ಕೊಡಗಿನಲ್ಲಿ ರಥಯಾತ್ರೆಗೆ ಅವಮಾನ

Published on

ಸೋಮವಾರಪೇಟೆ: ಬೆಂಗಳೂರು ಕಟ್ಟಿದ ನಾಡಪ್ರಭು ಕೆಂಪೇಗೌಡರಿಗೆ ಕೊಡಗಿನಲ್ಲಿ ರಥಯಾತ್ರೆ ಮೂಲಕ ಅವಮಾನ ಮಾಡಿರುವುದು ಖಂಡನೀಯ ಎಂದು ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ ಅಸಮಾಧಾನ ವ್ಯಕ್ತಪಡಿಸಿದರು.


ಸರ್ಕಾರ ಹಾಗೂ ಒಕ್ಕಲಿಗ ಪ್ರಾಧಿಕಾರದಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭವ್ಯವಾದ ಕೆಂಪೇಗೌಡರ ಕಂಚಿನ ಪ್ರತಿಮೆ ನಿರ್ಮಾಣ ಮಾಡಲಾಗಿದ್ದು ನ.11ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ಮಣ್ಣು ಸಂಗ್ರಹಿಸುವ ಕಾರ್ಯವನ್ನು ಸರ್ಕಾರದಿಂದ ಮಾಡಲಾಗುತ್ತಿದೆ. ಆದರೆ, ಕುಶಾಲನಗರಕ್ಕೆ ರಥ ಬಂದಾಗ ಅವಮಾನವಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.


ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾ ಪ್ರತಿನಿಧಿಯಾಗಿರುವ ನನಗೆ ಜಿಲ್ಲಾಡಳಿತವಾಗಲಿ, ಶಾಸಕರಾಗಲಿ ಮಾಹಿತಿ ನೀಡಿರಲಿಲ್ಲ. ಕುಶಾಲನಗರಕ್ಕೆ ಹಾಲು ಸರಬರಾಜು ಮಾಡುವ ಲಾರಿಗೆ ಬ್ಯಾನರ್ ಕಟ್ಟಿಕೊಂಡು ಅದನ್ನೇ ರಥ ಎಂದು ಪೂಜೆ ಮಾಡಿದ್ದಾರೆ. ನಾಡಪ್ರಭು ಕೆಂಪೇಗೌಡರ ಭಾವಚಿತ್ರ ಹಾಗೂ ಶ್ರೀ ಆದಿಚುಂಚನಗಿರಿ ಮಠದ ಸ್ವಾಮೀಜಿ ಅವರ ಫೋಟೋವನ್ನು ಹಾಕದೆ ಅವಮಾನ ಮಾಡಿದ್ದಾರೆ ಎಂದು ದೂರಿದರು.


ಸರ್ಕಾರ ಜಿಲ್ಲೆಯಲ್ಲಿರುವ ಒಕ್ಕಲಿಗ ಸಂಘ ಅಥವಾ ನನಗೆ ಮಾಹಿತಿ ನೀಡಿದ್ದರೆ ಸಾವಿರಾರು ಸಂಖ್ಯೆಯಲ್ಲಿ ಸಮುದಾಯದ ಜನರನ್ನು ಸೇರಿಸಿ, ಒಕ್ಕಲಿಗರ ಸಂಪ್ರದಾಯದಂತೆ ಅದ್ದೂರಿ ಸ್ವಾಗತ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೆವು. ಬೆರಳೆಣಿಕೆ ಜನರಿಂದ ಮಾತ್ರ ಸ್ವಾಗತ ಕಾರ್ಯಕ್ರಮ ನಡೆದಿದ್ದು ಸಮುದಾಯ ತಲೆ ತಗ್ಗಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.


ಮುಖಂಡರಾದ ಮಂಜೂರು ತಮ್ಮಣ್ಣಿ, ಎಚ್.ಕೆ,ಪ್ರಸಿ, ಸತೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net