

ಚಾಮರಾಜನಗರ: ಚಾಮರಾಜನಗರ ತಾಲೂಕಿನ ಗಡಿಯಲ್ಲಿರುವ ತಮಿಳುನಾಡಿ ತಾಳವಾಡಿ ತಾಲೂಕಿನ ಕೊಂಗಳ್ಳಿ ಮಲ್ಲಿಕಾರ್ಜುನಸ್ವಾಮಿ ಬೆಟ್ಟದಲ್ಲಿ ಮಂಗಳವಾರ ಅದ್ಧೂರಿಯಾಗಿ ಕೊಂಡೋತ್ಸವ ನಡೆಯಿತು.
ಪ್ರತಿ ವರ್ಷ ನಡೆಯುವ ಕೊಂಡೋತ್ಸವದ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಮಲ್ಲಿಕಾರ್ಜುನ ಸ್ವಾಮಿ ಮೂರ್ತಿಯ ಉತ್ಸವ ನಡೆಯಿತು. ದೇವಾಲಯ ಮತ್ತು ದೇವರ ಮೂರ್ತಿಗೆ ವಿಶೇಷ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ದೇಗುಲದ ಗರ್ಭಗುಡಿಯಲ್ಲಿ ಜನಸಂದಣಿ ಹೆಚ್ಚಾಗಿತ್ತು. ಚಾಮರಾಜನಗರ ಮತ್ತು ತಾಳವಾಡಿ ಸಮೀಪದ ಸುತ್ತಮುತ್ತಲಿನ ಗ್ರಾಮಗಳ ಜನರು ಕೊಂಡೋತ್ಸವದಲ್ಲಿ ಪಾಲ್ಗೊಂಡರು. ದೇಗುಲದ ಅರ್ಚಕರ ಬಳಿಕ ಭಕ್ತರು ಕೊಂಡ ಹಾಯ್ದು ಹರಕೆ ತೀರಿಸಿದರು. ಕೊಂಡೋತ್ಸವಕ್ಕೆ ಕಲಾ ತಂಡಗಳು ಮೆರುಗು ತಂದವು.
ಪುರುಷರ ಕೊಂಡೋತ್ಸವ: ಜಾತ್ರೆ, ಉತ್ಸವಗಳಲ್ಲಿ ಮಹಿಳೆಯರು ಇದ್ದೇ ಇರುತ್ತಾರೆ. ಆದರೆ ಕೊಂಗಳ್ಳಿ ಮಲ್ಲಿಕಾರ್ಜುನಸ್ವಾಮಿ ಬೆಟ್ಟದ ಜಾತ್ರೆಗಳಲ್ಲಿ ಪುರುಷರು ಮಾತ್ರ ಕಾಣಿಸಿಗುತ್ತಾರೆ. ದೇಗುಲಕ್ಕೆ ಮಹಿಳೆಯರು ಬರುವುದು ನಿಷಿದ್ಧ. ಇದನ್ನು ಹಿಂದಿನ ಕಾಲದಿಂದಲೂ ನಂಬಿಕೆಯಾಗಿ ಉಳಿಸಿಕೊಂಡು ಬರಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೊಂಡೋತ್ಸವದಲ್ಲಿ ಪುರುಷರು ಮಾತ್ರ ಕಾಣಿಸಿಕ್ಕರು.