

ಗುಂಡ್ಲುಪೇಟೆ : ತಾಲೂಕಿನ ಕೊಡಸೋಗೆ ಗ್ರಾಮದ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಗೆ ಈ ಬಾರಿ ಕೇಂದ್ರ ಸರ್ಕಾರದ ಮಾನ್ಯತೆ ದೊರಕಿರುವುದರಿಂದ ಆಸ್ಪತ್ರೆಗೆ ಬರುವ ಸವಲತ್ತುಗಳು ಹೆಚ್ಚಾಗುವ ಜತೆಗೆ ರೋಗಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.
ಈ ಬಾರಿ ಕೇಂದ್ರ ಸರ್ಕಾರ ಜಿಲ್ಲೆಯ ಕೊಡಸೋಗೆ, ಶಿವಮೊಗ್ಗ ಜಿಲ್ಲೆಯ ಸಿ.ಡಿ. ನಗರ, ಬೆಂಗಳೂರಿನ ಸುಬೇದಾರ್ ಪಾಳ್ಯ, ಗುಲ್ಬರ್ಗಾದ ಬೆಳಮಗಿ, ಚಿಕ್ಕಬಳ್ಳಾಪುರದ ಇ-ತಿಮ್ಮಸಂದ್ರ ಹಾಗೂ ಇರಗಮಪಲ್ಲಿಯ ಆಸ್ಪತ್ರೆಗಳು ಉತ್ತಮ ಸೇವೆ ಒದಗಿಸುತ್ತಿರುವ ಬಗ್ಗೆ ಕೇಂದ್ರ ಸರ್ಕಾರದಡಿ ಕಾರ್ಯ ನಿರ್ವಹಿಸುತ್ತಿರುವ ರಾಷ್ಟ್ರೀಯ ಆರೋಗ್ಯ ಸಂಪನ್ಮೂಲ ಕೇಂದ್ರ(ಎನ್‌ಎಚ್‌ಎಸ್‌ಆರ್‌ಸಿ)ದ ರಾಷ್ಟ್ರೀಯ ಪರಿಶೀಲನಾ ಸಮಿತಿಯು ನೀಡಿದ್ದ ವರದಿ ಹಿನ್ನೆಲೆಯಲ್ಲಿ ಈ ಬಾರಿ ರಾಷ್ಟ್ರೀಯ ಮಟ್ಟದ ಮಾನ್ಯತೆ ದೊರಕಿದೆ.
ಐವತ್ತು ವರ್ಷಗಳಿಂದ ಗ್ರಾಮದಲ್ಲಿದ್ದ ಆಯುರ್ವೇದ ಆಸ್ಪತ್ರೆಯನ್ನು ಹನ್ನೆರಡು ವರ್ಷಗಳ ಹಿಂದೆ ಪ್ರಾಥಮಿಕ ಆಸ್ಪತ್ರೆಯಾಗಿ ಪರಿವರ್ತಿಸಿ ಗ್ರಾಮದ ಹೊರವಲಯದಲ್ಲಿ ಒಂದು ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡವನ್ನು ನಿರ್ಮಿಸಲಾಗಿದೆ. ಪ್ರಯೋಗಾಲಯ ಸೇರಿದಂತೆ ಎಲ್ಲಾ ಸವಲತ್ತುಗಳನ್ನು ಒದಗಿಸಲಾಗಿದ್ದು, ಉತ್ತಮ ವೈದ್ಯಕೀಯ ಸೌಕರ್ಯಗಳು ಹಾಗೂ ಅಗತ್ಯವಾದ ಸಿಬ್ಬಂದಿಯನ್ನು ನಿಯೋಜಿಸಿದ ಪರಿಣಾಮ ಆಸ್ಪತ್ರೆಗೆ ಕೇಂದ್ರ ಸರ್ಕಾರದ ಮಾನ್ಯತೆ ದೊರಕಲು ಸಾಧ್ಯವಾಗಿದೆ ಎಂದು ವೈದ್ಯ ಡಾ.ಹರೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಏನೇನು ಲಾಭ: ಈ ಮಾನ್ಯತೆ ಪಡೆದ ಆಸ್ಪತ್ರೆಯ ಸಮಗ್ರ ಅಭಿವೃದ್ದಿಗೆ ಕೇಂದ್ರ ಸರ್ಕಾರವು ಪ್ರತಿ ವರ್ಷವೂ 3 ಲಕ್ಷ ರೂ.ಗಳನ್ನು ಮೂರು ವರ್ಷಗಳವರೆಗೆ ನೀಡಲಿದೆ. ಅಲ್ಲದೆ ಹೃದ್ರೋಗ, ಅರ್ಥರೈಟಿಸ್ ಮುಂತಾದ ರೋಗಗಳಿಗೆ ಹೆಚ್ಚುವರಿ ಔಷಧಗಳನ್ನು ನೀಡಲಾಗುತ್ತದೆ. ಇದರಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ಗುಣಮಟ್ಟದ ವೈದ್ಯಕೀಯ ಸೌಲಭ್ಯ ದೊರಕುವ ಜತೆಗೆ ಹೆಚ್ಚಿನ ಸವಲತ್ತುಗಳು ದೊರಕುತ್ತವೆ.
ಡಾ.ಹರೀಶ್ ಕುಮಾರ್ ಶ್ರಮ: ಜಿಲ್ಲೆಯ ತೆರಕಣಾಂಬಿ ಮತ್ತು ಕೊಡಸೋಗೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಈ ರಾಷ್ಟ್ರ ಮಟ್ಟದ ಮಾನ್ಯತೆ ಪಡೆದುಕೊಂಡಿವೆ. 2023ರಲ್ಲಿ ಕೊಡಸೋಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಡಾ.ಹರೀಶ್ ಕುಮಾರ್ ತೆರಕಣಾಂಬಿ ಆಸ್ಪತ್ರೆಯ ಹೆಚ್ಚುವರಿ ಹೊಣೆ ಹೊತ್ತಿದ್ದಾಗ ಈ ಮಾನ್ಯತೆ ದೊರಕಿತ್ತು. ಸದ್ಯ ಅವರೇ ಕೊಡಸೋಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರಾಗಿದ್ದು ಎರಡೂ ಆಸ್ಪತ್ರೆಗಳಿಗೆ ಮಾನ್ಯತೆ ದೊರಕಿಸಲು ತಮ್ಮ ತಂಡದೊಡನೆ ಶ್ರಮಿಸಿದ್ದಾರೆ.
ಹಿಂದಿನಿಂದಲೂ ಗ್ರಾಮದ ಆಸ್ಪತ್ರೆಯು ಸುತ್ತಲಿನ ಹತ್ತಾರು ಹಳ್ಳಿಗಳ ರೋಗಿಗಳ ಪಾಲಿಗೆ ಸಂಜೀವಿನಿಯಾಗಿದೆ. ಸದ್ಯ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಹರೀಶ್ ಕುಮಾರ್ ಹಾಗೂ ಸಿಬ್ಬಂದಿ ಹೆಚ್ಚಿನ ಕಾಳಜಿಯಿಂದ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ. ಗ್ರಾಮದ ಆಸ್ಪತ್ರೆಯಲ್ಲಿ ಲಭ್ಯವಿರುವ ಎಲ್ಲ್ಲ ಸವಲತ್ತುಗಳು ರೋಗಿಗಳಿಗೆ ತಲುಪಿಸುವಂತೆ ಮಾಡುತ್ತಿರುವುದರಿಂದ ರಾಷ್ಟ್ರೀಯ ಮಟ್ಟದ ಮಾನ್ಯತೆ ದೊರಕಿದೆ. ಈ ಸೇವೆಯು ದಿನದ 24 ಗಂಟೆಯೂ ರೋಗಿಗಳಿಗೆ ಸಿಗುವಂತೆ ಮಾಡಬೇಕು.
ಸಿಎಸ್‌ಪಿ ಶಿವಪ್ರಕಾಶ್
ಕೊಡಸೋಗೆ ಗ್ರಾಮಸ್ಥ
-----------
ಕೋಟ್..
ಕೇಂದ್ರ ಸರ್ಕಾರದ ಮಾನದಂಡಗಳನುಸಾರ ಕೊಡಸೋಗೆ ಆಸ್ಪತ್ರೆಯಲ್ಲಿ ತ್ಯಾಜ್ಯ ನಿರ್ವಹಣೆ ಸೇರಿದಂತೆ ರೋಗಿಗಳಿಗೆ ದೊರಕುತ್ತಿರುವ ಚಿಕಿತ್ಸೆಗಳನ್ನು ಪರಿಗಣಿಸಿದ ಪರಿಶೀಲನಾ ಸಮಿತಿಯು ಈ ರಾಷ್ಟ್ರೀಯ ಮಾನ್ಯತೆ ದೊರಕಿದೆ. ಇದರಿಂದ ಆಸ್ಪತ್ರೆಗೆ ಇನ್ನೂ ಹೆಚ್ಚಿನ ಅನುದಾನ ಬರುವುದರಿಂದ ರೋಗಿಗಳಿಗೆ ಇನ್ನೂ ಹೆಚ್ಚಿನ ಗುಣಮಟ್ಟದ ಚಿಕಿತ್ಸೆ ದೊರಕಲಿದೆ.
ಡಾ.ಚಿದಂಬರಂ
ಜಿಲ್ಲಾ ಆರೋಗ್ಯಾಧಿಕಾರಿ