

ಬಾಗೇಪಲ್ಲಿ : ತಾಲೂಕಿನ ಕೊಂಡಮಾರಪಲ್ಲಿಗೆ ಸಂಪರ್ಕ ಕಲ್ಪಿಸುವ ಚಾಕವೇಲು-ಕೊಂಡಮಾರಪಲ್ಲಿ ರಸ್ತೆ ದುರಸ್ತಿ ಮಾಡುವ ಮೂಲಕ ಗ್ರಾಮದ ಯುವಕರು ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಚಾಕವೇಲು ಗ್ರಾಪಂ ವ್ಯಾಪ್ತಿಯ ಕೊಂಡಮಾರಪಲ್ಲಿ ರಸ್ತೆ ಸಂಪೂರ್ಣ ಮಣ್ಣಿನಿಂದ ಕೂಡಿದ್ದು, ಡಾಂಬರು ಕಾಣದೆ ಎರಡು ದಶಕಗಳು ಸರಿದಿವೆ. ಕೆಲ ದಿನಗಳಿಂದ ಬೀಳುತ್ತಿರುವ ಮಳೆಗೆ ರಸ್ತೆ ಮತ್ತಷ್ಟು ಹದಗೆಟ್ಟಿತ್ತು. ರಸ್ತೆಯಲ್ಲಿ ಹೊಂಡಗಳು ಸೃಷ್ಠಿಯಾಗಿ ಕೆಸರು ಗದ್ದೆಯಂತಾಗಿತ್ತು.
ರಸ್ತೆ ಡಾಂಬರೀಕರಣವಿರಲಿ ಕನಿಷ್ಠ ದುರಸ್ತಿಗೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಕಾರಣ ಗ್ರಾಮದ ಯುವಕರೇ ಒಂದಾಗಿ ದುರಸ್ತಿಗೆ ಮುಂದಾಗಿದ್ದು ಗುಂಡಿಗಳನ್ನು ಮುಚ್ಚುತ್ತಿದ್ದಾರೆ.ಗ್ರಾಮಸ್ಥರಾದ ಕೆ.ಎಸ್.ಮೋಹನ್, ವಿ.ರಾಮಾಂಜಿನಪ್ಪ, ಜಿ.ನರೇಶ್, ಕೆ.ಎಸ್.ಗಣೇಶ್, ಕೆ.ಎನ್.ನರೇಂದ್ರ, ಸುರೇಶ್, ಕೆ.ಎಸ್.ಶೇಖರ್, ಕೆ.ಆರ್.ಭಾಸ್ಕರ್, ನವೀನ್, ಹರೀಶ್ ಮತ್ತಿತರರು ಇದ್ದರು.