

ಹನೂರು: ತಾಲೂಕು ವ್ಯಾಪ್ತಿಯಲ್ಲಿ ಕಳೆದ 2 ದಿನಗಳಿಂದ ರಾತ್ರಿ ವೇಳೆ ಸುರಿಯುತ್ತಿರುವ ಜೋರು ಮಳೆಗೆ ಹನೂರು-ಲೊಕ್ಕನಹಳ್ಳಿ ಮಾರ್ಗದಲ್ಲಿನ ತಟ್ಟೆಹಳ್ಳದ ತಾತ್ಕಾಲಿಕ ಮಣ್ಣಿನ ಸೇತುವೆ ಕೊಚ್ಚಿ ಹೋಗಿದ್ದು, ವಾಹನಗಳು ಬದಲಿ ರಸ್ತೆಯ ಮೂಲಕ ಸಂಚರಿಸುತ್ತಿವೆ.
ಈ ಮಾರ್ಗವು ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿರುವುದರಿಂದ ನಿತ್ಯ ನೂರಾರು ವಾಹನಗಳು ಸಂಚರಿಸುತ್ತಿವೆ. ಆದರೆ ಕೊಚ್ಚಿ ಹೋದ ಸೇತುವೆಯಿಂದ ಈ ಮಾರ್ಗವಾಗಿ ಸಂಚರಿಸುತ್ತಿದ್ದ ವಾಹನಗಳು ಉದ್ದನೂರು, ಬೆಳತ್ತೂರು ಮಾರ್ಗವಾಗಿ ಸುತ್ತಿ ಬಳಸಿ ಸಂಚರಿಸುತ್ತಿವೆ. ಇದರಿಂದ ಸಾರ್ವಜನಿಕರು ಸಂಚರಿಸಲು ಹೆಣಗಾಡಬೇಕಾಯಿತಲ್ಲದೇ ಬದಲಿ ಮಾರ್ಗದ ರಸ್ತೆಯ ಬಗ್ಗೆ ತಿಳಿಯದ ವಾಹನ ಚಾಲಕರು ತೆರಳಲು ತುಂಬಾ ತೊಂದರೆ ಅನುಭವಿಸಿದರು.
ಕಾಮಗಾರಿ ಸ್ಥಗಿತ: ತಾತ್ಕಾಲಿಕ ಮಣ್ಣಿನ ಸೇತುವೆ ಕೊಚ್ಚಿ ಹೋಗಿರುವ ಸಮೀಪದಲ್ಲಿಯೇ ಕಳೆದ 4 ತಿಂಗಳ ಹಿಂದೆ 1.5 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸಲಾಗಿದ್ದು, ಪ್ರಗತಿಯಲ್ಲಿತ್ತು. ನೀರಿನ ಹರಿವಿಗೆ ಸಮೀಪದಲ್ಲಿಯೇ ದಾರಿ ಮಾಡಲಾಗಿತ್ತು. ಆದರೆ, ಕಳೆದ ವಾರ ಬಿದ್ದ ಜೋರು ಮಳೆಗೆ ಹಳ್ಳದಲ್ಲಿ ಹರಿಯುವ ನೀರಿನ ಪ್ರಮಾಣ ಹೆಚ್ಚಾಯಿತು. ಇದರಿಂದ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು. ಸೋಮವಾರ ಹಳ್ಳದಲ್ಲಿ ನೀರು ಮತ್ತಷ್ಟು ಹೆಚ್ಚಾದ ಪರಿಣಾಮ ಪಿಲ್ಲರ್ ನಿರ್ಮಾಣ ಹಂತದಲ್ಲಿದ್ದ ಕಾಮಗಾರಿಯ ಸ್ಥಳವನ್ನು ನೀರು ಸುತ್ತುವರಿದು ಹರಿಯುತ್ತಿದ್ದು, ಇಲ್ಲಿದ್ದ ಕಾಮಗಾರಿಯ ಸಾಮಗ್ರಿಯನ್ನು ಹೊತ್ತೊಯ್ದಿದೆ. ಅಲ್ಲದೆ, ನೀರೆತ್ತುವ ಮೋಟಾರ್ ನೀರಿನಿಂದ ಹಾನಿಯಾಗಿದೆ.
ಯಥೇಚ್ಛವಾದ ನೀರು ಹರಿದು ಸೇತುವೆ ಕೊಚ್ಚಿ ಹೋದ ಹಿನ್ನೆಲೆಯಲ್ಲಿ ಶಾಸಕ ಆರ್.ನರೇಂದ್ರ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಕೊಚ್ಚಿ ಹೋಗಿರುವ ತಾತ್ಕಾಲಿಕ ಸೇತುವೆಯ ಮೇಲೆ ವಾಹನಗಳು ಸಂಚರಿಸಿದರೆ ಅನಾಹುತ ಸಂಭವಿಸುತ್ತಿದೆ. ಹಾಗಾಗಿ ಈ ಮಾರ್ಗದಲ್ಲಿ ವಾಹನಗಳ ಸಂಚಾರವನ್ನು ಬಂದ್ ಮಾಡಬೇಕು. ಅಲ್ಲಿಯವರೆಗೆ ಆದಷ್ಟು ಬೇಗ ಸೇತುವೆಯನ್ನು ರಿಪೇರಿ ಪಡಿಸಿ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಆದ್ದರಿಂದ ಈ ಬಗ್ಗೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಪಿಡಬ್ಲುೃಡಿ ಎಇ ಚಿನ್ನಣ್ಣ ಅವರಿಗೆ ಕಟ್ಟುನಿಟ್ಟಿನ ಸೂಚಿಸಿದರು.
ತಹಸೀಲ್ದಾರ್ ಆನಂದಯ್ಯ, ಗ್ರಾಮಲೆಕ್ಕಿಗ ಶೇಷಣ್ಣ, ಪಪಂ ಉಪಾಧ್ಯಕ್ಷ ಗಿರೀಶ್, ಸದಸ್ಯರಾದ ಸಂಪತ್ ಕುಮಾರ್, ಹರೀಶ್ ಕುಮಾರ್, ಸುದೇಶ್ ಇನ್ನಿತರರು ಇದ್ದರು.