ಕೊಟ್ಟಿಗೆಗೆ ನುಗ್ಗಿ ಕರು ಕೊಂದ ಚಿರತೆ

ಕೊಟ್ಟಿಗೆಗೆ ನುಗ್ಗಿ ಕರು ಕೊಂದ ಚಿರತೆ
Published on

ಹಾಸನ: ಕೊಟ್ಟಿಗೆಯಲ್ಲಿ ಕಟ್ಟಿದ್ದ ಕರುವಿನ ಮೇಲೆ ಚಿರತೆ ದಾಳಿ ಮಾಡಿ ಕೊಂದಿರುವ ಘಟನೆ ಹಗರೆ ಸಮೀಪದ ಬೈರೇಗೌಡನ ಕೊಪ್ಪಲು ಗ್ರಾಮದಲ್ಲಿ ಗುರುವಾರ ತಡರಾತ್ರಿ ನಡೆದಿದೆ.

ಮಾದೀಹಳ್ಳಿ ಹೋಬಳಿ ಬೈರೇಗೌಡನ ಕೊಪ್ಪಲು ಗ್ರಾಮದ ರವಿ ಎಂಬುವರು ತಮ್ಮ ಕೊಟ್ಟಿಗೆಯಲ್ಲಿ ಹಸು, ಎತ್ತುಗಳ ಜತೆ ಕರುವನ್ನು ಕಟ್ಟಿದ್ದರು. ಗುರುವಾರ ತಡರಾತ್ರಿ ದಾಳಿ ಮಾಡಿರುವ ಚಿರತೆ ಒಂದು ವರ್ಷದ ಹೆಣ್ಣು ಕರುವನ್ನು ಕೊಂದು ಪರಾರಿಯಾಗಿದೆ. ಬೆಳಗ್ಗೆ ಮನೆಯವರು ಎದ್ದು ನೋಡಿದಾಗ ಕೊಟ್ಟಿಗೆಯಲ್ಲಿ ಕರು ಸತ್ತು ಬಿದ್ದಿರುವುದನ್ನು ಕಂಡು ಮನೆಯವರು ಗಾಬರಿಗೊಂಡಿದ್ದಾರೆ.

ಸುಮಾರು ಮೂರ್ನಾಲ್ಕು ತಿಂಗಳುಗಳಿಂದ ಬೈರೇಗೌಡನ ಕೊಪ್ಪಲು, ಕಲ್ಲು ಶೆಟ್ಟಿಹಳ್ಳಿ, ರಾಮಚಂದ್ರಪುರ, ಅಂದಲೆ ಗ್ರಾಮಗಳ ಸುತ್ತಮುತ್ತ ತಿರುಗಾಡುತ್ತಿರುವ ಚಿರತೆ ಮೇಯಲು ಹೋಗಿದ್ದ ಕುರಿಗಳನ್ನು ಕೊಂದು ಹಾಕಿತ್ತು. ಆದರೆ ಈಗ ಕೊಟ್ಟಿಗೆಗಳಿಗೆ ನುಗ್ಗಲು ಪ್ರಾರಂಭಿಸಿದೆ ಎಂದು ಅಂದಲೆ ಗ್ರಾಮದ ನಿವಾಸಿ ಪರಮೇಶ್ ತಿಳಿಸಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಲಿಖಿತವಾಗಿ ದೂರು ನೀಡಲಾಗಿದ್ದರೂ ಚಿರತೆ ಸೆರೆಗೆ ಮುಂದಾಗಿಲ್ಲ. ಬೋನ್ ಇಡುವಲ್ಲಿ ನಿಲ್ಯಕ್ಷೃ ಧೋರಣೆ ಮಾಡಿದ್ದರಿಂದ ಈ ಘಟನೆ ಸಂಭವಿಸಿದೆ. ಅರಣ್ಯ ಇಲಾಖೆಯವರು ಕಾರಣ ಹೇಳುವುದರ ಮೂಲಕ ಭರವಸೆಯಲ್ಲೇ ಕಾಲ ದೂಡುತ್ತಿದ್ದಾರೆ. ರೈತರು ಕೃಷಿ ಮಾಡುವ ಸಮಯ ಇದಾಗಿದ್ದು ಮನೆಯಿಂದ ಹೊರಬರಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಅರಣ್ಯ ಇಲಾಖೆ ಬೋನು ಇಟ್ಟು ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net