ಕೊಂಡದಮನೆಗೆ ಕಾಂಕ್ರೀಟ್ ರಸ್ತೆ ಭಾಗ್ಯ

kls road
ಕಳಸ ತಾಲೂಕಿನ ಕೊಂಡದಮನೆ ಗ್ರಾಮದ ಕಾಂಕ್ರೀಟ್ ರಸ್ತೆಯನ್ನು ನೋಡಿ ಸಂಭ್ರಮಿಸುತ್ತಿರುವ ಗ್ರಾಮಸ್ಥರು.
Published on

ಕಳಸ: ತಾಲೂಕಿನ ಕೊಂಡದಮನೆ ಗ್ರಾಮಸ್ಥರ ಹಲವು ದಶಕಗಳ ಬೇಡಿಕೆಯಾಗಿದ್ದ ಕಾಂಕ್ರೀಟ್ ರಸ್ತೆ ನಿರ್ಮಾಣ ನನಸಾಗಿದ್ದರಿಂದ ಗ್ರಾಮಸ್ಥರು ಸಂತಸದಲ್ಲಿದ್ದಾರೆ.

ಪಟ್ಟಣಕ್ಕೆ ಹತ್ತಿರ ಇರುವ, ಸುಮಾರು 15 ಗಿರಿಜನ ಕುಟುಂಬಗಳು ವಾಸಿಸುತ್ತಿರುವ ಕೊಂಡದಮನೆ ಗ್ರಾಮಕ್ಕೆ ಸಮರ್ಪಕ ರಸ್ತೆ ಇಲ್ಲದೆ ಸಾಕಷ್ಟು ತೊಂದರೆಪಡುತ್ತಿದ್ದರು. ರಸ್ತೆಯಲ್ಲಿ ಹೊಂಡ ಗುಂಡಿ ಇದ್ದುದರಿಂದ ಕಚ್ಚಾ ರಸ್ತೆಯಲ್ಲಿ ಸಂಚಾರ ನಿತ್ಯ ನರಕಯಾತನೆಯಾಗಿತ್ತು. ಮಳೆಗಾಲದಲ್ಲಿ ಕೆಸರು ತುಂಬಿದ ರಸ್ತೆಯಲ್ಲಿ ಮಾರುದ್ದ ಗುಂಡಿಗಳಿಂದ ಗ್ರಾಮಕ್ಕೆ ತೆರಳಲು ತೊಂದರೆ ಅನುಭವಿಸುತ್ತಿದ್ದರು. ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಂತೂ ದಿನ ನಿತ್ಯ ಐದು ಕಿ.ಮೀ ನಡೆಯಲೇಬೇಕಿತ್ತು. ಬಾಡಿಗೆ ವಾಹನಗಳು ಇತ್ತ ಕಡೆ ಬರುತ್ತಿರಲಿಲ್ಲ.

ಗ್ರಾಮಕ್ಕೆ ತೆರಳುವ ರಸ್ತೆ ದುಸ್ಥಿತಿಯಿಂದ ಬೇಸತ್ತ ಗ್ರಾಮಸ್ಥರು ಬಹಳಷ್ಟು ಬಾರಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಮೊರೆ ಹೋಗಿ ಕೈಚೆಲ್ಲಿ ಕುಳಿತಿದ್ದರು. ಚುನಾವಣೆ ಬಹಿಷ್ಕಾರದ ಮುಖಾಂತರು ಬಿಸಿ ಮುಟ್ಟಿಸಿದ್ದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಆದರೆ ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕೊಂಡದಮನೆ ಗ್ರಾಮದ ಜನರಿಗೆ ತಾಪಂ ಮಾಜಿ ಸದಸ್ಯ ಮಹಮ್ಮದ್ ರಫೀಕ್ ಗ್ರಾಮದ ರಸ್ತೆಯನ್ನು ಕಾಂಕ್ರಿಟೀಕರಣ ಮಾಡಿಸಿಕೊಡುವ ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ ಚುನಾವಣೆ ನಂತರ ಶಾಸಕಿ ನಯನಾ ಮೋಟಮ್ಮ ಅವರ ಗಮನಕ್ಕೆ ತಂದು ಗ್ರಾಮಕ್ಕೆ ಕಾಂಕ್ರೀಟ್ ರಸ್ತೆ ನಿರ್ಮಿಸಿದ್ದಾರೆ. ಇದರಿಂದ ಗ್ರಾಮಸ್ಥರು ಸಂತಸದಲ್ಲಿದ್ದಾರೆ. ಮಹಮ್ಮದ್ ರಫೀಕ್ ಹಾಗೂ ಶಾಸಕಿ ನಯನಾ ಮೋಟಮ್ಮ ಅವರ ಕಾರ್ಯ, ವಿಶ್ವಾಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗ್ರಾಮಸ್ಥರಾದ ಲೋಹಿತ್, ರವೀಂದ್ರ, ಸೀತಮ್ಮ, ಯಶೋದಾ, ಲೋಕೇಶ್, ಅಶೋಕ, ಶೇಷ, ವೆಂಕಟೇಶ್, ಬೆಳ್ಳಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net