ಕೊಂಡ ಹಾಯ್ದ ಭಕ್ತಗಣ

06 HANUR 1
Published on

ಹನೂರು: ತಾಲೂಕಿನ ಲೊಕ್ಕನಹಳ್ಳಿ ಗ್ರಾಮದಲ್ಲಿ ಗುರುವಾರ ವಿವಿಧ ದೇವರ ಉತ್ಸವ ಮೂರ್ತಿಯ ಮೆರವಣಿಗೆಯು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.


ಲೊಕ್ಕನಹಳ್ಳಿ ಗ್ರಾಮ ಸಮೀಪದ ಬೇಡೆಗೆರೆ ಕಾಡಂಚಿನಲ್ಲಿರುವ ಶ್ರೀ ಹಿಂಬಿ ಮಹದೇಶ್ವರ ದೇಗುಲದಲ್ಲಿ ಬುಧವಾರ ಸಂಜೆ ಕೊಂಡೋತ್ಸವ ನಡೆಯಿತು. ಈ ಸಂದರ್ಭದಲ್ಲಿ ಹರಕೆ ಹೊತ್ತ ಭಕ್ತರು ಕೊಂಡ ಹಾಯುವ ಮೂಲಕ ಭಕ್ತಿ ಪರಾಕಾಷ್ಠೆ ಮೆರೆದರು.

ಪ್ರತಿ ವರ್ಷದಂತೆಯೇ ಈ ವರ್ಷವೂ ವಿವಿಧ ದೇವರ ಉತ್ಸವ ಮೂರ್ತಿಗಳನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಿದ ಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆ ನಡೆಸಲಾಯಿತು. ಗುರುವಾರ ಬೆಳಗ್ಗೆ ಕಾಡಂಚಿನಲ್ಲಿರುವ ಶ್ರೀ ಹಿಂಬಿ ಮಹದೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಲಾಯಿತು. ಬಳಿಕ ಗ್ರಾಮಸ್ಥರು ಹಾಗೂ ಅರ್ಚಕರು ಸಂಪ್ರದಾಯದಂತೆ ಸತ್ತಿಗೆ, ಸೂರಿಪಾನಿ ಹಾಗೂ ವಾದ್ಯಮೇಳದೊಂದಿಗೆ ಲೊಕ್ಕನಹಳ್ಳಿ ಕೆರೆಯ ಬಳಿ ತೆರಳಿ ಬನ್ನಿಮರಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ಗ್ರಾಮ ದೇವತೆಗಳಾದ ಮುತ್ತುರಾಯಸ್ವಾಮಿ, ಪೆರುಮಾಳಸ್ವಾಮಿ, ಕೋಪರ ಹುಚ್ಚಮ್ಮ, ಷಣ್ಮುಗ, ಮಾರಮ್ಮ, ಸಂಪಿಗೇಶ್ವರ, ಬಸವ, ಕಂಚಿನ ಬಸವ, ಸಿದ್ದಪ್ಪಾಜಿ ದೇವರುಗಳನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಿ ಪೂಜೆ ಸಲ್ಲಿಸಲಾಯಿತು. ಬಳಿಕ ಸತ್ತಿಗೆ, ಸೂರಿಪಾನಿ ವಾದ್ಯಮೇಳದೊಂದಿಗೆ ಗ್ರಾಮದ ಮುಖ್ಯರಸ್ತೆ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ದೇವರ ಉತ್ಸವ ಮೂರ್ತಿಯ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು.

ಮೆರವಣಿಗೆಯಲ್ಲಿ ಗ್ರಾಮದ ಪ್ರತಿ ಕುಟುಂಬದವರು ಹಣ್ಣು ಕಾಯಿ ನೀಡಿ ಪೂಜೆ ಸಲ್ಲಿಸಿದರು. ಹರಕೆ ಹೊತ್ತ ಭಕ್ತರು ಈಡುಗಾಯಿ ಹೊಡೆದರು. ಭಕ್ತರು ಉತ್ಸವ ಮೂರ್ತಿಗಳಿಗೆ ಧನ, ಧಾನ್ಯ ಎಸೆದು ಪುನೀತರಾದರು. ಯುವಕರು ದಾರಿಯುದ್ದಕ್ಕೂ ಪಟಾಕಿ ಸಿಡಿಸಿ ವಾದ್ಯ ತಾಳಕ್ಕೆ ಕುಣಿದು ಕುಪ್ಪಳಿಸಿದರು.


ಪೂಜೆ ಸಲ್ಲಿಸಲು ಮುಗಿಬಿದ್ದರು: ಉತ್ಸವ ಮೂರ್ತಿಗಳು ಗ್ರಾಮದ ಬಡಾವಣೆಗಳಿಗೆ ತೆರಳುತ್ತಿದ್ದಂತೆಯೇ ಮಹಿಳೆಯರು ಹಣ್ಣು ಕಾಯಿ ನೀಡಿ ಪೂಜೆ ಸಲ್ಲಿಸಲು ಮುಗಿಬಿದ್ದರು. ಹನೂರು ಸೇರಿದಂತೆ ಕಂಡಯ್ಯನಪಾಳ್ಯ, ದೊಡ್ಡಮಾಲಾಪುರ, ಚಿಕ್ಕಮಾಲಾಪುರ, ಮಹಾಲಿಂಗನಕಟ್ಟೆ, ಸಿರಗೋಡು, ಸುಳಿಮೇಡು, ಆಂಡಿಪಾಳ್ಯ, ಬೂದಿಪಡಗ, ಕಡುವಾಳೆ, ಉದ್ದಟ್ಟಿ, ಒಡೆಯರಪಾಳ್ಯ, ಪಿ.ಜಿ. ಪಾಳ್ಯ, ಚನ್ನಾಲಿಂಗನಹಳ್ಳಿ, ಕಣ್ಣೂರು ಸೇರಿದಂತೆ ಹಲವು ಗ್ರಾಮಗಳಿಂದ ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net