

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟ ತಪ್ಪಲಿನ ಕೊಂಬುಡಿಕ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೈಸೂರಿನ ಶ್ರೀ ಮಲೆಮಹದೇಶ್ವರ ಗೆಳೆಯರ ಬಳಗದ ವತಿಯಿಂದ ನಿರ್ಮಿಸಿರುವ ಆರ್ಯಭಟ ಪ್ರಯೋಗಾಲಯವನ್ನು ಸೋಮವಾರ ಸಾಲೂರು ಬೃಹನ್ಮಠದ ಶ್ರೀ ವೀರಪ್ಪ ಸ್ವಾಮೀಜಿ ಉದ್ಘಾಟಿಸಿದರು.
ಗಣಿತ ಹಾಗೂ ವಿಜ್ಞಾನದ ಈ ಪ್ರಯೋಗಾಲಯದ ಕಲ್ಪನೆ, ವಿಷಯಾಂಶ ಹಾಗೂ 80 ಮಾದರಿಗಳನ್ನು ರಾಜ್ಯ ಸಂಪನ್ಮೂಲ ಶಿಕ್ಷಕರ ತಂಡದ ನಂಜನಗೂಡಿನ ಹೆಡತಲೆ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಹರ್ಷ, ನಂಜನಗೂಡು ಆದರ್ಶ ಶಾಲೆಯ ಕಿರಣ್, ಹುಲ್ಲಹಳ್ಳಿ ಸರ್ಕಾರಿ ಪ್ರೌಢಶಾಲೆಯ ಸತೀಶ್ ಹಾಗೂ ಚನ್ನರಾಯಪಟ್ಟಣ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ದಿನೇಶ್ ತಂಡ ಸಿದ್ಧಪಡಿಸಿದೆ.
ಶಿಕ್ಷಕ ಹರ್ಷ ಮಾತನಾಡಿ, ಗಣಿತ ಹಾಗೂ ವಿಜ್ಞಾನ ಓದುವ ವಿಷಯ ಮಾತ್ರವಲ್ಲ. ಇದು ನಮ್ಮ ದೈನಂದಿನ ಜೀವನದ ಒಂದು ಭಾಗವಾಗಿದೆ. ಗಣಿತವು ವಿಮರ್ಶಾತ್ಮಕ ಚಿಂತನೆ ಅಭಿವೃದ್ಧಿಪಡಿಸುತ್ತದೆ. ಸ್ಥಿತಿ ಸ್ಥಾಪಕತ್ವದ ಜತೆಗೆ ತಿಳಿವಳಿಕೆಯನ್ನು ಹೆಚ್ಚಿಸುತ್ತದೆ. ಈ ದಿಸೆಯಲ್ಲಿ ಗಣಿತ ಕ್ಷೇತ್ರಕ್ಕೆ ಭಾರತೀಯರು ನೀಡಿರುವ ಕೊಡುಗೆ ಅಪಾರ. ಇನ್ನು ವಿಜ್ಞಾನವು ಸಂಶೋಧನಾ ಪ್ರವೃತ್ತಿ ಬೆಳೆಸುವುದರ ಮೂಲಕ ಹೊಸ ಆವಿಷ್ಕಾರಗಳನ್ನು ಕೈಗೊಳ್ಳಲು ಪ್ರೇರೇಪಿಸುತ್ತದೆ. ಹಾಗಾಗಿ ಗೆಳೆಯರ ಬಳಗದ ವತಿಯಿಂದ ಈ ಶಾಲೆಯಲ್ಲಿ ಪ್ರಯೋಗಾಲಯ ಸ್ಥಾಪಿಸಿರುವುದು ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಿದೆ. ಪ್ರತಿಯೊಬ್ಬರೂ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ನಿವೃತ್ತ ಶಿಕ್ಷಕ ಮಹದೇವಪ್ಪ ಮಾತನಾಡಿ, ಗಣಿತ ನಮ್ಮ ಜೀವನದ ಅವಿಭಾಜ್ಯ ಅಂಗ. ಗಣಿತವಿಲ್ಲದೇ ಮನುಷ್ಯ ಬದುಕುವುದಕ್ಕೆ ಸಾಧ್ಯವಿಲ್ಲ ಎಂದರು.
ಇದೇ ವೇಳೆ ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಲಾಯಿತು. ಗೆಳೆಯರ ಬಳಗದ ಗುರುಸಿದ್ದಪ್ಪ, ಮನೋಹರ್, ಬೆಳ್ಳಪ್ಪ, ಗ್ರ್ಯಾವಿಟಿ ಫೌಂಡೇಷನ್‌ನ ಯುವ ವಿಜ್ಞಾನಿ ಅಭಿಷೇಕ್, ಎಸ್‌ಡಿಎಂಸಿ ಅಧ್ಯಕ್ಷ ಶಾಂತ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೃಷ್ಣೇಗೌಡ, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಶಿವಮಲ್ಲು, ಮುಖ್ಯ ಶಿಕ್ಷಕಿ ಮಹದೇವಮ್ಮ, ಶಿಕ್ಷಕರಾದ ಮಹೇಂದ್ರ, ರಂಗಸ್ವಾಮಿ, ವಿನೋದ್, ಪುಟ್ಟಸ್ವಾಮಿ, ಗುಣಶೇಖರ್ ಇತರರಿದ್ದರು.