ಕೊಟ್ಟಿಗೆಗೆ ನುಗ್ಗಿ ನಾಲ್ಕು ಮೇಕೆ ಕೊಂದ ಚಿರತೆ

23 mlv 3
ಮಳವಳ್ಳಿ ತಾಲೂಕಿನ ತಳಗವಾದಿ ಗ್ರಾಮದ ಚಿಕ್ಕಣ್ಣ ಎಂಬುವರ ಮನೆಯ ಕೊಟ್ಟಿಗೆಯಲ್ಲಿ ಕೂಡಿದ್ದ ಮೇಕೆಗಳ ಮೇಲೆ ಭಾನುವಾರ ಹಗಲಲ್ಲೇ ಚಿರತೆ ದಾಳಿ ನಡೆಸಿ ಕೊಂದುಹಾಕಿದೆ.
Published on

ಮಳವಳ್ಳಿ: ತಾಲೂಕಿನ ತಳಗವಾದಿ ಗ್ರಾಮದಲ್ಲಿ ಭಾನುವಾರ ಹಾಡಹಗಲೇ ಕೊಟ್ಟಿಗೆಗೆ ನುಗ್ಗಿದ ಚಿರತೆಯೊಂದು ನಾಲ್ಕು ಮೇಕೆಗಳನ್ನು ಕೊಂದುಹಾಕಿದೆ.

ಗ್ರಾಮದ ಚಿಕ್ಕಣ್ಣ ಅವರ ಮೇಕೆಗಳು ಚಿರತೆ ದಾಳಿಗೆ ಬಲಿಯಾಗಿವೆ. ಇವರು ಪಕ್ಕದ ಗ್ರಾಮದಲ್ಲಿದ್ದ ಸಂಬಂಧಿಕರ ತಿಥಿ ಕಾರ್ಯಕ್ಕೆಂದು ಬೆಳಗ್ಗೆ ಕುಟುಂಬ ಸಮೇತರಾಗಿ ತೆರಳಿದ್ದರು ಎನ್ನಲಾಗಿದೆ. ಮಧ್ಯಾಹ್ನ ಮನೆಗೆ ಬಂದು ನೋಡುವಷ್ಟರಲ್ಲಿ ಕೊಟ್ಟಿಗೆಯಲ್ಲಿ ಕೂಡಿ ಹಾಕಿದ್ದ 15 ಮೇಕೆಗಳಲ್ಲಿ ನಾಲ್ಕು ಮೇಕೆಗಳ ಮೇಲೆ ಚಿರತೆ ದಾಳಿ ನಡೆಸಿ ಒಂದನ್ನು ಬಹುಪಾಲು ತಿಂದು ಮೂರು ಮೇಕೆಗಳನ್ನು ಕೊಂದುಹಾಕಿ ಪರಾರಿಯಾಗಿದೆ. ಳಿಯ ವೇಳೆ ಉಳಿದ ನಾಲ್ಕೈದು ಮೇಕೆಗಳು ಗಾಯಗೊಂಡಿವೆ.

ಅರಣ್ಯ ಇಲಾಖೆ ಅಧಿಕಾರಿಗಳಿಗೆ ಚಿರತೆ ದಾಳಿ ಬಗ್ಗೆ ಮಾಹಿತಿ ನೀಡಿದರೂ ಸ್ಥಳಕ್ಕೆ ಬರಬೇಕಾಗಿದ್ದ ಅಧಿಕಾರಿಗಳು ಸಂಜೆಯಾದರೂ ಬರಲಿಲ್ಲ. ಪರಿಹಾರಕ್ಕಾಗಿ ಪಂಚನಾಮೆ ಮಾಡಿಸಬೇಕೆಂಬ ನಿಯಮ ಇರುವುದರಿಂದ ಪಶು ವೈದ್ಯರನ್ನು ಸಂಪರ್ಕಿಸಿದರೇ ಭಾನುವಾರ, ಮಳೆ ಬರುತ್ತಿದೆ ಎಂಬ ಸಬೂಬು ಹೇಳುತ್ತಿದ್ದಾರೆ ಎಂದು ಸಂತ್ರಸ್ತರು ಅಳಲು ತೋಡಿಕೊಂಡರು. ಹಗಲಲ್ಲೇ ಚಿರತೆ ದಾಳಿ ನಡೆಸಿರುವುದರಿಂದ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. ಕಳೆದ ಎರಡು ದಿನಗಳ ಹಿಂದೆಯೂ ಇದೇ ಗ್ರಾಮದ ಬೋರಯ್ಯ ಹಾಗೂ ಚಲುವಯ್ಯ ಎಂಬುವರು ತಾವು ಸಾಕಿದ್ದ ಮೇಕೆಗಳನ್ನು ಹೊರವಲಯದ ಪ್ರತ್ಯೇಕ ಜಮೀನಿನಲ್ಲಿ ಮೇಯಿಸುತ್ತಿದ್ದಾಗ ತಲಾ ಒಂದೊಂದು ಮೇಕೆಯನ್ನು ಎಳೆದೊಯ್ದು ಚಿರತೆ ತಿಂದುಹಾಕಿದೆ. ಈ ಭಾಗದಲ್ಲಿ ನಾಲ್ಕಕ್ಕೂ ಹೆಚ್ಚು ಚಿರತೆಗಳು ಕಂಡು ಬಂದಿದ್ದು, ಇವುಗಳ ಹಾವಳಿಯಿಂದ ರೈತರು ಜಮೀನುಗಳಿಗೆ ತೆರಳಲು ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆಗೆ ಹಲವು ಬಾರಿ ಚಿರತೆಗಳ ಸೆರೆಗೆ ಕ್ರಮ ವಹಿಸುವಂತೆ ಮನವಿ ಮಾಡಿದರೂ ಸೂಕ್ತ ಕ್ರಮ ತೆಗೆದುಕೊಂಡಿಲ್ಲ. ಇವರ ನಿರ್ಲಕ್ಷದಿಂದ ಜನಸಾಮಾನ್ಯರ ಪ್ರಾಣಹಾನಿಯಾದರೇ ಇದರ ಹೊಣೆಯನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೇ ಹೊರಬೇಕಾಗುತ್ತದೆಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net