ಕೊಡಗು ವಿವಿಗೆ ಯುಜಿಸಿ ಮಾನ್ಯತೆ

Kodagu University is recognized by UGC
ಕೊಡಗು ವಿವಿ.
Published on

ಕುಶಾಲನಗರ: ಕೊಡಗು ವಿಶ್ವವಿದ್ಯಾಲಯಕ್ಕೆ ಪದವಿಗಳನ್ನು ನೀಡಲು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ)ದಿಂದ ಅಧಿಕೃತ ಮಾನ್ಯತೆ ದೊರೆತಿದೆ.

2022-23ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರ ಕೊಡಗಿನಲ್ಲಿ ನೂತನವಾಗಿ ಕೊಡಗು ವಿಶ್ವವಿದ್ಯಾಲಯ ಸ್ಥಾಪಿಸಿದ್ದು, ಕಳೆದ ಐದು ತಿಂಗಳಿನಿಂದ ಕಾರ್ಯನಿರ್ವಹಿಸುತ್ತಿದೆ. ಇದೀಗ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ತನ್ನ ಅಧಿನಿಯಮ 1956ರ ಪ್ರಕರಣ 2 (ಎಫ್) ಅಡಿಯಲ್ಲಿ ಕೊಡಗು ವಿವಿಗೆ 2023ರ ಜುಲೈ 25ರಂದು ಮಾನ್ಯತೆ ನೀಡಿ ಪ್ರಕಟಣೆ ಹೊರಡಿಸಿದೆ.

ಯುಜಿಸಿ ಮಾನ್ಯತೆ ಸಿಕ್ಕಿರುವುದರಿಂದ ಕೊಡಗು ವಿವಿಯು ಯುಜಿಸಿ ಅಡಿಯಲ್ಲಿ ಬರುವ ವಿವಿಧ ಪದವಿಗಳನ್ನು ನೀಡಲು ಅಧಿಕೃತ ಮಾನ್ಯತೆ ಪಡೆದಂತಾಗಿದೆ ಎಂದು ವಿವಿ ಕುಲಪತಿ ಪ್ರೊ.ಅಶೋಕ.ಸಂ.ಆಲೂರ ತಿಳಿಸಿದ್ದಾರೆ.
ಕೊಡಗು ವಿವಿ ಸ್ಥಾಪನೆ ಹಿನ್ನೆಲೆ: ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ವಿಶ್ವವಿದ್ಯಾಲಯಗಳಿರುವಂತೆ ಕೊಡಗಿಗೂ ಒಂದು ಪ್ರತ್ಯೇಕ ವಿವಿ ಬೇಕೆಂಬ ಕೂಗು ಹಲವು ವರ್ಷಗಳಿಂದ ಕೇಳಿ ಬರುತ್ತಿತ್ತು. ಕೊಡಗು ಜಿಲ್ಲೆಯ ಚಿಕ್ಕಅಳುವಾರದ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ ವಿವಿ ಸ್ಥಾಪನೆಯಾಗಬೇಕೆಂದು ಒತ್ತಾಯಿಸಲಾಗಿತ್ತು. ಇದಕ್ಕೆ ಸ್ಪಂದಿಸಿದ್ದ ಕರ್ನಾಟಕ ಸರ್ಕಾರವು 2022ರ ಅಕ್ಟೋಬರ್ ತಿಂಗಳಲ್ಲಿ ಮಂಡಿಸಿದ ಬಜೆಟ್‌ನಲ್ಲಿ ನೂತನ 7 ವಿಶ್ವವಿದ್ಯಾಲಯಗಳು ಸೇರಿದಂತೆ ಕೊಡಗು ವಿಶ್ವವಿದ್ಯಾಲಯ ಸ್ಥಾಪನೆಯ ಘೋಷಣೆ ಮಾಡಿತ್ತು.
ಬಳಿಕ 2023ರ ಮಾರ್ಚ್‌ನಲ್ಲಿ ನೂತನ ಕೊಡಗು ವಿವಿಯನ್ನು ಉದ್ಘಾಟಿಸಲಾಯಿತು. ಪ್ರಥಮ ಕುಲಪತಿಯಾಗಿ ಪ್ರೊ.ಅಶೋಕ.ಸಂ.ಆಲೂರ ಅವರು ಮಾರ್ಚ್ 21 ರಂದು ಹಾಗೂ ಡಾ. ಸೀನಪ್ಪ ಅವರು ಮಾರ್ಚ್ 29 ರಂದು ಕುಲಸಚಿವರಾಗಿ (ಮೌಲ್ಯಮಾಪನ) ಅಧಿಕಾರ ವಹಿಸಿಕೊಂಡರು. ರಾಜ್ಯಪಾಲ ಹಾಗೂ ಕೊಡಗು ವಿವಿ ಕುಲಾಧಿಪತಿಗಳೂ ಆದ ಥಾವರ್‌ಚಂದ್ ಗೆಹ್ಲೋಟ್ ಅವರು ಕೊಡಗು ವಿವಿ ವೆಬ್‌ಸೈಟ್ ಝ್ಠ.ಚ್ಟ್ಞಠಿ.ಜಟ.ಜ್ಞಿ ಅನ್ನು ಮೇ ತಿಂಗಳಿನಲ್ಲಿ ರಾಜಭವನದಲ್ಲಿ ಅನಾವರಣಗೊಳಿಸಿದ್ದರು.
‘ಕೊಡಗು ವಿಶ್ವವಿದ್ಯಾಲಯದ ಅಧೀನದಲ್ಲಿರುವ ಸಂಯೋಜಿತ ಮಹಾವಿದ್ಯಾಲಯಗಳು ಮತ್ತು ಘಟಕ ಮಹಾವಿದ್ಯಾಲಯದ ವತಿಯಿಂದ 2023-24ನೇ ಶೈಕ್ಷಣಿಕ ಸಾಲಿನ ಪದವಿ ಪ್ರವೇಶಾತಿ ಪ್ರಕ್ರಿಯೆ ಈಗಾಗಲೇ ಪ್ರಾರಂಭಗೊಡಿದೆ. ಇದೀಗ ಯುಜಿಸಿಯಿಂದ ಮಾನ್ಯತೆ ದೊರೆತಿರುವುದು’ ಸಂತಸ ತಂದಿದೆ ಎಂದು ಪ್ರೊ. ಅಶೋಕ.ಸಂ.ಆಲೂರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net