

ಸುಂಟಿಕೊಪ್ಪ: ಕುಶಾಲನಗರ ತಾಲೂಕಿನ ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಪೌತಿ ಖಾತೆ ಆಂದೋಲನ ನಡೆಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಸೀಲ್ದಾರ್ ಪ್ರಕಾಶ್, ಪೌತಿಖಾತೆ ಆಂದೋಲನ ಸರ್ಕಾರದ ಮಹತ್ತರ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಪೌತಿಖಾತೆ ಹೊಂದಲು ರೈತಾಪಿ ವರ್ಗದವರು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಪ್ರತಿ ಗ್ರಾಮಗಳಲ್ಲೂ ಅಧಿಕಾರಿಗಳೇ ಮನೆ ಬಾಲಿಗೆ ಆಗಮಿಸಿ ಜನತೆಗೆ ಮಾಹಿತಿ ನೀಡುತ್ತಾರೆ. ಆ ಮೂಲಕ ಸೂಕ್ತ ದಾಖಲಾತಿ ಪಡೆದು ಪೌತಿಖಾತೆ ಮಾಡಿಕೊಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ನಾಡಕಚೇರಿಯ ಉಪತಹಸೀಲ್ದಾರ್ ಶಿವಪ್ಪ ಮಾತನಾಡಿದರು. ಸುಂಟಿಕೊಪ್ಪ, ಉಲುಗುಲಿ ಹಾಗೂ ನಾರ್ಗಾಣೆ ಗ್ರಾಮದ ರೈತರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು. ಕಂದಾಯ ಪರಿವೀಕ್ಷಕರಾದ ಪ್ರಶಾಂತ್, ಗ್ರಾಮ ಪಂಚಾಯಿತಿ ಸದಸ್ಯರಾದ ನೀತಾ, ಚೆನ್ನಬಸವಿ, ಗ್ರಾಮಲೆಕ್ಕಿಗರಾದ ಜಯಂತ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವೀಶ್, ಸಿಬ್ಬಂದಿ ಧನಂಜಯ ಇತರರು ಇದ್ದರು.