

ಕುಶಾಲನಗರ: ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರವು ನೂತನ ಕೊಡಗು ವಿಶ್ವವಿದ್ಯಾಲಯವಾಗಿ ಅಧಿಕೃತವಾಗಿ ಘೋಷಣೆಯಾಗಿರುವುದು ಸಂತಸ ತಂದಿದೆ. ಇದರಿಂದ ಕೇವಲ ಕೊಡಗು ಜಿಲ್ಲೆಗಷ್ಟೇ ಅಲ್ಲದೆ ಸುತ್ತಮುತ್ತಲಿನ ಜಿಲ್ಲೆಗಳ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದುಕೊಳ್ಳಲು ಅನುಕೂಲವಾಗಲಿದೆ ಎಂದು ಮಡಿಕೇರಿ ಎಫ್‌ಎಂಕೆಎಂಸಿ ಕಾಲೇಜು ಪ್ರಾಂಶುಪಾಲ ಡಾ.ಸಿ.ಜಗತ್ ತಿಮ್ಮಯ್ಯ ಹೇಳಿದರು.
ಚಿಕ್ಕ ಅಳುವಾರ ಮಂಗಳೂರು ವಿಶ್ವವಿದ್ಯಾಲಯದ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದ ವಿಜ್ಞಾನ ಸಂಕೀರ್ಣದ ಒಳಾಂಗಣದಲ್ಲಿ 2022-23ನೇ ಶೈಕ್ಷಣಿಕ ಸಾಲಿನ ಅಂಗವಾಗಿ ಹಮ್ಮಿಕೊಂಡಿದ್ದ ಕ್ಯಾಂಪಸ್ ನೋಡ ಬನ್ನಿ-ಅಡ್ಮಿಷನ್ 2022 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೂರ ಪ್ರದೇಶಗಳಿಗೆ ಹೋಗಿ ಉನ್ನತ ವ್ಯಾಸಂಗ ಮಾಡಬೇಕಾಗಿದ್ದ ಪರಿಸ್ಥಿತಿ ಈಗಿಲ್ಲ. ಬಹಳ ಹತ್ತಿರ ಪ್ರದೇಶದಲ್ಲೇ ಉನ್ನತ ಶಿಕ್ಷಣ ಪಡೆದುಕೊಳ್ಳುವುದಕ್ಕೆ ಅವಕಾಶವಿದೆ. ರಾಜ್ಯ ಸರ್ಕಾರ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೊಡಗಿನಲ್ಲಿ ವಿಶ್ವವಿದ್ಯಾಲಯ ಪ್ರಾರಂಭಿಸಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಉನ್ನತ ಶಿಕ್ಷಣ ಎಲ್ಲೆಡೆ ದೊರಕುವಂತಾಗಬೇಕು. ಶಿಕ್ಷಣವು ಸಾಮಾಜಿಕ ಸಂಸ್ಥೆಯಾಗಿದೆ. ಅದರ ಮೂಲಕ ಸಮಾಜವು ತನ್ನ ಸದಸ್ಯರಿಗೆ ಜ್ಞಾನ, ಸಂಗತಿಗಳು, ಉದ್ಯೋಗ ಕೌಶಲ ಮತ್ತು ಮೌಲ್ಯಗಳನ್ನು ಒದಗಿಸುತ್ತದೆ. ಶಿಕ್ಷಣದ ಪ್ರಮುಖ ಪಾತ್ರವೆಂದರೆ ಅದು ವೈಯಕ್ತಿಕ ಜೀವನವನ್ನು ಸುಧಾರಿಸುತ್ತದೆ. ಈ ಶೈಕ್ಷಣಿಕ ಸಾಲಿನಲ್ಲಿ ಕೊಡವ ಪೀಠ ಸ್ಥಾಪನೆಯಾಗಿರುವುದು ಕೂಡ ಕೊಡವ ಭಾಷೆ, ಸಂಸ್ಕೃತಿಗೂ ಹೆಚ್ಚು ಪ್ರೋತ್ಸಾಹ ದೊರೆತಂತಾಗಿದೆ. ಮೂಲ ಸೌಲಭ್ಯಗಳನ್ನು ಹೊಂದಿರುವ ಈ ಸಂಸ್ಥೆಯು ಉನ್ನತ ಹಂತಕ್ಕೆ ಅಭಿವೃದ್ಧಿ ಹೊಂದಲಿ ಎಂದು ಆಶಿಸಿದರು.
ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಕೆ.ಸಿ.ದಯಾನಂದ್ ಮಾತನಾಡಿ, ಶಿಕ್ಷಣವು ಪ್ರಪಂಚದ ಸಂಪೂರ್ಣ ದೃಷ್ಟಿಕೋನವನ್ನು ಬದಲಾಯಿಸಬಹುದಾದ ಅತ್ಯಂತ ಶಕ್ತಿಶಾಲಿ ಅಸ್ತ್ರವಾಗಿದೆ. ಶಿಕ್ಷಣದಿಂದ ವ್ಯಕ್ತಿ ಉತ್ತಮ ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಬಹುದು. ಶಿಕ್ಷಣವು ನಮ್ಮ ಮನಸ್ಥಿತಿಯನ್ನು ಸಕಾರಾತ್ಮಕ ದಿಕ್ಕಿನಲ್ಲಿ ರೂಪಿಸಲು ಸಹಾಯ ಮಾಡುತ್ತದೆ. ಮತ್ತು ಈ ಮನಸ್ಥಿತಿಯೊಂದಿಗೆ ಜನರು ತಮ್ಮ ಜೀವನವನ್ನು ಉತ್ತಮಗೊಳಿಸಬಹುದು ಎಂದು ತಿಳಿಸಿದರು.
ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದ ಪ್ರಭಾರ ನಿರ್ದೇಶಕ ಡಾ.ಕೆ.ಕೆ.ಧರ್ಮಪ್ಪ ಮಾತನಾಡಿ, ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರವು 9 ವರ್ಷಗಳಿಂದ ಕೊಡಗು, ದಕ್ಷಿಣ ಕನ್ನಡ, ಮೈಸೂರು, ಹಾಸನ ಹಾಗೂ ರಾಜ್ಯದ ಇನ್ನಿತರ ಜಿಲ್ಲೆಗಳ ವಿದ್ಯಾರ್ಥಿಗಳು ಹಾಗೂ ಹೊರ ರಾಜ್ಯಗಳ ವಿದ್ಯಾರ್ಥಿಗಳಿಗೂ ಉನ್ನತ ಶಿಕ್ಷಣದ ಸೌಲಭ್ಯವನ್ನು ಯಶಸ್ವಿಯಾಗಿ ನೀಡುತ್ತ ಬಂದಿದೆ. ಇದುವರೆಗೆ ಸಾವಿರಾರು ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. ಶೈಕ್ಷಣಿಕ ಸೌಲಭ್ಯಗಳಷ್ಟೇ ಅಲ್ಲದೆ ಎಲ್ಲ ರೀತಿಯ ಮೂಲ ಸೌಲಭ್ಯಗಳನ್ನು ಸಂಸ್ಥೆ ಒಳಗೊಂಡಿದೆ ಎಂದು ತಿಳಿಸಿದರು.
ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರವೀಣ್ ಕುಮಾರ್, ಗೋಣಿಕೊಪ್ಪ ಕಾವೇರಿ ಕಾಲೇಜಿನ ಪ್ರಾಂಶುಪಾಲ ಪ್ರೊ ಎಂ.ಬಿ.ಕಾವೇರಪ್ಪ, ಕುಶಾಲನಗರದ ಅನುಗ್ರಹ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪಂಡರಿನಾಥ್ ನಾಯ್ಡು, ಎಂ.ಜಿ.ಎಂ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಲಿಖಿತಾ.ಟಿ.ಅಪ್ಪಾಜಿ, ಭಾರತ್ ಮಾತಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಫಾ.ಜೋಸೆಫ್ ವರ್ಗೀಸ್, ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದ ಸೂಕ್ಷ್ಮಾಣು ಜೀವ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ಬಿ.ಎಸ್.ಗುಣಶ್ರೀ, ಯೋಗ ವಿಜ್ಞಾನ ವಿಭಾಗದ ಸಂಯೋಜಕ ಡಾ.ಜೆ.ಶಾಮಸುಂದರ, ಕೊಡಗು ಜಿಲ್ಲೆಯ ವಿವಿಧ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರುಗಳಾದ ರಾಜು, ರಂಗಸ್ವಾಮಿ, ಪ್ರತಾಪ್, ಉಪನ್ಯಾಸಕರಾದ ಹರೀಶ್, ಶಿವಕುಮಾರ್, ಯೋಗೇಂದ್ರ ಇದ್ದರು.