ಕೈವಾರ ತಾತಯ್ಯ ಜಯಂತಿ ಅದ್ದೂರಿ ಆಚರಣೆ : ತಾತಯ್ಯನವರ ತತ್ವಪದಗಾಯನ, ಕಂಚಿನ ಪ್ರತಿಮೆ ಅನಾವರಣ

2
Published on

ಕೋಲಾರ: ವರಕವಿ, ಕಾಲಜ್ಞಾನಿ ಕೈವಾರ ಶ್ರೀಯೋಗಿ ನಾರೇಯಣ ಯತೀಂದ್ರರ ಜಯಂತ್ಯುತ್ಸವ ಜಿಲ್ಲೆಯಾದ್ಯಂತ ಭಾನುವಾರ ಸಡಗರ ಹಾಗೂ ಶ್ರದ್ಧಾ ಭಕ್ತಿಯಿಂದ ನೆರವೇರಿತು.

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸತಿ ಇಲಾಖೆ, ಜಿಲ್ಲಾ ಬಲಿಜ ಸಂಘ, ಬಲಿಜ ನೌಕರರ ಸೇವಾ ಟ್ರಸ್ಟ್​, ಶ್ರೀ ಯೋಗಿನಾರೇಯಣ ಚಾರಿಟಬಲ್​ ಟ್ರಸ್ಟ್​ ಮತ್ತು ಸಮುದಾಯದ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಶಾಸಕ ಕೆ.ಶ್ರೀನಿವಾಸಗೌಡ ಉದ್ಘಾಟಿಸಿ ಮಾತನಾಡಿದರು.

ಕೈವಾರ ತಾತಯ್ಯನವರು ಸಮಾಜ ಸುಧಾರಕರಾಗಿದ್ದು, ಅವರು ತೋರಿದ ಮಾರ್ಗದಲ್ಲಿ ಪ್ರತಿಯೊಬ್ಬರೂ ಸಾಗಬೇಕಿದೆ. ಅವರು ರಚಿಸಿದ ಕಾಲಜ್ಞಾನದಲ್ಲಿ ಜಗತ್ತು ಅರಿಯಬೇಕಾದ ಅನೇಕ ಅಂಶಗಳಿವೆ. ಅವರ ತತ್ವ, ತೋರಿದ ಮಾರ್ಗದರ್ಶನ ಪಾಲಿಸಿದರೆ ಎಲ್ಲೆಡೆ ಶಾಂತಿ ನೆಲೆಸುವುದರಲ್ಲಿ ಸಂಶಯವಿಲ್ಲ. ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ತಾತಯ್ಯನವರು ಜನ್ಮತಾಳಿದ್ದು ನಮ್ಮೆಲ್ಲರ ಪುಣ್ಯ. ಅಂತಹ ಮಹಾನುಭಾವರ ಜಯಂತ್ಯುತ್ಸವವನ್ನು ಜಾತಿ, ಮತ, ಭೇದವಿಲ್ಲದೆ ಎಲ್ಲರೂ ಅದ್ದೂರಿಯಾಗಿ ಆಚರಿಸುವಂತಾಗಬೇಕು ಎಂದರು.

ಪಿಚ್ಚಳ್ಳಿ ಶ್ರೀನಿವಾಸ್​ ಮತ್ತು ತಂಡದವರಿಂದ ತಾತಯ್ಯನವರ ತತ್ವಪದಗಾಯನ ನಡೆಯಿತು.

ಅದ್ದೂರಿ ಮೆರವಣಿಗೆ: ನಗರ ಮತ್ತು ಗ್ರಾಮಾಂತರ ಪ್ರದೇಶದಿಂದ ಬಂದಿದ್ದ 15ಕ್ಕೂ ಹೆಚ್ಚು ಉತ್ಸವ ಮೂರ್ತಿಗಳು ಮತ್ತು ಭಾವಚಿತ್ರದ ಪಲ್ಲಕ್ಕಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ರಂಗಮಂದಿರ ಬಳಿಯಿಂದ ಬಂಗಾರಪೇಟೆ ರಸ್ತೆ, ಅಂಬೇಡ್ಕರ್​ ವೃತ್ತ, ಡೂಂಲೈಟ್​ ವೃತ್ತದ ಮೂಲಕ ಸಾಗಿ ಬಂದ ಮೆರವಣಿಗೆಯಲ್ಲಿ ನೂರಾರು ಭಕ್ತರು ಮತ್ತು ಬಲಿಜ ಸಮುದಾಯದವರು ಭಾಗವಹಿಸಿದ್ದರು. ಮೆರವಣಿಗೆ ಟೇಕಲ್​ ವೃತ್ತದ ಬಳಿ ಸಮಾವೇಶಗೊಂಡಿತು.

ಮೆರವಣಿಗೆ ನಂತರ ರಂಗಮಂದಿರದಲ್ಲಿ ಜಿಲ್ಲಾ ಯೋಗಿ ನಾರೇಯಣ ಚಾರಿಟಬಲ್​ ಟ್ರಸ್ಟ್​, ಜಿಲ್ಲಾ ಕಸಾಪ ಸಹಯೋಗದಲ್ಲಿ ತತ್ವಪದ ಗಾಯನ ನಡೆದಿದ್ದು, ಸಮಾರೋಪ ಸಮಾರಂಭದಲ್ಲಿ ಗಾಯನ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಪುತ್ಥಳಿ ಅನಾವರಣ: ವೇಣುಗೋಪಾಲಸ್ವಾಮಿ ಪುಷ್ಕರಣಿ ಬಳಿ ಪ್ರತಿಷ್ಠಾಪಿಸಿರುವ ಮಂಟಪದಲ್ಲಿ 4.5 ಅಡಿ ಎತ್ತರದ 104 ಕೆ.ಜಿ ತೂಕದ ತಾತಯ್ಯನವರ ಕಂಚಿನ ಪ್ರತಿಮೆ ಅನಾವರಣಗೊಳಿಸಲಾಯಿತು.

ವಿಧಾನ ಪರಿಷತ್​ ಸದಸ್ಯ ಅನಿಲ್​ಕುಮಾರ್​, ನಗರಸಭೆ ಅಧ್ಯಕ್ಷೆ ಶ್ವೇತಾ ಶಬರೀಶ್​, ಉಪಾಧ್ಯಕ್ಷ ಪ್ರವಿಣ್​ಗೌಡ, ಬಲಿಜ ಸಂಘದ ಜಿಲ್ಲಾಧ್ಯಕ್ಷ ಕೆ.ಎನ್​.ರವೀಂದ್ರಕುಮಾರ್​, ಜಯಂತಿ ಉಸ್ತುವಾರಿ ಸಮಿತಿ ಅಧ್ಯಕ್ಷ ಎಂ.ವಿ.ರಘು, ಜಿಲ್ಲಾ ಯೋಗಿ ನಾರೇಯಣ ಚಾರಿಟಬಲ್​ ಟ್ರಸ್ಟ್​ ಪ್ರಧಾನ ಕಾರ್ಯದರ್ಶಿ ಕೆ.ವಿ.ಸುರೇಶ್​ ಕುಮಾರ್​, ನಿವೃತ್ತ ಡಿವೈಎಸ್​ಪಿ ವೆಂಕಟಸ್ವಾಮಿ, ಜಿಲ್ಲಾ ಬಲಿಜ ನೌಕರರ ಸೇವಾ ಟ್ರಸ್ಟ್​ನ ಅಧ್ಯಕ್ಷ ಎಸ್​.ಎಸ್​.ಶ್ರೀಧರ್​, ಮುಖಂಡರಾದ ನೃಪತುಂಗ, ರಾಜೇಶ್​, ಮಂಜುನಾಥ್​, ಸುರೇಶ್​, ಮುನಿಕೃಷ್ಣಪ್ಪ, ಅರುಣಮ್ಮ, ಸಾಮಾಬಾಬು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net