ಕೈಮಗ್ಗ ಉತ್ಪನ್ನಗಳಿಗೆ ಶೂನ್ಯ ಜಿಎಸ್​ಟಿ ವಿಧಿಸಿ

7 sgr 3
Published on

ಸಾಗರ: ಸ್ಥಳೀಯ ಉತ್ಪನ್ನಗಳ ಬಗ್ಗೆ ಪ್ರಧಾನಿ ಅವರಿಗೆ ನಿಜವಾದ ಕಾಳಜಿ ಇದ್ದಲ್ಲಿ ಕೂಡಲೇ ಕೈಮಗ್ಗದ ಉತ್ಪನ್ನಗಳಿಗೆ ಶೂನ್ಯ ಜಿಎಸ್​ಟಿ ವಿಧಿಸಬೇಕು ಎಂದು ಚರಕ ಸಂಸ್ಥೆಯ ಮಹಾಲ್ಷ್ಮ ಒತ್ತಾಯಿಸಿದರು.

ತಾಲೂಕಿನ ಹೊನ್ನೇಸರದ ಶ್ರಮಜೀವಿ ಆಶ್ರಮದಲ್ಲಿ ಚರಕ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ಮಹಿಳೆಯರು ಶá-ಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಕೈಮಗ್ಗದ ದಿನ ಕಾರ್ಯಕ್ರಮದಲ್ಲಿ ಮಾತನಾಡಿ ಕೈಮಗ್ಗ ಶ್ರಮಜೀವಿಗಳ ಪ್ರತೀಕ. ಗ್ರಾಮೀಣ ಜನತೆ ಅದರಲ್ಲಿಯೂ ಹೆಣ್ಣುಮಕ್ಕಳು ಈ ಉದ್ಯಮ ನಂಬಿಕೊಂಡು ಬದುಕುವುದಲ್ಲದೆ ಸವಾಲು ಸ್ವೀಕರಿಸಿ ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಕೈಮಗ್ಗದ ನೇಕಾರಿಕೆ ಪವಿತ್ರವಾದ ಕಾಯಕವಾಗಿದೆ. ಈ ಕಾಯಕವೇ ಭೂಮಿ ಉಳಿಸಲಿದೆ. ಕೇಂದ್ರ ಸರ್ಕಾರ ಕೇವಲ ಹೆಸರಿಗೆ ಕೈಮಗ್ಗ ದಿನ ಆಚರಿಸುತ್ತಿದೆ. ಇನ್ನೊಂದೆಡೆ ಭಾರತೀಯ ಕೈಮಗ್ಗ ಮಂಡಳಿಯನ್ನು ಕಿತ್ತೊಗೆದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವಿನ್ಯಾಸಕಿ ಹಾಗೂ ಕಲಾವಿದೆ ಪದ್ಮಶ್ರೀ ಮಾತನಾಡಿ, ಕೈಮಗ್ಗ ದಿನ ಕೇವಲ ಒಂದು ದಿನದ ಆಚರಣೆಯಾಗದೆ ನಾವು ಇತರರಿಗೆ ಕೈಮಗ್ಗದ ಮಹತ್ವ ತಿಳಿಸಿ, ಬಹಳಷ್ಟು ಜನ ಇದನ್ನು ತೊಡುವ ಹಾಗೂ ಗೌರವಿಸುವೆಡೆಗೆ ಹೆಚ್ಚು ಕೆಲಸ ನಿರ್ವಹಿಸಬೇಕು ಎಂದರು.

ಗ್ರಾಮ ಸೇವಾ ಸಂಘದ ಅಭಿಲಾಷ್ ಮಾತನಾಡಿ, ಇಂದು ಕೈಮಗ್ಗದ ಕೆಲಸದಲ್ಲಿರುವವರು ಇದು ಭವಿಷ್ಯದ ಉದ್ಯೋಗ ಎಂದು ಜನರಿಗೆ ಮನವರಿಕೆಯಾಗಿದೆ. ಇದರಿಂದ ನಾವು ಕಳೆದುಕೊಂಡ ಆತ್ಮವಿಶ್ವಾಸ ಮತ್ತೆ ಮೂಡಲಿ. ಸದ್ಯದ ಕರೊನಾ ಪರಿಸ್ಥಿತಿಗೆ ಕಾರಣವಾದ ಎಲ್ಲ ಪರಿಸರ ವಿರೋಧಿ ಕೈಗಾರಿಕೆಗಳಿಗೂ ಸದ್ಯದ ಬಿಕ್ಕಟ್ಟು ಒಂದು ಪಾಠವಾಗಲಿ, ನಮಗೆ ಒದಗಿರುವ ತಾತ್ಕಾಲಿಕ ಬಿಕ್ಕಟ್ಟನ್ನು ಧೈರ್ಯದಿಂದ ಎದುರಿಸೋಣ ಎಂದು ಹೇಳಿದರು.

ಪವಿತ್ರ ವಸ್ತ್ರ ಅಭಿಯಾನ: ಮುಂದಿನ ದಿನಗಳಲ್ಲಿ ‘ಪವಿತ್ರ ವಸ್ತ್ರ ಅಭಿಯಾನದ ಮೂಲಕ ಬಡವರ ಕೈಮಗ್ಗದ ಬಟ್ಟೆಯನ್ನು ಬಟ್ಟೆಯನ್ನು ಮಾರಲಿದ್ದು ಪವಿತ್ರ ಕೆಲಸದಲ್ಲಿ ಜನರು ಪಾಲ್ಗೊಳ್ಳುವಂತೆ ಚರಕ ಕಾರ್ಯದರ್ಶಿ ರಮೇಶ್ ಮನವಿ ಮಾಡಿದರು. ಪ್ರಸ್ತುತ ಬಿಕ್ಕಟ್ಟನ್ನು ನಾವೆಲ್ಲ ಮತ್ತಷ್ಟು ಒಟ್ಟಾಗಿ, ನಮ್ಮ ಆತ್ಮಬಲದ ಮೇಲೆ ನಂಬಿಕೆ ಇಟ್ಟು ಕಾರ್ಯನಿರ್ವಹಿಸುವ ಮುಖಾಂತರ ಎದುರಿಸಬೇಕಿದೆ. ಪ್ರಸ್ತುತ ಸಂದರ್ಭ ಎಲ್ಲ ಆರ್ಥಿಕ ವಲಯಕ್ಕೂ ಸಮಸ್ಯೆ ತಂದೊಡ್ಡಿದೆ, ಆದರೆ, ಪವಿತ್ರ ಗ್ರಾಮೋದ್ಯೋಗದ ಮಾದರಿಯಾದ ಚರಕ ಹಾಗೂ ದೇಸಿ ಭವಿಷ್ಯದ ಗ್ರಾಮೀಣ ಕೈಗಾರಿಕೆಗಳಿಗೆ ಮಾದರಿಯಾಗಿವೆ. ಇದೀಗ ಚರಕದ ನೇಕಾರರಿಗೆ ಕೆಲಸ ನಿಲ್ಲಿಸದೆ ಇರುವ ಕಾರಣ 85 ಸಾವಿರ ಮೀಟರ್ ನೈಸರ್ಗಿಕಬಣ್ಣದ ಕೈಮಗ್ಗದ ಬಟ್ಟೆ ಸಂಗ್ರಹವಾಗಿದೆ. ಬಡ ನೇಕಾರರು ತಮ್ಮ ಕೈಯಿಂದ ನೇಯ್ದ ಈ ಬಟ್ಟೆ ಪವಿತ್ರವಾಗಿದ್ದು, ಜನರು ಕೊಳ್ಳುವುದು ಒಂದು ಜವಾಬ್ದಾರಿಯಾಗಿದೆ ಎಂದರು.

ಚರಕದ ಕಾರ್ಯದರ್ಶಿ ರಮೇಶ್, ಮುಖ್ಯವ್ಯವಸ್ಥಾಪಕಿ ಭಾಗೀರಥಿ, ಪದಾಧಿಕಾರಿಗಳಾದ ದಾಕ್ಷಾಯಣಿ, ಮಂಗಳಾ, ನಾಗರತ್ನಾ, ಪುಷ್ಪಾ, ಸಿಬ್ಬಂದಿ ಇದ್ದರು.

ಎಲ್ಲರೂ ಕೈಮಗ್ಗದ ಉತ್ಪನ್ನಗಳಿಗೆ ಕೂಡಲೇ ಕೇಂದ್ರ ಸರ್ಕಾರ ಶೂನ್ಯ ಜಿಎಸ್​ಟಿ ವಿಧಿಸಬೇಕು. ಆಮೂಲಕ ತಮ್ಮ ಸ್ವದೇಶಿಯೆಡೆಗಿನ ಬದ್ಧತೆಯನ್ನು ಪ್ರದರ್ಶಿಸಬೇಕು.

| ಗೌರಮ್ಮ, ಚರಕ ಅಧ್ಯಕ್ಷೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net