ಕೈದಿಗಳು ಮೃತಪಟ್ಟ ಪ್ರಕರಣ: ನಶೆಗಾಗಿ ಎಸೆನ್ಸ್ ಸೇವಿಸಿರುವ ಶಂಕೆ

mysore
Published on

ಮೈಸೂರು: ಮೈಸೂರು ಕೇಂದ್ರ ಕಾರಾಗೃಹದ ಮೂವರು ಸಜಾ ಕೈದಿಗಳು ಕೇಕ್‌ಗೆ ಮಿತಿಮೀರಿದ ಪ್ರಮಾಣದಲ್ಲಿ ಎಸೆನ್ಸ್ ಬೆರೆಸಿ ತಿಂದು ಮೃತಪಟ್ಟಿರುವ ಪ್ರಕರಣದಲ್ಲಿ ಆತ್ಮಹತ್ಯೆ ಉದ್ದೇಶವಿಲ್ಲ. ನಶೆಗಾಗಿ ಇದನ್ನು ತೆಗೆದುಕೊಂಡಿರುವ ಅನುಮಾನವಿದೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಟಿ.ಶ್ಯಾಮ್‌ಭಟ್ ಹೇಳಿದರು.

ಮೂವರು ಕೈದಿಗಳು ಮೃತಪಟ್ಟ ಪ್ರಕರಣದ ಹಿನ್ನೆಲೆಯಲ್ಲಿ ಸೋಮವಾರ ಮೈಸೂರು ಕೇಂದ್ರ ಕಾರಾಗೃಹ ಮತ್ತು ಕೆ.ಆರ್.ಆಸ್ಪತ್ರೆಗೆ ಭೇಟಿ ನೀಡಿ ದಾಖಲೆ ಪರಿಶೀಲಿಸಿದರು. ಕಾರಾಗೃಹ ಅಧಿಕಾರಿಗಳು, ಆಸ್ಪತ್ರೆ ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ನಗರದ ಕೇಂದ್ರ ಕಾರಾಗೃಹದ ಮೂವರು ಸಜಾ ಕೈದಿಗಳಾದ ಗುಂಡ್ಲುಪೇಟೆ ನಿವಾಸಿ ಮಾದೇಶ, ಕೊಳ್ಳೇಗಾಲ ನಿವಾಸಿ ನಾಗರಾಜ್, ಅತ್ಯಾಚಾರ ಪ್ರಕರಣದ ಅಪರಾಧಿ ಸಕಲೇಶಪುರ ನಿವಾಸಿ ರಮೇಶ್ ಮೃತಪಟ್ಟಿದ್ದರು.

ಕಾರಾಗೃಹದಲ್ಲಿನ ಬೇಕರಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಇವರು, ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ಡಿಸೆಂಬರ್ 24ರಂದು ಕೆಲಸದ ನಡುವೆ ಕೇಕ್‌ಗೆ ಮಿತಿ ಮೀರಿದ ಪ್ರಮಾಣದಲ್ಲಿ ಎಸೆನ್ಸ್ ಬೆರೆಸಿ ತಿಂದಿದ್ದರು. ಇದರಿಂದ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಜೈಲು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಕೆ.ಆರ್. ಆಸ್ಪತ್ರೆಗೆ ದಾಖಲಾದಾಗ ಮೃತಪಟ್ಟಿದ್ದರು ಎಂದು ಘಟನೆಯನ್ನು ವಿವರಿಸಿದರು.

ಈ ಕುರಿತು ಮಾಧ್ಯಮದಲ್ಲಿ ಪ್ರಕಟವಾದ ವರದಿ ಆಧರಿಸಿ ಕಾರಾಗೃಹ ಮತ್ತು ಕೆ.ಆರ್.ಆಸ್ಪತ್ರೆಗೆ ಭೇಟಿ ನೀಡಿದ್ದು, ಈ ಮೂವರಿಗೆ ನೀಡಿದ ಚಿಕಿತ್ಸಾ ವರದಿ, ಕೆಲ ದಾಖಲೆಗಳನ್ನು ಪರಿಶೀಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮೇಲ್ನೋಟಕ್ಕೆ ಎಸೆನ್ಸ್ ಸೇವಿಸಿದ ಕಾರಣದಿಂದ ಮೂವರು ಕೈದಿಗಳ ಸಾವು ಸಂಭವಿಸಿದೆ ಎಂದು ವೈದ್ಯರು ಕೂಡ ಅಭಿಪ್ರಾಯಪಟ್ಟಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಇನ್ನೂ ಬಂದಿಲ್ಲ. ಇನ್ನೂ ಎರಡು ವಾರದದೊಳಗೆ ಅದು ಬರುವ ನಿರೀಕ್ಷೆ ಇದೆ. ಬಳಿಕ ಮೂವರ ಸಾವಿಗೆ ನಿಖರ ಕಾರಣ ಏನೆಂದು ತಿಳಿಯಲಿದೆ ಎಂದು ತಿಳಿಸಿದರು.

ಮೂವರಿಗೆ ಗ್ಯಾಸ್ಟ್ರಿಕ್ ಸಮಸ್ಯೆ ಇರಬಹುದು ಎಂದು ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಜನವರಿ 1ರಂದು ಮಾದೇಶ್ ಕಿಡ್ನಿ ವೈಫಲ್ಯವಾಗಿದೆ. ಬಳಿಕ ಮೂವರು ಎಸೆನ್ಸ್ ಸೇವನೆ ಮಾಡಿರುವುದಾಗಿ ತಿಳಿಸಿದ್ದಾರೆ. ಆಗ ಅವರಿಗೆ ಡಯಾಲಿಸ್ ಚಿಕಿತ್ಸೆ ಮಾಡಲಾಗಿದೆ. ಈ ಸಮಸ್ಯೆಗೆ ಇದೊಂದೇ ಚಿಕಿತ್ಸೆ ಎಂದರು.

ಮೂವರಿಗೂ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶವಿರಲಿಲ್ಲ. ಇದನ್ನೇ ವೈದ್ಯರು, ಸಂಬಂಧಿಕರೂ ಹೇಳಿದ್ದಾರೆ. ಆದರೆ, ಎಸೆನ್ಸ್ ಬಾಟಲಿ ಮೇಲೆ ‘ರಮ್ ಎಕ್ಸ್‌ಲೆಂಟ್’ ನಮೂದಿಸಲಾಗಿದೆ. ಇದನ್ನು ಗಮನಿಸಿ ನಶೆ ಬರಲಿ ಎಂಬ ಕಾರಣಕ್ಕೆ ಸೇವನೆ ಮಾಡಿರುವ ಅನುಮಾನವಿದೆ. ಈ ಕುರಿತು ದಾಖಲೆಗಳಿಲ್ಲ ಎಂದು ಹೇಳಿದರು.

ಒಂದು ಕೆಜಿ ಕೇಕ್ ತಯಾರಿಕೆಗೆ 4 ಎಂಎಲ್ ಎಸೆನ್ಸ್ ಬಳಸಲಾಗುತ್ತದೆ. ಅಂದು 15 ಕೆಜಿ ಕೇಕ್ ತಯಾರಿಕೆಗೆ 60 ಎಂಎಲ್ ಈ ದ್ರವ್ಯವನ್ನು ನೀಡಲಾಗಿತ್ತು. 5 ಎಂಎಲ್ ಎಸೆನ್ಸ್ ಸೇವಿಸಿದರೆ ಸಾಕು ವ್ಯಕ್ತಿ ಸಾಯುತ್ತಾನೆ. ಅಂತಹದರಲ್ಲಿ ಈ ಮೂವರು 60 ಎಂಎಲ್ ಸೇವನೆ ಮಾಡಿದ್ದಾರೆ ಎಂದರು.

ಜೈಲು ಅಧಿಕಾರಿಗಳ ಸಮ್ಮುಖದಲ್ಲೇ ನಡೆಯಲಿ

ಮುಂದೆ ಈ ರೀತಿಯ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಲು ಜೈಲಿನ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಮೈಸೂರು ಸೇರಿದಂತೆ ರಾಜ್ಯದ ಎಲ್ಲ ಕಾರಾಗೃಹಗಳಲ್ಲಿರುವ ವಿವಿಧ ತಯಾರಿಕಾ ಘಟಕಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವಂತೆ ಸೂಚಿಸಲಾಗಿದೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಟಿ.ಶ್ಯಾಮ್ ಭಟ್ ತಿಳಿಸಿದರು.

ಎಸೆನ್ಸ್ ಬಳಕೆ ಜೈಲು ಅಧಿಕಾರಿಗಳ ಸಮ್ಮುಖದಲ್ಲೇ ನಡೆಯಬೇಕು. ಅವರು ಈ ಕುರಿತು ನಿಗಾ ವಹಿಸಬೇಕು ಎಂದು ಜೈಲು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.

ನಿದ್ರೆ ಮಾತ್ರೆಯನ್ನು ನೇರವಾಗಿ ಕೈದಿಗಳ ಕೈಗೆ ಕೊಡುವಂತಿಲ್ಲ. ಅವರು ಅದನ್ನು ಎರಡು ಮೂರು ದಿನ ಹಾಗೇ ಇಟ್ಟುಕೊಂಡು ಒಂದೇ ಸಲ ಸೇವನೆ ಮಾಡುವ ಸಾಧ್ಯತೆ ಇರುತ್ತದೆ. ಹೀಗಾಗಿ, ಜೈಲಿನ ವಾರ್ಡನ್ ಅವರ ಕೈಗೆ ಕೊಟ್ಟು, ಅವರು ಆ ಕೈದಿಗಳಿಗೆ ನೀಡಿ ಸೇವನೆ ಮಾಡುವಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶಿಸಲಾಗಿದೆ ಎಂದು ತಿಳಿಸಿದರು.

ಮೈಸೂರು ಕಾರಾಗೃಹದಲ್ಲಿ ಗಾಂಜಾ, ಡ್ರಗ್ಸ್ ಸೇರಿದಂತೆ ಮಾದಕ ವಸ್ತುಗಳು ಪತ್ತೆಯಾಗಿಲ್ಲ. ಆದಾಗ್ಯೂ, ಮುನ್ನೆಚ್ಚರಿಕಾ ಕ್ರಮವಾಗಿ ಸಿಸಿ ಕ್ಯಾಮರಾ ಕಣ್ಗಾವಲು ಇಡುವಂತೆ ಸೂಚಿಸಲಾಗಿದೆ. ಮೇಲಿಂದ ಮೇಲೆ ತಪಾಸಣೆ ಮಾಡಬೇಕು. ಕೈದಿಗಳನ್ನು ಕೋರ್ಟ್‌ಗೆ ಹಾಜರುಪಡಿಸಿ ವಾಪಸ್ ಜೈಲಿಗೆ ಕರೆದುಕೊಂಡು ಬಂದಾಗಲೂ ತೀವ್ರವಾಗಿ ಪರಿಶೀಲಿಸಲು ಸೂಚಿಸಲಾಗಿದೆ ಎಂದರು.

ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕಿ ಡಾ.ಕೆ.ಆರ್.ದಾಕ್ಷಾಯಿಣಿ, ಕೆ.ಆರ್.ಆಸ್ಪತ್ರೆಯ ಪ್ರಭಾರ ಅಧೀಕ್ಷಕ ಡಾ.ದಿನೇಶ್, ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಪಿ.ಎಸ್.ರಮೇಶ್ ಇನ್ನಿತರರಿದ್ದರು.

ಅವಶ್ಯಕತೆ ಏನಿತ್ತು?

ಮೃತಪಟ್ಟ ಮೂವರು ಕಾರಾಗೃಹದ ಬೇಕರಿಯಲ್ಲಿ 2 ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದರು. ಹೀಗಾಗಿ, ಕೇಕ್ ತಯಾರಿಸಲು ಎಷ್ಟು ಪ್ರಮಾಣದಲ್ಲಿ ಎಸೆನ್ಸ್ ಹಾಕಬೇಕು, ಹೆಚ್ಚು ಬಳಸಿದರೆ ಏನಾಗುತ್ತದೆ ಎಂಬ ಅರಿವು ಕೂಡ ಇತ್ತು ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಎಸ್.ಕೆ.ವಂಟಿಗೋಡಿ ತಿಳಿಸಿದರು.

ಅಪಾಯಕಾರಿ ಎಂದು ತಿಳಿದಿದ್ದರೂ ಮೂವರು ಎಸೆನ್ಸ್ ಸೇವನೆ ಮಾಡಿರುವುದು ಸಂಶಯಾಸ್ಪದವಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶ ಇಲ್ಲದಿದ್ದರೆ ಹೆಚ್ಚಿನ ಪ್ರಮಾಣದ ಎಸೆನ್ಸ್ ತೆಗೆದುಕೊಳ್ಳುವ ಅವಶ್ಯಕತೆ ಏನಿತ್ತು ಎಂದು ಶಂಕೆ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net