

ಪವನ ದೇಶಪಾಂಡೆ ಕೊಡೇಕಲ್: ಗ್ರಾಮದ ಬಸ್ ನಿಲ್ದಾಣಕ್ಕೆ ಮೂಲ ಸೌಲಭ್ಯಗಳಿಲ್ಲದೆ ಪ್ರಯಾಣಿಕರು ನಿತ್ಯ ತೊಂದರೆ ಅನುಭವಿಸಬೇಕಾಗಿದೆ.
ಹೋಬಳಿ ಕೇಂದ್ರವಾಗಿರುವ ಕೊಡೇಕಲ್‌ಗೆ ಸುತ್ತಲಿನ ಹಳ್ಳಿ ಜನರು ನಿತ್ಯ ನೂರಾರು ಸಂಖ್ಯೆಯಲ್ಲಿ ಬರುತ್ತಾರೆ. ಆದರೆ ಬಸ್ ನಿಲ್ದಾಣದಲ್ಲಿ ಮೂಲಸೌಲಭ್ಯವಿಲ್ಲದೆ ಪರದಾಡುತ್ತಿದ್ದಾರೆ.
ನಿಲ್ದಾಣ ಕೇವಲ ನಾಮ್‌ಕೇವಾಸ್ತೆ ಎಂಬಂತಿದ್ದು, ಸಾರಿಗೆ ನಿಯಂತ್ರಕರು ಬಾರದೆ ಎಷ್ಟೋ ವರ್ಷಗಳಾಗಿದೆ. ಕೇವಲ ಪುಸ್ತಕದಲ್ಲಿ ಮಾತ್ರ ನಿಯಂತ್ರಕರ ನೇಮಕವಿದೆ. ಆದರೆ ಕರ್ತವ್ಯಕ್ಕೆ ಹಾಜರಾಗಿರುವುದನ್ನು ಯಾರೂ ಈವರೆಗೆ ಕಂಡಿಲ್ಲ.
ಆವರಣದ ಎಲ್ಲೆಂದರಲ್ಲಿ ಬಿದ್ದಿರುವ ಕಸ-ಕಡ್ಡಿ, ತ್ಯಾಜ್ಯ ವಸ್ತುಗಳು, ಗುಟ್ಕಾ ಪ್ಯಾಕೆಟ್ ಇತರ ಬೇಡವಾದ ವಸ್ತುಗಳು ಪರಿಸರ ಹಾಳು ಮಾಡಿವೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಮಹಿಳೆಯರಿಗಾಗಿ ನಿರ್ಮಿಸಿರುವ ಶೌಚಗೃಹ ಕೆಲ ತಿಂಗಳಿಂದ ಉಪಯೋಗಕ್ಕೆ ಬಾರದಂತಾಗಿದೆ. ಪುರುಷರು ಮೂತ್ರ ಶೌಚಕ್ಕಾಗಿ ಬಯಲನ್ನೆ ಆಶ್ರಯಿಸುವಂಥ ಪರಿಸ್ಥಿತಿ ಇದೆ.
ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಉಚಿತ ಪ್ರಯಾಣದ ಗ್ಯಾರಂಟಿಯಿಂದ ನಿಲ್ದಾಣ ಪ್ರಯಾಣಿಕರಿಂದ ತುಂಬಿರುತ್ತದೆ. ಆದರೆ ಸೌಲಭ್ಯ ಕೊರತೆಯಿಂದ ಪ್ರಯಾಣಿಕರು ಸಾರಿಗೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಹೀಗಾಗಿ ಕೂಡಲೇ ಅಧಿಕಾರಿಗಳು ಗಮನಹರಿಸಿ ನಿಲ್ದಾಣಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಬೇಕಿದೆ.
ಬಸ್ ನಿಲ್ದಾಣದಲ್ಲಿ ಮೂಲಸೌಲಭ್ಯಗಳಿಲ್ಲದೆ ಪ್ರಯಾಣಿಕರು ಮತ್ತು ಚಾಲಕ-ನಿರ್ವಾಹಕರು ತೊಂದರೆ ಅನುಭವಿಸುತ್ತಿದ್ದಾರೆ. ಸಾರಿಗೆ ಇಲಾಖೆ ಅಧಿಕಾರಿಗಳು ಗಮನಹರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು.
| ಬಸವರಾಜ ಕೊಂಡಗುಳಿ
ಕರವೇ ವಲಯ ಉಪಾಧ್ಯಕ್ಷ (ನಾರಾಯಣಗೌಡ ಬಣ)
ಕೊಡೇಕಲ್ ಬಸ್ ನಿಲ್ದಾಣದ ಅವ್ಯವಸ್ಥೆ ಕುರಿತು ಮಾಹಿತಿ ಇದ್ದು, ಸದ್ಯ ಕೆಂಭಾವಿ ನಿಲ್ದಾಣದ ಸ್ವಚ್ಛತೆ ಮತ್ತು ದುರಸ್ತಿ ಕಾರ್ಯ ನಡೆಯುತ್ತಿದೆ. ಇದು ಪೂರ್ಣಗೊಂಡ ನಂತರ ಕೊಡೇಕಲ್ ನಿಲ್ದಾಣದ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗುವುದು.
| ಸುನೀಲಕುಮಾರ ಚಂದರಗಿ
ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿ