ಕೊಟ್ಟಿಗೇರಿಯಲ್ಲಿ ಕೃಷಿ ಚಟುವಟಿಕೆಗೆ ಶೀಘ್ರ ಅವಕಾಶ

29BNK01
Published on

ಬಂಕಾಪುರ: ಕರೊನಾ ಸೋಂಕಿತನ ಎರಡನೇ ಟೆಸ್ಟ್​ನಲ್ಲಿ ನೆಗೆಟಿವ್ ಬಂದರೆ ಸೀಲ್​ಡೌನ್​ಗೆ ಒಳಗಾಗಿರುವ ಪ್ರದೇಶದ ರೈತರ ಕೃಷಿ ಚಟುವಟಿಕೆಗಳಿಗೆ ಅನು ಕೂಲ ಮಾಡಿಕೊಡಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಪಟ್ಟಣದ ಕೊಟ್ಟಿಗೇರಿಯ ಸೀಲ್​ಡೌನ್ ಪ್ರದೇಶಕ್ಕೆ ಶುಕ್ರವಾರ ಭೇಟಿ ನೀಡಿ, ಅಲ್ಲಿನ ನಿವಾಸಿಗಳ ಸಮಸ್ಯೆ ಆಲಿಸಿ ಮಾತನಾಡಿದ ಅವರು, ಇಲ್ಲಿನ ಒಟ್ಟು 80 ಜನರ ಗಂಟಲ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಇದರ ಜತೆಗೆ ಪಾಸಿಟಿವ್ ಬಂದವನ ಎರಡನೇ ಬಾರಿಯ ವರದಿ ನೆಗಟಿವ್ ಬಂದ ತಕ್ಷಣ ಕೆಲ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಲಾಗುವುದು ಎಂದರು.

ಸೀಲ್​ಡೌನ್ ಪ್ರದೇಶದಲ್ಲಿ ಸುಮಾರು 120 ಕಟುಂಬಗಳಿದ್ದು, ಅವರಿಗೆ ದಿನನಿತ್ಯ ತರಕಾರಿ, ದಿನಸಿ ವಸ್ತುಗಳನ್ನು ವಿತರಿಸಲಾಗಿದೆ. ಇದಲ್ಲದೆ, ಗಂಗಮ್ಮ ಬೊಮ್ಮಾಯಿ ಟ್ರಸ್ಟ್​ನಿಂದ ಕೂಡ ದಿನಸಿ ಸಾಮಗ್ರಿಗಳ ಕಿಟ್ ವಿತರಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 1200 ಮಾದರಿ ವರದಿ ಬಾಕಿ ಇವೆ. ಅವುಗಳಲ್ಲಿ ಕೆಲವರ ಕ್ವಾರಂಟೈನ್ ಅವಧಿ ಮುಗಿದರೂ ವರದಿ ಬಾರದ ಕಾರಣ ಇನ್ನೂ ಬಿಡುಗಡೆ ಮಾಡಿಲ್ಲ. ಈ ಕುರಿತು ಸಚಿವ ಸಂಪುಟದಲ್ಲಿ ವಿಷಯ ಪ್ರಸ್ತಾಪವಾಗಿದೆ. ಕೂಡಲೆ ಪರೀಕ್ಷೆ ಮಾಡಲಾಗುವುದು ಎಂದು ಆರೋಗ್ಯ ಸಚಿವರು ಭರವಸೆ ನೀಡಿದ್ದಾರೆ ಎಂದರು.

ಈಗಾಗಲೇ ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಿದಂತೆ ಮಹಾರಾಷ್ಟ್ರದಿಂದ ಬಂದು ಹೋಗುವ ವ್ಯಕ್ತಿಗಳಿಗೆ ನಿರ್ಬಂಧ ಹೇರಲಾಗಿದೆ. ಆದರೆ, ಕೆಲವರು ಅಗತ್ಯ ವಸ್ತುಗಳ ಹೆಸರಿನಲ್ಲಿ ಗೂಡ್ಸ್ ವಾಹನಗಳ ಸಂಚಾರ ಮಾಡುತ್ತಿದ್ದಾರೆ. ಮೆಣಸಿನಕಾಯಿ, ಮಾವಿನಹಣ್ಣು ವ್ಯಾಪಾರ, ಲಾರಿಗಳಲ್ಲಿ ಕೆಲಸ ಮಾಡುವವರಿಗೆ ಸೋಂಕು ಹರಡುವ ಭೀತಿ ಇರುವುದರಿಂದ ಅವುಗಳಿಗೆ ಸ್ಥಳೀಯವಾಗಿ ನಿರ್ಬಂಧ ಹೇರಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ಜಿಲ್ಲಾಧಿಕಾರಿ ಕೃಷ್ಣ ಭಾಜಪೈ, ಎಸ್.ಪಿ. ದೇವರಾಜ, ಎಸಿಪಿ. ಮಲ್ಲಿಕಾರ್ಜುನ ಬಾಲದಂಡಿ, ಎ.ಸಿ. ಅನ್ನಪೂರ್ಣ ಮುದಕಮ್ಮನವರ, ಜಿಲ್ಲಾ ಆರೋಗ್ಯಾಧಿಕಾರಿ ರಾಜೇಂದ್ರ ದೊಡಮನಿ, ಡಿಎಸ್​ಪಿ ಓ.ಬಿ.ಕಲ್ಲೇಶಪ್ಪ, ತಹಸೀಲ್ದಾರ್ ಪ್ರಕಾಶ ಕುದರಿ, ಸಿಪಿಐ ಬಸವರಾಜ ಹಳಬಣ್ಣವರ, ಸಂತೋಷ ಪಾಟೀಲ, ರೇಣುಕಾ ದೇಸಾಯಿ, ರಾಘವೇಂದ್ರ ಮೇಲಗೇರಿ, ಶಿವಾನಂದ ಮ್ಯಾಗೇರಿ, ಶಶಿ ಹೊಣ್ಣನ್ನವರ, ವಿಶ್ವನಾಥ ಹರವಿ, ಮಧು ಜಂಗಳಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net