ಕೊಣನೂರು ಬಳಿ ಜಾನುವಾರು ಮಾರಾಟಗಾರನಿಂದ 5.99 ಲಕ್ಷ ರೂ.ದರೋಡೆ ಮಾಡಿದ್ದ ಆರೋಪಿ ಬಂಧನ

31HSN2
Published on

ಹಾಸನ: ಅರಕಲಗೂಡು ತಾಲೂಕು ಮಲ್ಲಾಪುರ ಗ್ರಾಮದ ಜಮೀನನಲ್ಲಿದ್ದ ಶುಂಠಿ ಕಾಯುವ ಶೆಡ್‌ಗೆ ನುಗ್ಗಿ ಅಲ್ಲಿ ಮಲಗಿದ್ದ ವ್ಯಕ್ತಿಯಿಂದ 5.99 ಲಕ್ಷ ರೂ.ದೋಚಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸರು 5 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದು, ಇನ್ನೊಬ್ಬ ಆರೋಪಿ ತಲೆ ಮರೆಸಿಕೊಂಡಿದ್ದಾನೆ.

ಮೈಸೂರು ಜಿಲ್ಲೆ, ಪಿರಿಯಾಪಟ್ಟಣ ತಾಲೂಕು, ಬೆಟ್ಟದಪುರ ಹೋಬಳಿ, ಹಲಗನಹಳ್ಳಿ ಗ್ರಾಮದ ಇರ್ಫಾನ್ ಅಹಮ್ಮದ್ (40) ಬಂಧಿತ ಆರೋಪಿ. ಆತನಿಗೆ ಕೃತ್ಯದಲ್ಲಿ ಸಹಾಯ ಮಾಡಿದ್ದ ಸೈಯ್ಯದ್ ಮುಬೀನ್ 1 ಲಕ್ಷ ರೂ. ನಗದಿನೊಂದಿಗೆ ಪರಾರಿಯಾಗಿದ್ದು, ಆತನ ಬಂಧನಕ್ಕೆ ಪ್ರಯತ್ನ ಮುಂದುವರಿದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್‌ಗೌಡ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪಿರಿಯಾಪಟ್ಟಣ ತಾಲೂಕು ಹಲಗನಹಳ್ಳಿ ಗ್ರಾಮದ ಸೈಯ್ಯದ್ ಯಾಕೂಬ್ ಆಡು, ಕುರಿ, ಜಾನುವಾರ ವ್ಯಾಪಾರವನ್ನು ವೃತ್ತಿಯಾಗಿಸಿಕೊಂಡಿದ್ದರು. ಹೀಗಾಗಿ ಅವರ ಬಳಿ ಲಕ್ಷಾಂತರ ರೂ. ನಗದು ಇರಿಸಿಕೊಳ್ಳುತ್ತಿದ್ದರು. ಈ ವಿಷಯ ಅರಿತಿದ್ದ ಅದೇ ಗ್ರಾಮದ ಇರ್ಫಾನ್ ಅಹಮ್ಮದ್ ಮತ್ತು ಸೈಯ್ಯದ್ ಮುಬೀನ್ ಆತನಿಂದ ಹಣ ದೋಚುವ ಹುನ್ನಾರ ನಡೆಸಿದ್ದರು. ಸೆ. 28ರಂದು ಸೈಯ್ಯದ್ ಯಾಕೂಬ್ ರಾಮನಾಥಪುರ ಹೋಬಳಿ, ಮಲ್ಲಪುರ ಗ್ರಾಮದಲ್ಲಿನ ಶುಂಠಿ ಬೆಳೆ ಕಾಯುವ ಸಲುವಾಗಿ ನಿರ್ಮಿಸಿದ್ದ ಶೆಡ್‌ನಲ್ಲಿ ಉಳಿದುಕೊಂಡಿದ್ದರು.

ರಾತ್ರಿ ಸುಮಾರು 1.30ರ ವೇಳೆಯಲ್ಲಿ ಮುಸುಕು ಧರಿಸಿ ದಾಳಿ ಮಾಡಿದ್ದ ಇಬ್ಬರು ಆರೋಪಿಗಳು ಯಾಕೂಬ್ ಕಣ್ಣಿಗೆ ಖಾರದಪುಡಿ ಎರಚಿ, ಹಲ್ಲೆ ನಡೆಸಿ, ಆತನ ಬಳಿಯಿದ್ದ 5.99 ಲಕ್ಷ ರೂ. ಹಣ ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಯಾಕೂಬ್ ಸೆ. 28ರಂದು ಕೊಣನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಆರೋಪಿಯ ಪತ್ತೆಗೆ ವಿಶೇಷ ತಂಡ ರಚಿಸಿ ತನಿಖೆ ಆರಂಭಿಸಿದ ಪೊಲೀಸರಿಗೆ ದೂರುದಾರ ನೀಡಿದ ಮಾಹಿತಿ ಪರಿಶೀಲಿಸಿದಾಗ ಆತನೊಂದಿಗೆ ಇರುತ್ತಿದ್ದ ಇರ್ಫಾನ್ ಅಹಮ್ಮದ್‌ನ ಚಟುವಟಿಕೆಗಳ ಮೇಲೆ ಅನುಮಾ ಮೂಡಿತು. ಆತನ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಆತ ಘಟನೆ ನಡೆದ ನಂತರ ಗ್ರಾಮಕ್ಕೆ ಹಿಂದಿರುಗಿಲ್ಲ ಎನ್ನುವುದು ಗೊತ್ತಾಯಿತು. ಹೀಗಾಗಿ ಆತನನ್ನು ಅ.30ರಂದು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾವೇ ಹಣ ದೋಚಿರುವುದಕ್ಕಾಗಿ ಒಪ್ಪಿಕೊಂಡಿದ್ದಲ್ಲದೆ, 5 ಲಕ್ಷ ರೂ. ವಶಕ್ಕೆ ನೀಡಿದನು. ಇನ್ನೂ 1 ಲಕ್ಷ ರೂ. ತನ್ನ ಸಹಚರನ ಬಳಿಯಿದೆ ಎಂದು ಆತ ಮಾಹಿತಿ ನೀಡಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಎಸ್‌ಪಿ ತಿಳಿಸಿದರು.

ಪ್ರಕರಣವನ್ನು ಭೇದಿಸಲು ಶ್ರಮಿಸಿದ ಹೊಳೆನರಸೀಪುರ ಉಪ ವಿಭಾಗದ ಡಿವೈಎಸ್‌ಪಿ ಲಕ್ಷ್ಮೇಗೌಡ, ಅರಕಲಗೂಡು ವೃತ್ತ ನಿರೀಕ್ಷಕ ಸತ್ಯನಾರಾಯಣ್, ಪಿಎಸ್‌ಐ ಸಾಗರ್, ಸಿಬ್ಬಂದಿ ಪ್ರಕಾಶ್, ರಾಜಶೆಟ್ಟಿ, ಸುರೇಶ್, ಸಣ್ಣೇಗೌಡ, ಶಿವಕುಮಾರ, ನಂದೀಶ, ನವೀನ್ ಕುಮಾರ, ಮಹೇಶ್, ಚೇತನ್ ಕುಮಾರ್, ಜಿಲ್ಲಾ ಪೊಲೀಸ್ ಕಚೇರಿ ತಾಂತ್ರಿಕ ವಿಭಾಗದ ಹೆಡ್ ಕಾನ್‌ಸ್ಟೇಬಲ್ ಪೀರ್‌ಖಾನ್, ಚಾಲಕ ಜಗನ್ನಾಥ್, ಹೇಮಚಂದ್ರ ಅವರ ಕಾರ್ಯವನ್ನು ಶ್ಲಾಘಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್‌ಗೌಡ ಪ್ರಶಂಸಾ ಪತ್ರನೀಡಿ ಅಭಿನಂದಿಸಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ನಂದಿನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net