ಕೊಟ್ಟೂರೇಶ್ವರಗೆ ಭಕ್ತರ ಹರಕೆ ಸಲ್ಲಿಕೆ

feb 23 kottur 02
Published on

ಕೊಟ್ಟೂರು: ಕೊಟ್ಟೂರೇಶ್ವರ ಜಾತ್ರೆಯ ಎರಡನೇ ದಿನವಾದ ಭಾನುವಾರ ಭಕ್ತರು ದೀರ್ಘದಂಡ ನಮಸ್ಕಾರ ಹಾಕಿದರು. ಹೋರಿಗಳ ಮೆರವಣಿಗೆ ಜಾತ್ರೆಗೆ ಮೆರುಗು ನೀಡಿತು.

ಕಾಯಿಲೆ ಗುಣವಾಗಲೆಂದು, ಸಂತಾನಪ್ರಾಪ್ತಿ, ನೌಕರಿ ಸಿಕ್ಕವರು ಇತ್ಯಾದಿ ಹರಕೆ ಹೊತ್ತಿದ್ದ ಜನರು ಮನೆಯಿಂದ ದೇವಾಲಯದ ದ್ವಾರ ಭಾಗಲಿನವರೆಗೆ ದೀರ್ಘದಂಡ ನಮಸ್ಕಾರ ಹಾಕಿದರು. ದೀರ್ಘದಂಡ ನಮಸ್ಕಾರದ ಬಳಿಕ ಸ್ನಾನ ಮಾಡಿ ಹೊಸಬಟ್ಟೆ ಧರಿಸಿ ಸ್ವಾಮಿ ದರ್ಶನ ಪಡೆದರು.

ರೈತರು ಹೋರಿಗಳಿಗೆ ಶೃಂಗಾರ ಮಾಡಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಕೆಲ ರೈತರು ಹೋರಿಗಳನ್ನು ಮಾರಾಟಕ್ಕೆ ತಂದಿದ್ದರು.

ಜಿಲ್ಲಾಧಿಕಾರಿ ಕೆ.ಎಸ್.ದಿವಾಕರ ಶನಿವಾರ ರಾತ್ರಿ ಪತ್ನಿಯೊಂದಿಗೆ ಕೊಟ್ಟೂರೇಶ್ವರ ದರ್ಶನ ಪಡೆದರು. ಪಾದಯಾತ್ರಿಗಳಿಗೆ ಪಟ್ಟಣ ಪಂಚಾಯಿತಿಯಿಂದ ತಾತ್ಕಾಲಿಕ ಶೌಚಗೃಹ, ಸ್ನಾನಕ್ಕೆ ನೀರಿನ ವ್ಯವಸ್ಥೆ ಮಾಡಲಾಗಿತ್ತು.

ಕೊಟ್ಟೂರೇಶ್ವರ ಸ್ವಾಮಿಗೆ ಕಳಸ ಮತ್ತು ಧೂಪದ ಆರತಿ ಬೆಳಗುವ ದುರುಗಮ್ಮ, ಉಡಸಲಮ್ಮ ಅವರಿಂದ ಕಂಕಣ ಕಟ್ಟಿಸಿಕೊಂಡರೆ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆಯಿಂದ ಭಕ್ತರು ಸಾಲಿನಲ್ಲಿ ನಿಂತು ಕಂಕಣ ಕಟ್ಟಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net