ಕೊಂಕಣಿ ಭಾಷೆಯ ಶಕ್ತಿ ಅರಿಯಿರಿ

21 vikram 8
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕೊಂಕಣಿ ಭಾಷೆ ನಮ್ಮ ಅತ್ಯಂತ ಪ್ರಿಯವಾದ ಭಾಷೆ. ಈ ಭಾಷೆಯಲ್ಲಿ ಮೃದುತ್ವ ಹಾಗೂ ಬಾಂಧವ್ಯ ಬೆಸೆಯುವ ಕಲೆ ಇದೆ ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ ಮಾಜಿ ಅಧ್ಯಕ್ಷ ಆರ್.ಪಿ. ನಾಯ್ಕ ಅಭಿಪ್ರಾಯಪಟ್ಟರು.
ನಗರದ ಕವಿವಿಯ ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದಲ್ಲಿ ಕರ್ನಾಟಕ ವಿಶ್ವ ವಿದ್ಯಾಲಯದ ಕೊಂಕಣಿ ಅಧ್ಯಯನ ಪೀಠ ಹಾಗೂ ಪ್ರಜ್ವಲ ಹವ್ಯಾಸಿ ಕನ್ನಡ ಹಾಗೂ ಕೊಂಕಣಿ ಕಲಾ ಸಂಘ ವತಿಯಿಂದ ಭಾನುವಾರ ಏರ್ಪಡಿಸಿದ್ದ ಕೊಂಕಣಿ ಮಾನ್ಯತಾ ದಿವಸ-2023 ಉದ್ಘಾಟಿಸಿ ಅವರು ಮಾತನಾಡಿದರು.
ಯುವ ಸಮುದಾಯ ಹೆಚ್ಚು ಕೊಂಕಣಿ ಮಾತನಾಡುವ ಮೂಲಕ ಭಾಷೆ ಬೆಳೆಸಬೇಕು. ಇದರಿಂದ ಮಕ್ಕಳಲ್ಲಿ ಒಳ್ಳೆ ಸಂಸ್ಕೃತಿ ಬೆಳೆಯಲಿದೆ. ಕೊಂಕಣಿ ಭಾಷೆಯಲ್ಲಿ ಇರುವ ಶಕ್ತಿಯನ್ನು ಪಾಲಕರು ಮಕ್ಕಳಿಗೆ ತಿಳಿಸಬೇಕು ಎಂದರು.
ಡಾ. ಚಿತ್ರಾ ಪ್ರಭು ಮಾತನಾಡಿ, ಇಂದು ಶಾಲೆ-ಕಾಲೇಜುಗಳಲ್ಲಿ ಕೊಂಕಣಿ ಭಾಷೆಗೆ ಮಾನತ್ಯೆ ಸಿಕ್ಕಿದ್ದು, ಮಕ್ಕಳು ಇದರ ಲಾಭ ಪಡೆಯಬೇಕು. ಭಾಷೆಗೆ ಗೌರವ ನೀಡುವುದು ಮುಖ್ಯ. ಈ ನಿಟ್ಟಿನಲ್ಲಿ ಕೊಂಕಣಿ ಭಾಷಿಕ ಸಮುದಾಯಗಳು ಗಮನಹರಿಸಬೇಕು ಎಂದರು.
ರಮಾಕಾಂತ ಮಹಾಲೆ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕೊಂಕಣಿ ಅಧ್ಯಯನ ಪೀಠದ ಸಂಯೋಜಕ ಡಾ. ಉದಯ ರಾಯಕರ ಮಾತನಾಡಿ, ಕೊಂಕಣಿ ಭಾಷೆಯನ್ನು ಪಠ್ಯದಲ್ಲಿ ಅಳವಡಿಸಲು ಸಿದ್ಧತೆ ನಡೆದಿದೆ. ಸದ್ಯದಲ್ಲೇ ತರಗತಿ ಆರಂಭಿಸುವ ಪ್ರಯತ್ನವಾಗಲಿದೆ. ಬೇಗನೆ ಕೊಂಕಣಿ ಅಧ್ಯಯನ ಪೀಠ ಆರಂಭಿಸಿ, ವಿದ್ಯಾರ್ಥಿಗಳ ಅನುಕೂಲಕ್ಕೆ ಶ್ರಮಿಸಲಾಗುತ್ತಿದೆ. ಸರ್ಕಾರದ ಜತೆಗೆ ನಿರಂತರ ಸಂಪರ್ಕ ಸಾಧಿಸಿ ಶೀಘ್ರವೇ ಅನುದಾನ ತಂದು ಕಾರ್ಯಾರಂಭ ಮಾಡಲಾಗುವುದು ಎಂದರು.
ಪ್ರಜ್ವಲ ಹವ್ಯಾಸಿ ಕನ್ನಡ ಹಾಗೂ ಕೊಂಕಣಿ ಕಲಾ ಸಂಘದ ಅಧ್ಯಕ್ಷ ಕಿರಣ ಮಹಾಲೆ, ಸುರೇಂದ್ರ ಪಾಲನಕರ, ವಿದ್ಯಾರ್ಥಿಗಳು, ಇತರರು ಇದ್ದರು.
ಡಾ. ವಸಂತ ಬಾಂದೇಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತೋಷ ಮಹಾಲೆ ನಿರೂಪಿಸಿದರು. ಕೃತಿಕಾ ಮಹಾಲೆ ವಂದಿಸಿದರು. ನಂತರ ಕೊಂಕಣಿ ಭಾಷೆಯಲ್ಲಿ ಗಾಯನ ಮತ್ತು ನೃತ್ಯ ಪ್ರದರ್ಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net