

ಹನೂರು: ಫೆಂಗಲ್ ಚಂಡಮಾರುತದ ಪರಿಣಾಮ ಸುರಿದ ಮಳೆಗೆ ತಾಲೂಕಿನ ಕಾಡಂಚಿನ ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೇರಟ್ಟಿ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ಕೊಟ್ಟಿಗೆಯ ಛಾವಣಿ ಕುಸಿದು ಹಸು ಮೃತಪಟ್ಟಿದೆ.
ಗ್ರಾಮದ ನಾಗಮಾದಪ್ಪ ಎಂಬುವರು 2 ಹಸುಗಳನ್ನು ಸಾಕಿಕೊಂಡಿದ್ದು, ಮನೆ ಸಮೀಪದ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದರು. ಆದರೆ ಕಳೆದ 3 ದಿನಗಳಿಂದ ಆಗಾಗ್ಗೆ ಸುರಿಯುತ್ತಿರುವ ಮಳೆಗೆ ರಾತ್ರಿ ಛಾವಣಿ ಕುಸಿದಿದೆ. ಪರಿಣಾಮ ಹಸುವೊಂದು ಮೃತಪಟ್ಟಿದ್ದು, ಮತ್ತೊಂದು ಹಸು ಹೊರಕ್ಕೆ ಹೋಗಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದೆ. ಬೆಳಗ್ಗೆ ನಾಗಮಾದಪ್ಪ ಬಂದು ನೋಡಿದಾಗ ಹಸು ಮೃತಪಟ್ಟಿರುವುದು ಗೊತ್ತಾಯಿತು. ಸ್ಥಳಕ್ಕಾಗಮಿಸಿದ ಗ್ರಾಮ ಆಡಳಿತ ಅಧಿಕಾರಿ ಪರಿಶೀಲಿಸಿ ಅಗತ್ಯ ಮಾಹಿತಿ ಪಡೆದರು.
ನಮಗೆ ಹಸುವೇ ಮೂಲಾಧಾರವಾಗಿತ್ತು. ಆದರೆ ಹಸು ಮೃತಪಟ್ಟಿದ್ದು, ತುಂಬ ನಷ್ಟವಾಗಿದೆ. ಆದ್ದರಿಂದ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿಕೊಡುವುದರ ಜತೆಗೆ ಮನೆ ನಿರ್ಮಿಸಿ ಕೊಡುವಂತೆ ಮನವಿ ಮಾಡಿದರು.
ತಾಲೂಕು ಪಶುವೈದ್ಯಾಧಿಕಾರಿ ಡಾ.ಸಿದ್ದರಾಜು ಸ್ಥಳಕ್ಕೆ ಭೇಟಿ ನೀಡಿ ಮೃತ ಹಸುವಿನ ಮರಣೋತ್ತರ ಪರೀಕ್ಷೆ ನಡೆಸಿದರು. ಸರ್ಕಾರದಿಂದ ನೀಡಲಾಗುವ ಪರಿಹಾರವನ್ನು ಒಂದು ವಾರದೊಳಗೆ ದೊರಕಿಸಿಕೊಡಲಾಗುವುದು ಎಂದು ಭರವಸೆ ನೀಡಿದರು. ಈ ಭಾಗದಲ್ಲಿ ಆಗಾಗ್ಗೆ ಮಳೆಯಾಗುತ್ತಿರುವುದರಿಂದ ಜಾನುವಾರುಗಳ ರಕ್ಷಣೆಗೆ ರೈತರು ಮುತುವರ್ಜಿ ವಹಿಸಬೇಕು ಎಂದು ಸಲಹೆ ನೀಡಿದರು.