ಕೊಂಚ ಬಿಡುವು ನೀಡಿದ ಮಳೆ

11hnr2 a
Published on

ಹೊನ್ನಾವರ: ತಾಲೂಕಿನಲ್ಲಿ ವಾರದಿಂದ ನಿರಂತರವಾಗಿ ಸುರಿದ ಮಳೆ ಮಂಗಳವಾರ ಬಿಡುವು ನೀಡಿದ್ದು, ನೀರು ನುಗ್ಗಿ ಆತಂಕಕ್ಕೀಡಾಗಿದ್ದ ನದಿತೀರದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ತಾಲೂಕಿನ ಗುಂಡಬಾಳ, ಭಾಸ್ಕೇರಿ ಹಾಗೂ ಬಡಗಣಿ ನದಿಗಳಲ್ಲಿ ನೀರಿನ ಹರಿವು ಸ್ವಲ್ಪ ಕಡಿಮೆಯಾಗಿದೆ. ಮನೆಗಳಿಗೆ ಹಾಗೂ ತೋಟಗಳಿಗೆ ನುಗ್ಗಿದ್ದ ನೀರು ನಿಧಾನವಾಗಿ ಇಳಿಯುತ್ತಿದೆ; ಇದರೊಂದಿಗೆ ಜನರಲ್ಲಿ ಆವರಿಸಿದ್ದ ಆತಂಕವೂ ಕಡಿಮೆಯಾಗುತ್ತಿದೆ. ಸೋಮವಾರ ಎಡೆಬಿಡದೇ ಮಳೆ ಸುರಿದು ಮನೆಗಳಿಗೆ ನೀರು ನುಗ್ಗಿದ್ದರಿಂದ ನೂರಾರು ಕುಟುಂಬಗಳು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದವು.

ಊಟದಲ್ಲಿ ಹುಳು: ಹೊನ್ನಾವರ ತಾಲೂಕಿನ ಸುರಕಟ್ಟೆಯಲ್ಲಿ ತೆರೆಯಲಾದ ಕಾಳಜಿ ಕೇಂದ್ರದಲ್ಲಿ ಮಂಗಳವಾರ ಮಧ್ಯಾಹ್ನ ನೀಡಲಾದ ಊಟದ ತಟ್ಟೆಯಲ್ಲಿ ಹುಳು ಕಾಣಿಸಿದವು. ವ್ಯವಸ್ಥೆಯ ವಿರುದ್ದ ಜನರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು. ಸರ್ಕಾರ ನಿಯೋಜಿಸಿದ ಅಡುಗೆಯವರು ಕಳಪೆ ಅಕ್ಕಿ ಬಳಸಿದ್ದರಿಂದ ಊಟದಲ್ಲಿ ಹುಳು ಸಿಕ್ಕಿದೆ ಎಂದು ಸಂತ್ರಸ್ತ ಗಣೇಶ ಗೌಡ ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net