

ಔರಾದ್: ಪ್ರತಿಯೊಬ್ಬರೂ ಬೀದಿ ಬದಿ ಆಹಾರಗಳಿಗೆ ಮಾರು ಹೋಗದೆ ಜಮೀನಿನಲ್ಲಿ, ಮನೆ ಹಿತ್ತಲಿನಲ್ಲಿ ಸ್ಥಳಾವಕಾಶ ಮಾಡಿಕೊಂಡು ಉತ್ತಮ ತರಕಾರಿ ಬೆಳೆದು ಸೇವನೆ ಮಾಡಿ, ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಮುದಾಯ ಸಂಪನ್ಮೂಲ ವ್ಯಕ್ತಿ ಮಲ್ಲಪ್ಪ ಗೌಡ ಹೇಳಿದರು.
ಬಾದಲಗಾಂವದ ರೈತ ಸೋಪನರಾವ ಶೇರಿಕಾರ್ ಜಮೀನಿನಲ್ಲಿ ರಿಲಾಯನ್ಸ್ ಫೌಂಡೇಷನ್ ಹಾಗೂ ಔಟ್‌ರೀಚ್ ಸಂಸ್ಥೆ ಸಹಯೋಗದಡಿ ನಿರ್ಮಿಸಿದ್ದ ರಿಲಾಯನ್ಸ್ ಪೋಷಕಾಂಶಗಳ ಕೈತೋಟ ಮಾದರಿ ಬಗ್ಗೆ ಶುಕ್ರವಾರ ಮಾಹಿತಿ ನೀಡಿದ ಅವರು, ಹತ್ತಾರು ವರ್ಷದಿಂದ ಫೌಂಡೇಷನ್ ಪೌಷ್ಟಿಕಾಂಶಗಳ ನಿರ್ವಹಣೆ ಕುರಿತು ಜಾಗೃತಿ ಮೂಡಿಸುತ್ತಿದೆ. ಕೈತೋಟದಲ್ಲಿ ತರಕಾರಿ ಬೆಳೆದು ನಿತ್ಯದ ಊಟದಲ್ಲಿ ತರಕಾರಿ ಬಳಕೆಯಿಂದ ಉತ್ತಮ ಆರೋಗ್ಯ ಇರಲಿದೆ. ಮಿಶ್ರ ಬೆಳೆ, ಸಮಗ್ರ ಕೀಟ ನಿರ್ವಹಣೆ, ಹೊಲದ ಗೊಬ್ಬರ ಮತ್ತು ಮಳೆ ನೀರಿನ ಸಂರಕ್ಷಣೆ ಪ್ರಯತ್ನ ನಿರಂತರ ನಡೆಯಬೇಕು ಎಂದರು.
ಸೋಪಾನರಾವ ಶೇರಿಕಾರ್, ವಿಠ್ಠಲ್ ರಾಠೋಡ್, ಶಂಕರ ವಾಘಮಾರೆ, ಪಂಢರಿನಾಥ, ಸೋಪಾನರಾವ ಗೌಳಿ, ಬಾಳು ಹಳ್ಳೆ, ರಾಮದಾಸ ಶೇರಿಕಾರ್, ವೈಶಾಲಿ ಶೇರಿಕಾರ್, ಇಸ್ಮಾಯಿಲ್ ಇತರರಿದ್ದರು.