ಕೊಡಗು ಸೈನಿಕ ಶಾಲೆ ತಂಡಕ್ಕೆ ಅದ್ದೂರಿ ಸ್ವಾಗತ

19mdk03
Published on

ಕುಶಾಲನಗರ: ರಾಷ್ಟ್ರಮಟ್ಟದ ಅಂತರ ಸೈನಿಕ ಶಾಲೆಗಳ ಫುಟ್ಬಾಲ್ ಪಂದ್ಯಾವಳಿಯ ಜೂನಿಯರ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದ ಕೂಡಿಗೆಯ ಕೊಡಗು ಸೈನಿಕ ಶಾಲೆ ತಂಡವನ್ನು ಗುರುವಾರ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಇದಕ್ಕೂ ಮೊದಲು ನಡೆದ ವಿಜಯೋತ್ಸವದ ಮೆರವಣಿಗೆಗೆ ಕೊಡಗು ಸೈನಿಕ ಶಾಲೆ ಪ್ರಾಂಶುಪಾಲ ಕರ್ನಲ್ ಅಮರ್ ಜೀತ್‌ಸಿಂಗ್ ವಿದ್ಯಾರ್ಥಿಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಿದರು.

ಕೂಡಿಗೆ ಅಂಜಲಾ ವಿದ್ಯಾನಿಕೇತನ ಶಾಲೆಯ ಮುಂಭಾಗದಿಂದ ಕೂಡಿಗೆಯ ಪ್ರಮುಖ ಬೀದಿಗಳಲ್ಲಿ ಹೂವು ಗಳಿಂದ ಅಲಂಕಾರಗೊಂಡ ವಾಹನದ ಮೂಲಕ ವಿಜಯೋತ್ಸವದ ಮೆರವಣಿಗೆ ಸಾಗಿ ಸೈನಿಕ ಶಾಲೆ ತಲುಪಿತು.

ಮೆರವಣಿಗೆ ಸಂದರ್ಭದಲ್ಲಿ ಶಾಲೆಯ 600 ವಿದ್ಯಾರ್ಥಿಗಳು, ಉಪ ಪ್ರಾಂಶುಪಾಲ ಸೇರಿದಂತೆ ಉಪನ್ಯಾಸಕ ವೃಂದ, ಬೋಧಕ ವರ್ಗ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು. ಕೂಡಿಗೆಯ ಸಾರ್ವಜನಿಕರು, ಅಂಗಡಿ ಮಾಲೀಕರು ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ ವಿಜಯೋತ್ಸವದ ಸಂದರ್ಭದಲ್ಲಿ ಅಲಂಕೃತ ವಾಹನದಲ್ಲಿದ್ದ ವಿದ್ಯಾರ್ಥಿಗಳಿಗೆ ಹೂವಿನ ಹಾರಗಳನ್ನು ಹಾಕಿ ಗೌರವಿಸಿದರು.

ಫುಟ್ಬಾಲ್ ಪಂದ್ಯಾವಳಿ ಈಚೆಗೆ ಒರಿಸ್ಸಾ ರಾಜ್ಯದ ಭುವನೇಶ್ವರಿ ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆದಿತ್ತು. ಈ ರಾಷ್ಟ್ರೀಯ ಫುಟ್ಬಾಲ್ ಪಂದ್ಯದಲ್ಲಿ ಸೈನಿಕ ಶಾಲೆಯ ಜೂನಿಯರ್ ವಿಭಾಗದ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದುಕೊಂಡು ಮುಂದಿನ ಹಂತಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ.

ಫುಟ್ಬಾಲ್ ಪಂದ್ಯಾವಳಿಯಲ್ಲಿ ಕೊಡಗು ಸೈನಿಕ ಶಾಲೆಯ ಜೂನಿಯರ್, ಸಬ್ ಜೂನಿಯರ್ ಹಾಗೂ ಬಾಲಕಿಯರ ತಂಡಗಳ ಒಟ್ಟು 48. ವಿದ್ಯಾರ್ಥಿಗಳು, 3. ತಂಡವಾಗಿ ಭಾಗವಹಿಸಿದ್ದರು. ಇದರಲ್ಲಿ ಬಾಲಕರ ಜೂನಿಯರ್ ತಂಡವು ರಾಷ್ಟ್ರಮಟ್ಟ ಸೈನಿಕ ಶಾಲೆ ವಿಭಾಗದಲ್ಲಿ ಇದೇ ಪ್ರಥಮ ಬಾರಿಗೆ ದ್ವಿತೀಯ ಸ್ಥಾನವನ್ನು ಗಳಿಸಿ ಪಂದ್ಯಾವಳಿಯಲ್ಲಿ ತಂಡದ ಪ್ರಶಸ್ತಿ ಮತ್ತು ಟ್ರೋಫಿ ತನ್ನದಾಗಿಸಿಕೊಂಡಿತು. ತಂಡದ ತರಬೇತುದಾರರಾಗಿ ಶೇಖ್ ಅಜೀಜ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net