವಾರದಲ್ಲಿ ಎರಡು ದಿನ ಕಿರಾಣಿ ಅಂಗಡಿ ಮತ್ತು ವಾರದಲ್ಲಿ ಎರಡು ದಿನ ತರಕಾರಿ ಖರೀದಿಸಲು ಅವಕಾಶ ನೀಡಲಾಗುವುದು. ಯಾವ ವಾರ ಎಂಬ ಮಾಹಿತಿಯನ್ನು ತರಕಾರಿ ಮತ್ತು ಕಿರಾಣಿ ವ್ಯಾಪಾರಸ್ಥರ ಜತೆ ರ್ಚಚಿಸಿದ ನಂತರ ಜಿಲ್ಲಾಧಿಕಾರಿ ತಿಳಿಸುತ್ತಾರೆ ಎಂದು ಸಚಿವ ಸಿ.ಸಿ. ಪಾಟೀಲ ಹೇಳಿದರು. ಕೇಂದ್ರ ಸರ್ಕಾರ ಈಗಾಗಲೇ ಜನಧನ್ ಖಾತೆಗೆ ತಲಾ 500 ರೂ. ಪರಿಹಾರ ಧನವನ್ನು ಜಮಾ ಮಾಡಿದ್ದು, ಆ ಹಣಕ್ಕಾಗಿ ಜನರು ಬ್ಯಾಂಕ್ಗಳ ಬಾಗಿಲು ತಟ್ಟಬೇಕಿಲ್ಲ. ಆಯಾ ಬ್ಯಾಂಕಿನವರು ಖಾತೆದಾರರ ಮನೆಗೆ ಬಂದು ಹಣ ನೀಡುತ್ತಾರೆ ಎಂದರು. ಜತೆಗೆ ನ್ಯಾಯಾಬೆಲೆ ಅಂಗಡಿ ಮಾಲೀಕರೆ ಫಲಾನುಭವಿಗಳ ಮನೆಗೆ ಬಂದು ಪಡಿತರ ನೀಡಲು ಸೂಚನೆ ನೀಡಲಾಗಿದೆ. ಯಾವ ನ್ಯಾಯಬೆಲೆ ಅಂಗಡಿ ಮಾಲೀಕ ಮನೆ ಮನೆಗೆ ತೆರಳಿ ಪಡಿತರ ಹಂಚುವುದಿಲ್ಲವೋ ಅಂಥವರ ನ್ಯಾಯಾಬೆಲೆ ಅಂಗಡಿ ಲೈಸೆನ್ಸ್ ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಅಲ್ಲದೇ, ಮುಖ್ಯವಾಗಿ ಕರೊನಾ ವೈರಸ್ ನಿಯಂತ್ರಿಸಲುವ ಕೆಲಸದಲ್ಲಿ ನಿರತರಾಗಿರುವ ಆರೋಗ್ಯ ಇಲಾಖೆ ಸಿಬ್ಬಂದಿ ವಾಹನ, ಅಧಿಕಾರಿಗಳ ವಾಹನಕ್ಕೆ ಪೆಟ್ರೋಲ್, ಡೀಸೆಲ್ ಬೇಕಾಗುವುದರಿಂದ ನಗರದ ಆಯ್ದ ಎರಡ್ಮೂರು ಬಂಕ್ಗಳಲ್ಲಿ ಮಾತ್ರ ಆರಂಭಿಸಲಾಗುವುದು.
49 ವರದಿ ಬರಬೇಕಿದೆ
ಗದಗ: ಜಿಲ್ಲೆಯ ಕರೊನಾ ಪಿಡುಗು ತಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಶುಕ್ರವಾರ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ. ಇದುವರೆಗೆ ಜಿಲ್ಲೆಯಲ್ಲಿ 284 ಜನರು ನಿಗಾಕ್ಕೆ ಒಳಗಾಗಿದ್ದಾರೆ. 71 ಜನರು 28 ದಿನಗಳ ನಿಗಾ ಅವಧಿ ಪೂರೈಸಿದ್ದಾರೆ. 171 ಜನರನ್ನು ಮನೆಯಲ್ಲಿಯೇ ಪ್ರತ್ಯೇಕ ನಿಗಾದಲ್ಲಿ ಇರಿಸಲಾಗಿದೆ. 42 ಜನರನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ನಿಗಾದಲ್ಲಿ ಇರಿಸಲಾಗಿದೆ. ಒಟ್ಟು 132 ಮಾದರಿಗಳನ್ನು ಪರೀಕ್ಷೆಗಾಗಿ ಸಂಗ್ರಹಿಸಲಾಗಿತ್ತು. ಇದರಲ್ಲಿ 82 ವರದಿಗಳು ನೆಗೆಟಿವ್ ಬಂದಿದ್ದು, ಉಳಿದ 49 ಪ್ರಕರಣಗಳ ವೈದ್ಯಕೀಯ ವರದಿ ಬರಬೇಕಿದೆ. ಜಿಲ್ಲೆಯಲ್ಲಿ ಒಬ್ಬರಲ್ಲಿ ಕೋವಿಡ್ 19 ವೈರಸ್ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.