ಕೊಡಗಿನ ಕೃಷಿ ಸಹಕಾರ ಸಂಸ್ಥೆಗಳು ದೇಶಕ್ಕೆ ಮಾದರಿ

22ss1Godamu udgatane
Published on

ಶನಿವಾರಸಂತೆ: ಕೊಡಗು ಜಿಲ್ಲೆಯಲ್ಲಿರುವ ಕೃಷಿ ಸಹಕಾರ ಸಂಸ್ಥೆಗಳು ದೇಶದ ಸಹಕಾರ ಕ್ಷೇತ್ರಕ್ಕೆ ಮಾದರಿ ಎಂದು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಕೊಡಂದಿರ ಪಿ.ಗಣಪತಿ ಅಭಿಪ್ರಾಯಪಟ್ಟರು.


ಸಮಿಪದ ನಿಡ್ತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ನಬಾರ್ಡ್ ಸಾಲ ಸಹಾಯಧನದಿಂದ ನಿರ್ಮಿಸಿರುವ ನೂತನ ಗೋದಾಮು ಕಟ್ಟಡ ಉದ್ಘಾಟಿಸಿ ಮಾತನಾಡಿ, ರೈತರ ಪ್ರಗತಿಗಾಗಿ ಹುಟ್ಟು ಹಾಕಿದ ಗ್ರಾಮೀಣ ಪ್ರದೇಶದ ಕೃಷಿ ಸಹಕಾರ ಸಂಸ್ಥೆಗಳು ಇಂದು ದೇಶದಲ್ಲಿ ಬೃಹತ್ ಸಹಕಾರ ಕ್ಷೇತ್ರವಾಗಿ ಬೆಳೆದಿದೆ. ಗ್ರಾಮೀಣ ಪ್ರದೇಶದಲ್ಲಿ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಕೇಂದ್ರ ಸಹಕಾರ ಬ್ಯಾಂಕ್‌ಗಳು ಸಾಲ ನೀಡುತ್ತಿದ್ದು, ಈ ಮೂಲಕ ಕೃಷಿ ಸಹಕಾರ ಬ್ಯಾಂಕ್‌ಗಳು ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್‌ಗಳಿಗೆ ಸರಿಸಮಾನವಾಗಿ ಪೈಪೋಟಿ ನೀಡುವಷ್ಟು ಪ್ರಗತಿ ಸಾಧಿಸುತ್ತಿದೆ ಎಂದರು.


ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸ್ಥಳೀಯ ಕೃಷಿ ಸಹಕಾರ ಸಂಘಗಳಲ್ಲಿ ಶೂನ್ಯ ಬಡ್ಡಿದರದಲ್ಲಿ ಕೃಷಿ ಸಾಲ ಸೌಲಭ್ಯ ನೀಡುವುದರ ಜತೆಯಲ್ಲಿ ಸಂಘವು ವಾಣಿಜ್ಯ ಸಂಕೀರ್ಣ, ಗೋದಾಮು ಕಟ್ಟಡ, ಸಭಾಂಗಣ ಇನ್ನಿತ್ತರ ಕಟ್ಟಡಗಳನ್ನು ನಿರ್ಮಿಸುತ್ತಿದ್ದು, ಸಾರ್ವಜನಿಕರ ಒಳಿತಿಗಾಗಿ ಸೇವೆ ಸಲ್ಲಿಸುತ್ತಿದೆ. ಸಹಕಾರಿಗಳ ಸಹಕಾರದಿಂದ ಸಂಘದ ಬೆಳವಣಿಗೆ ಸಾಧ್ಯ ಇರುವುದರಿಂದ ಸಂಘದ ಸದಸ್ಯರು ಕೃಷಿ ಸಾಲ ಸೌಲಭ್ಯ ಪಡೆದುಕೊಳ್ಳುವುದಲ್ಲದೆ, ಸಕಾಲದಲ್ಲಿ ಸಾಲ ಮರುಪಾವತಿ ಮೂಲಕ ಸಂಘದ ಅಭಿವೃದ್ಧಿಗೆ ಸಹಕಾರ ನೀಡುವಂತೆ ಮನವಿ ಮಾಡಿದರು.


ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಬಿ.ಡಿ.ಮಂಜುನಾಥ್ ಮಾತನಾಡಿ, ಹಿರಿಯರು ಸ್ಥಾಪಿಸಿದ ಕೃಷಿ ಸಹಕಾರ ಸಂಘಗಳನ್ನು ಉಳಿಸಿಕೊಂಡು ಮತ್ತಷ್ಟು ಅಭಿವೃದ್ಧ್ದಿಗೊಳಿಸುವ ನಿಟ್ಟಿನಲ್ಲಿ ಸಂಘದ ಸದಸ್ಯರು ಪ್ರಯತ್ನಿಸಬೇಕು ಎಂದರು.


ನಿರ್ದೇಶಕ ಬಿ.ಕೆ.ಚಿಣ್ಣಪ್ಪ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ 73 ಕೃಷಿ ಪತ್ತಿನ ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಸಂಘಗಳಿಗೆ ಸಾಲ ಸೌಲಭ್ಯ ನೀಡುತ್ತಿರುವುದರಿಂದ ಸಂಘಗಳು ಪ್ರಗತಿ ಸಾಧಿಸಲು ಕಾರಣವಾಗಿದೆ ಎಂದು ಹೇಳಿದರು.

ನಿಡ್ತ ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಎನ್.ಬಿ.ನಾಗಪ್ಪ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಂ.ಈ.ಮೋಹನ್ ಮಾತನಾಡಿದರು. ಸಂಘದ ಉಪಾಧ್ಯಕ್ಷ ತೀರ್ಥಾನಂದ್, ಸಂಘದ ಕಾರ್ಯ ನಿರ್ವಹಣಾಧಿಕಾರಿ ಜಿ.ಜೆ.ಮಂಜಪ್ಪ, ನಿರ್ದೇಶಕರಾದ ಎಚ್.ಪಿ.ಶೇಷಾದ್ರಿ, ಡಿ.ಬಿ.ಧರ್ಮಪ್ಪ, ಎಂ.ಎಸ್.ತಂಗಮ್ಮ, ಲಿಂಗರಾಜು, ಕಾರ್ತಿಕ್, ಕಿರಣ್, ಜಗದೀಶ್, ಪೊನ್ನಪ್ಪ, ದೊಡ್ಡೇಗೌಡ, ಪುಟ್ಟಯ್ಯ, ಸಹಕಾರ ಸಂಘದ ಮೇಲ್ವಿಚಾರಕ ಸುಮಂತ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net