ಕೊಟ್ಟ ಭರವಸೆಯಂತೆ ಕಾಂಗ್ರೆಸ್ ನಡೆದುಕೊಳ್ಳಲಿ

CTD -GOVINDA KARAJOLA
Published on

ಚಿತ್ರದುರ್ಗ: ರಾಜ್ಯ ಸರ್ಕಾರ ಕೊಟ್ಟ ಭರವಸೆಯಂತೆ ನಡೆದುಕೊಳ್ಳಬೇಕೆಂದು ಸಂಸದ ಗೋವಿಂದ ಎಂ. ಕಾರಜೋಳ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿ, ಗ್ಯಾರಂಟಿ ಕಡಿತಕ್ಕೆ ಸಚಿವರ ಒತ್ತಡ ಕುರಿತು ಪ್ರತಿಕ್ರಿಯಿಸಿದ ಅವರು, ಭರವಸೆಯಂತೆ ಕಾಂಗ್ರೆಸ್ ನಡೆದುಕೊಳ್ಳಬೇಕು ಎಂದರು.
ಇಲ್ಲವಾದಲ್ಲಿ ರಾಜೀನಾಮೆ ನೀಡಿ ಮತ್ತೊಮ್ಮೆ ಚುನಾವಣೆ ಎದುರಿಸಲಿ. ಕಾಂಗ್ರೆಸ್ ಆಡಳಿತದಿಂದಾಗಿ ಕರ್ನಾಟಕ ಅಭಿವೃದ್ಧಿಯಲ್ಲಿ 10 ವರ್ಷ ಹಿಂದಕ್ಕೆ ಹೋಗಿದೆ. ಕಾಂಗ್ರೆಸ್ ಮೋಸದಾಟ ಬಹಳ ದಿನ ನಡೆಯದು. ಬಡವರು, ಶೋಷಿತ ಜನರಿಗೆ ಸರ್ಕಾರಿ ಸವಲತ್ತುಗಳ ಅಗತ್ಯವಿದೆ. ಹಿಂದುಳಿದ ವರ್ಗದ ಚಾಂಪಿಯನ್ ಎಂದು ಕರೆದುಕೊಳ್ಳುವ ಸಿಎಂ ಸಿದ್ದರಾಮಯ್ಯ, ಅಹಿಂದ ವರ್ಗದವರ ಪ್ರಗತಿಗೆ ಕಟಿಬದ್ಧವಾಗಿರಬೇಕು. ಬಡವರ ಪರ ಯಾವುದೇ ಯೋಜನೆಗಳನ್ನು ನಿಲ್ಲಿಸಬಾರದು ಎಂದು ಒತ್ತಾಯಿಸಿದರು.
ವೋಟ್‌ಬ್ಯಾಂಕ್ ರಾಜಕಾರಣದಿಂದಾಗಿ ಒಳಮೀಸಲು ಅನುಷ್ಠಾನಕ್ಕೆ ಮೀನಮೇಷ ಎಣಿಸಲಾಗುತ್ತಿದೆ. ಕೆನೆಪದರ ಪ್ರಸ್ತಾಪಿಸುವ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗೊಂದಲ ಸೃಷ್ಟಿಸುತ್ತಿದ್ದಾರೆ. ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಒಳಮೀಸಲು ಜಾರಿಗೆ ಸೂಚಿಸಿದೆ ಹಾಗೂ ಕೆನೆಪದರದ ಕುರಿತು ಸಲಹೆ ನೀಡಿದೆ ಎಂದರು.
ಆದ್ದರಿಂದ ಖರ್ಗೆ ಅವರು, ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಿಗೆ ಒಳಮೀಸಲು ಜಾರಿಗೊಳಿಸುವಂತೆ ಸೂಚಿಸಲಿ. ಇದರಿಂದ ಪರಿಶಿಷ್ಟ ಗುಂಪಿನಲ್ಲಿನ 101 ಜಾತಿಗಳಿಗೆ ಅನುಕೂಲವಾಗಲಿದೆ. ಸಿಎಂ ಸಿದ್ದರಾಮಯ್ಯ ಶೀಘ್ರ ಕ್ರಮ ಜರುಗಿಸಬೇಕು. ಬಿಜೆಪಿ, ಆರ್‌ಎಸ್‌ಎಸ್ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿದೆ. ಕೆನೆಪದರ ನೀತಿ ಜಾರಿಗೊಳಿಸುವುದಿಲ್ಲವೆಂದು ಕೇಂದ್ರ ಹೇಳಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net