

ಮಂಗಳೂರು: ದೇಶದಲ್ಲಿ ಕೊಂಕಣಿ ಭಾಷೆ ಮಾತನಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುವ ಜನಗಣತಿ ವರದಿಗಳನ್ನು ಗಂಭೀರವಾಗಿ ಪರಿಗಣಿಸಿರುವ ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರ ಜನಜಾಗೃತಿ ಕ್ರಮಕ್ಕೆ ಮುಂದಾಗಿದೆ. ಗಣತಿ ವೇಳೆ ನೀಡುವ ತಪ್ಪು ಮಾಹಿತಿಯಿಂದ ಈ ರೀತಿ ಆಗುತ್ತಿದೆಯೇ ಅಥವಾ ನಿಜವಾಗಿಯೂ ಕೊಂಕಣಿ ಮಾತನಾಡುವವರು ಕಡಿಮೆಯಾಗುತ್ತಿದ್ದಾರೆಯೇ ಎನ್ನುವುದು ಸದ್ಯ ಕೇಂದ್ರದ ಮುಂದಿರುವ ಪ್ರಶ್ನೆ. ಆದ್ದರಿಂದ 2021ರ ಜನಗಣತಿಗೂ ಮುನ್ನ ಕೊಂಕಣಿ ಭಾಷಿಗ ಎಲ್ಲ ಜಾತಿಗಳ ಜನರಲ್ಲಿ ಜಾಗೃತಿ ಮೂಡಿಸಲು ನಿರ್ಧರಿಸಲಾಗಿದೆ. ಸಂವಿಧಾನದ 8ನೇ ಪರಿಚ್ಛೇದಲ್ಲಿ ಸೇರ್ಪಡೆಯಾಗಿರುವ 22 ಭಾಷೆಗಳ ಪೈಕಿ ಕೊಂಕಣಿ ಒಂದು. ಈ ಭಾಷೆ ಮಾತನಾಡುವವರ ಸಂಖ್ಯೆ 2001 ಮತ್ತು 2011ರ ಜನಗಣತಿ ಪ್ರಕಾರ ಶೇ.9.3ರಷ್ಟು ಕುಸಿತ ಕಂಡಿತ್ತು. 2001ರಲ್ಲಿ 24,89,015 ಮಂದಿ ಭಾಷಿಗರಿದ್ದು, ಇದು 2011ರ ವೇಳೆಗೆ 22,55,502ಕ್ಕೆ ಇಳಿದಿದೆ ಎನ್ನುತ್ತವೆ ದಾಖಲೆಗಳು. ಅದರೆ ಇದು ಯಾವ ಕಾರಣಕ್ಕೆ ಹೀಗಾಗಿದೆ ಎನ್ನುವುದು ಈಗ ಕೊಂಕಣಿ ಸಂಘಟನೆಗಳ ಮುಂದಿರುವ ಪ್ರಶ್ನೆ.
ರಾಜ್ಯವಾರು ಮಾಹಿತಿ ತೆಗೆದುಕೊಂಡಾಗ 2001ರ ಗಣತಿಯಲ್ಲಿ ಗೋವಾದಲ್ಲಿ 7,69,888, ಕರ್ನಾಟಕ 7,68,039, ಕೇರಳ 61,376 ಮಂದಿ ಕೊಂಕಣಿ ಭಾಷೆ ಮಾತನಾಡುವವರಿದ್ದರು. 2011ರ ಗಣತಿಯಲ್ಲಿ ಈ ಪ್ರಮಾಣ ಹೆಚ್ಚಾಗಿ, ಗೋವಾ 9,64,305, ಕರ್ನಾಟಕ 7,88,294 ಮತ್ತು ಕೇರಳದಲ್ಲಿ 69,449 ಮಂದಿ ಇರುವುದು ದಾಖಲಾಗಿದೆ. ಆದರೆ ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳಲ್ಲಿ ಪ್ರಮಾಣ ಗಣನೀಯ ಇಳಿಕೆಯಾಗಿರುವುದು ಒಟ್ಟಾರೆ ಜನಸಂಖ್ಯೆ ಕುಸಿತವನ್ನು ತೋರಿಸುತ್ತಿದೆ. ಮಹಾರಾಷ್ಟ್ರದಲ್ಲಿ 6,58,259ರಿಂದ 3,99,255ಕ್ಕೆ ತಲುಪಿ ಶೇ.39.35 ಕುಸಿದಿದೆ. ಇತರ ರಾಜ್ಯಗಳಲ್ಲಿ 2,31,453ರಿಂದ 35,199 ಅಂದರೆ ಶೇ.84.79ರಷ್ಟು ಕಡಿಮೆಯಾಗಿದೆ.ಮುಖ್ಯವಾಗಿ ಮಹಾರಾಷ್ಟ್ರ ಹಾಗೂ ಇತರ ರಾಜ್ಯಗಳಲ್ಲಿ ಕೆಲವು ತಲೆಮಾರುಗಳಿಂದ ವಾಸವಾಗಿರುವ ಕೊಂಕಣಿಗರು ಸಹಜವಾಗಿ ಕೊಂಕಣಿಯನ್ನು ಮಾತೃಭಾಷೆಯನ್ನು ನಮೂದಿಸುವ ಬದಲು ಅಲ್ಲಿಯ ರಾಜ್ಯ ಭಾಷೆಯನ್ನು ದಾಖಲಿಸಿರುವ ಸಾಧ್ಯತೆಗಳು ಹೆಚ್ಚಿವೆ. ಇದು ಆತಂಕಕ್ಕೆ ಕಾರಣವಾಗಿದೆ.
ಪ್ರಸ್ತುತ ಒಂದು ಅಂದಾಜಿನ ಪ್ರಕಾರ 35 ಲಕ್ಷ ಕೊಂಕಣಿ ಭಾಷಿಗರು ದೇಶದಲ್ಲಿದ್ದಾರೆ. ಮುಂದಿನ ಗಣತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಕೊಂಕಣಿ ಭಾಷೆಯನ್ನು ದಾಖಲಿಸುವ ಕಾರ್ಯ ನಡೆಯಬೇಕು ಎನ್ನುವುದು ಇಲ್ಲಿನ ಸಂಘಟನೆಗಳ ನಾಯಕರ ಅಭಿಪ್ರಾಯ.
ಕ್ರಿಶ್ಚಿಯನ್ನರು, ಸಾರಸ್ವತರು, ಖಾರ್ವಿ, ಕುಡುಬಿ, ನವಾಯತರು ಸೇರಿದಂತೆ ಕೊಂಕಣಿ ಮಾತನಾಡುವ 42 ಸಮುದಾಯಗಳಿವೆ. ಮುಂದಿನ ಜನಗಣತಿಗೆ ಮುನ್ನ ಈ ಎಲ್ಲ ಸಮುದಾಯಗಳಲ್ಲಿ ಜಾಗೃತಿ ಮೂಡಿಸಲು ವಿಶ್ವ ಕೊಂಕಣಿ ಕೇಂದ್ರ ನಿರ್ಧರಿಸಿದೆ. ಗಣತಿದಾರರು ಮನೆಗೆ ಬಂದಾಗ ಇತರ ಮಾಹಿತಿಗಳ ಜತೆ ಕಡ್ಡಾಯವಾಗಿ ಮಾತೃಭಾಷೆ ಕೊಂಕಣಿ ಎಂದು ನಮೂದಿಸಬೇಕು ಎನ್ನುತ್ತಾರೆ ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಬಸ್ತಿ ವಾಮನ ಶೆಣೈ. ಭಾಷಿಗರ ಸಂಖ್ಯೆ ಹೆಚ್ಚಾಗುವುದರಿಂದ ಸರ್ಕಾರದ ಮೇಲೆ ಪ್ರಭಾವ ಸಾಧಿಸಿ, ವಿವಿಧ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗಲಿದೆ ಎನ್ನುವುದು ಅವರ ಅಭಿಮತ.
ಕೊಂಕಣಿ ಭಾಷಿಕರು ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ರಾಜ್ಯಗಳಲ್ಲಿ ಹರಡಿದ್ದಾರೆ. ಪ್ರಮಾಣ ಕಡಿಮೆಯಾಗುತ್ತಿರುವುದು ಆಘಾತಕಾರಿ. ಆದರೆ ನಮ್ಮ ಪ್ರಕಾರ ತಪ್ಪು ಮಾಹಿತಿಗಳಿಂದ ಹೀಗಾಗಿರಬಹುದು. ಮುಂದಿನ ಗಣತಿ ವೇಳೆ ಇದನ್ನು ಸರಿಪಡಿಸಲು ಉದ್ದೇಶಿಸಲಾಗಿದ್ದು, ಈ ಕುರಿತು ‘ಬಿಷಪ್’ ಸಹಿತ ಎಲ್ಲ ಸಮುದಾಯದ ಮುಖಂಡರಲ್ಲಿ ಮನವಿ ಮಾಡುವುದರ ಜತೆಗೆ ಜನರಲ್ಲೂ ಜಾಗೃತಿ ಮೂಡಿಸಲಾಗುವುದು.
- ಬಸ್ತಿ ವಾಮನ ಶೆಣೈ, ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ
ದೇಶದಲ್ಲಿ ಕೊಂಕಣಿ ಮಾತನಾಡುವವರ ಸಂಖ್ಯೆ ಕಡಿಮೆಯಾಗಿಲ್ಲ, ನಿಜಾರ್ಥದಲ್ಲಿ ಹೆಚ್ಚಾಗುತ್ತಿದೆ. ಆದರೆ 2001 ಮತ್ತು 2011ರ ಜನಗಣತಿ ಹೋಲಿಕೆ ಮಾಡಿದಾಗ ಇದು ಕಡಿಮೆಯಾಗುತ್ತಿದೆ ಎಂದು ಕಂಡುಬರುತ್ತದೆಯಾದರೂ ಇದನ್ನು ಒಪ್ಪಲು ಸಾಧ್ಯವಿಲ್ಲ. ಜನಗಣತಿ ಮಾಡುವವರ ತಪ್ಪು, ಮನೆಗಳಲ್ಲಿ ಸರಿಯಾಗಿ ಮಾಹಿತಿ ನೀಡದ ಕಾರಣವೂ ಇರಬಹುದು. ಮುಂದಿನ ಜನಗಣತಿಯಲ್ಲಿ ಈ ತಪ್ಪುಗಳು ಸರಿಪಡಿಸಿ, ನೈಜ ಅಂಕಿ ಅಂಶ ಸಿಗುವಂತಾಗಬೇಕು.
- ಪಯ್ಯನ್ನೂರು ರಮೇಶ್ ಪೈ, ಮಾಜಿ ಅಧ್ಯಕ್ಷ, ಕೊಂಕಣಿ ಸಾಹಿತ್ಯ ಅಕಾಡೆಮಿ, ಕೇರಳ