ಕೊಚ್ಚಿ ಹೋಗುತ್ತಿವೆ ಜಮೀನು!

3-gdg-hammigi 4
Published on

ಗದಗ: ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಮದಲ್ಲಿ ಹರಿದಿರುವ ತುಂಗಭದ್ರಾ ನದಿಗೆ ಸಿಂಗಟಾಲೂರು ಹುಲಿಗುಡ್ಡ ಏತ ನೀರಾವರಿ ಯೋಜನೆ ಬ್ಯಾರೇಜ್ ನಿರ್ವಿುಸಲಾಗಿದೆ. ನೀರಿನ ರಭಸಕ್ಕೆ ಬ್ಯಾರೇಜ್ ಕೆಳಭಾಗದಲ್ಲಿರುವ ಜಮೀನು ವರ್ಷದಿಂದ ವರ್ಷಕ್ಕೆ ಕೊರೆದು ಹಾಳಾಗುತ್ತಿದೆ. ಇದರಿಂದ ಹಮ್ಮಿಗಿ ಗ್ರಾಮದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕಳೆದ ಒಂದು ವಾರದಿಂದ ತುಂಗಭದ್ರಾ ನದಿ ತುಂಬಿ ಹರಿದು ಪ್ರವಾಹ ಉಂಟಾಗಿದೆ. ನೀರಿನ ಹರಿವು ಹೆಚ್ಚಾಗಿದ್ದರಿಂದ ಬ್ಯಾರೇಜ್​ನ ಎಲ್ಲ 26 ಗೇಟ್​ಗಳನ್ನು ತೆರೆಯಲಾಗಿದ್ದು, ರಭಸದಿಂದ ಮುನ್ನುಗ್ಗುವ ನೀರಿನ ಹೊಡೆತಕ್ಕೆ ಜಮೀನು ಕೊಚ್ಚಿ ಹೋಗುತ್ತಿದೆ. ಇದರಿಂದ 25ಕ್ಕೂ ಹೆಚ್ಚು ರೈತರ ನೂರಾರು ಎಕರೆ ಜಮೀನು ನದಿ ಪಾಲಾಗುತ್ತಿದೆ. ಕಳೆದ ಎರಡು ತಿಂಗಳ ಅವಧಿಯಲ್ಲಿ 2.10 ಲಕ್ಷ ಕ್ಯೂಸೆಕ್ ನೀರು ಸೇತುವೆ ಮೂಲಕ ಹರಿದು ಹೋಗಿದೆ.

ಗದಗ, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ಲಕ್ಷಾಂತರ ಎಕರೆ ಜಮೀನಿಗೆ ನೀರು ಹರಿಸುವ ಯೋಜನೆ ಜಾರಿಗೊಳ್ಳುತ್ತದೆ ಎಂಬ ಸಂತೋಷ ಒಂದೆಡೆಯಾದರೆ, ಬ್ಯಾರೇಜ್​ನಿಂದ ಬಿಡಲಾಗುತ್ತಿರುವ ನೀರಿನ ರಭಸಕ್ಕೆ ಸೇತುವೆ ಕೆಳಭಾಗದ ಜಮೀನುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿವೆ. ಹಿರಿಯರು ಮಾಡಿಟ್ಟಿರುವ ಭೂಮಿ ಕಣ್ಣೆದುರೇ ಕೊಚ್ಚಿಕೊಂಡು ಹೋಗುತ್ತಿರುವುದನ್ನು ಕಂಡ ರೈತರು ಸಂಕಟಪಡುತ್ತಿದ್ದಾರೆ. ಅಸಹಾಯಕರಾಗಿ ಕಣ್ಣೀರಿಡುತ್ತಿದ್ದಾರೆ. ಯಾರಿಗೆ ಹೇಳಿದರೆ ಸಮಸ್ಯೆ ಬಗೆಹರಿಯುತ್ತದೆ ಎಂಬುದು ಅರಿಯದೆ ವೇದನೆ ಪಡುತ್ತಾ ದಿನದೂಡುತ್ತಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯ ಬ್ಯಾರೇಜ್ ಕೆಳಭಾಗದ ಜಮೀನು ಹಾಳಾಗುತ್ತಿದೆ ಎಂದು ಏತ ನೀರಾವರಿ ಯೋಜನೆ ಕೈಗೊಂಡ ನೀರಾವರಿ ಇಲಾಖೆಗೆ ಹಮ್ಮಿಗಿ ಗ್ರಾಮದ ರೈತರು ಹಲವಾರು ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಸಲ್ಲಿಸಿದ ಅರ್ಜಿ ಬಗ್ಗೆ ಅಧಿಕಾರಿಗಳಿಗೆ ಮಾಹಿತಿಯೇ ಇಲ್ಲ. ಹಲವಾರು ರೈತರು ಭೂಮಿ ಕಳೆದುಕೊಳ್ಳುವ ಸ್ಥಿತಿ ಎದುರಾಗಿದೆ. ಎಕರೆಗಟ್ಟಲೇ ಭೂಮಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಮುಂದಿನ ಐದು ವರ್ಷದಲ್ಲಿ ಜಮೀನು ಇಲ್ಲದಂತಾಗುತ್ತದೆ. ಹೀಗಾದರೆ ಬದುಕುವುದು ಹೇಗೆ ಎಂದು ನದಿ ದಡದ ರೈತರು ಪ್ರಶ್ನಿಸುತ್ತಾರೆ. ಇರುವ ಜಮೀನಿನಲ್ಲಿ ಸಾಲ ಮಾಡಿ ಭತ್ತ ನಾಟಿ ಮಾಡಲಾಗಿತ್ತು. ಅಡಿಗಿಂತಲೂ ಹೆಚ್ಚು ಎತ್ತರಕ್ಕೆ ಬೆಳೆದ ಭತ್ತದ ಗಿಡದ ನೀರಿನಲ್ಲಿ ತೇಲಿಕೊಂಡು ಹೋಗುವುದನ್ನು ನೋಡಿದರೆ ನಮಗಾಗುವ ನೋವು ಅಷ್ಟಿಷ್ಟಲ್ಲ. ನೀರಾವರಿ ಇಲಾಖೆ, ಜಿಲ್ಲಾಡಳಿತ ಶೀಘ್ರ ಇತ್ತ ಕಡೆಗೆ ಗಮನ ಹರಿಸಬೇಕು. ನದಿ ಪಾಲಾದ ಜಮೀನಿಗೆ ಪರಿಹಾರ ನೀಡಬೇಕು. ಜತೆಗೆ ತಡೆಗೋಡೆ ನಿರ್ವಿುಸಬೇಕು. ಇಲ್ಲವೇ ಸಂಪೂರ್ಣ ಜಮೀನನ್ನು ಸರ್ಕಾರ ತನ್ನ ವಶಕ್ಕೆ ಪಡೆದುಕೊಂಡು ಪರಿಹಾರ ನೀಡಬೇಕು ಎಂದು ಜಮೀನು ಕಳೆದುಕೊಂಡ ಅನೇಕ ರೈತರು ಒತ್ತಾಯಿಸುತ್ತಿದ್ದಾರೆ.

ಜಿಲ್ಲಾಧಿಕಾರಿ ಪರಿಶೀಲಿಸಲಿ

ಮುಂಡರಗಿ ತಾಲೂಕಿನ ಹಮ್ಮಿಗಿ ಬ್ಯಾರೇಜ್​ನಿಂದ ಬಿಡಲಾಗುವ ನೀರಿನ ರಭಸಕ್ಕೆ ಉಂಟಾಗಿರುವ ಹಾನಿಯನ್ನು ಜಿಲ್ಲಾಧಿಕಾರಿ ಸುಂದರೇಶಬಾಬು ಭೇಟಿ ನೀಡಿ ಪರಿಶೀಲಿಸಬೇಕು. ಪ್ರತಿ ಸಲ ನೀರು ಬಿಟ್ಟಾಗ ಕೊಚ್ಚಿಹೋಗಿರುವ ಜಮೀನಿನ ಸ್ಥಿತಿಯನ್ನು ಗಮನಿಸಬೇಕು. ಹಾನಿಯಾಗಿರುವ ಜಮೀನಿಗೆ ಸಂಬಂಧಿಸಿದಂತೆ ನೀರಾವರಿ ಇಲಾಖೆ ಮೂಲಕ ಕೂಡಲೇ ವರದಿ ತರಿಸಿಕೊಂಡು ಪರಿಹಾರ ನೀಡಲು ಮುಂದಾಗಬೇಕು. ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಿ ಪುಣ್ಯ ಕಟ್ಟಿಕೊಳ್ಳಬೇಕೆಂದು ನೊಂದ ರೈತರು ಮನವಿ ಮಾಡಿದ್ದಾರೆ.

ಹಮ್ಮಿಗಿ ಬ್ಯಾರೇಜ್​ನಿಂದ ಬಿಡಲಾಗುವ ನೀರಿನ ರಭಸದಿಂದ ಹಾನಿ ಉಂಟಾಗದಂತೆ ಜಮೀನಿಗೆ ತಡೆಗೋಡೆ ನಿರ್ವಿುಸಲು ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದೆ. ಎಕರೆಗಟ್ಟಲೇ ಜಮೀನು ಕೊಚ್ಚಿ ಹೋಗಿರುವುದು ಗಮನಕ್ಕೆ ಬಂದಿಲ್ಲ.| ಪ್ರಕಾಶ ಐಗೋಳ ಎಇಇ, ಸಿಂಗಟಾಲೂರು ಏತ ನೀರಾವರಿ ಯೋಜನೆ, ಮುಂಡರಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net