

ಕೊಪ್ಪಳ: ವ್ಯಕ್ತಿಯೊಬ್ಬನನ್ನು ಯಾವುದೇ ಪ್ರಕರಣ ದಾಖಲಾಗದಿದ್ದರೂ ಠಾಣೆಗೆ ಕರೆತಂದು ಕೈಗೆ ಕೋಳ ಹಾಕಿ ಕೂಡಿಸಿದ ಘಟನೆ ಕನಕಗಿರಿ ಠಾಣೆಯಲ್ಲಿ ನಡೆದಿದೆ. ಈ ಸಂಬಂಧ ಮಾನವ ಹಕ್ಕು ಉಲ್ಲಂಘನೆ ಬಗ್ಗೆ ವ್ಯಕ್ತಿ ಪೊಲೀಸರ ವಿರುದ್ಧ ಗೃಹ ಸಚಿವ ಜಿ.ಪರಮೇಶ್ವರಗೆ ಮನವಿ ಸಲ್ಲಿಸಿದ್ದಾನೆ.
ಕನಕಗಿರಿ ತಾಲೂಕಿನ ಬೊಮ್ಮಸಾಗರ ತಾಂಡಾ ಗ್ರಾಮದ ಸಣ್ಣ ಹನುಮಂತ ಚಿರ್ಚನಗುಡ್ಡ ಎಂಬಾತನ ಕೈಗೆ ಕೋಳಹಾಕಿ ಕೂಡಿಸಿದ ಫೋಟೋ ವೈರಲ್ ಆಗಿದೆ. ಯಾವುದೇ ಪ್ರಕರಣದಲ್ಲಿ ಭಾಗಿಯಾಗಿಲ್ಲದಿದ್ದರೂ ನನ್ನನ್ನು ಪೊಲೀಸರು ಕರೆತಂದಿದ್ದಾರೆ. ಮಹಾರಾಷ್ಟ್ರಕ್ಕೆ ಕಬ್ಬು ಕಡೆಯಲು ತೆರಳಿದ್ದು, ಕೆಲವು ದಿನಗಳಿಂದ ಕನಕಗಿರಿ ಠಾಣೆಯ ಬಸವರಾಜ ಮತ್ತು ರಮೇಶ ಚೌಡಕಿ ಎಂಬುವವರು ಕರೆ ಮಾಡಿದ್ದರು.
ಅವರ ಕರೆ ಮೇರೆಗೆ ಠಾಣೆಗೆ ತೆರಳಿದಾಗ ಠಾಣೆಯ ಜಗದೀಶ ಕೆ.ಜಿ. ಪ್ರಕರಣವೊಂದರಲ್ಲಿ ಸುಳ್ಳು ಸಾಕ್ಷಿ ನುಡಿಯುವಂತೆ ಒತ್ತಡ ಹಾಕಿದರು. ನಾನು ಒಪ್ಪದಿದ್ದಾಗ ಕೋಳ ಹಾಕಿ ಕಿಟಕಿಗೆ ಕಟ್ಟಿ ಹಾಕಿ ಬೆಲ್ಟ್‌ನಿಂದ ಹೊಡೆದು ನಿಂದಿಸಿದ್ದಾರೆ. ಬೈಕ್ ಕಸಿದುಕೊಂಡಿದ್ದು, ಹೇಳಿದಂತೆ ಕೇಳದಿದ್ದಲ್ಲಿ ಸುಳ್ಳು ಮಟ್ಕಾ ಪ್ರಕರಣ ದಾಖಲಿಸುವುದಾಗಿ ಬೆದರಿಸಿದ್ದಾರೆಂದು ಗೃಹ ಸಚಿವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾನೆ.
ಕನಕಗಿರಿ ಠಾಣೆಯಲ್ಲಿ ವ್ಯಕ್ತಿ ಕೈಗೆ ಕೋಳ ಹಾಕಿ ಕೂಡಿ ಹಾಕಿದ ಬಗ್ಗೆ ವಿಷಯ ತಿಳಿದಿದೆ. ಆತನ ವಿರುದ್ಧ ಮಟ್ಕಾ ಬರೆಯುತ್ತಿದ್ದನೆಂಬ ಆರೋಪಗಳಿವೆ. ಈಬಗ್ಗೆ ವರದಿ ಸಲ್ಲಿಸುವಂತೆ ಡಿವೈಎಸ್ಪಿಗೆ ಸೂಚಿಸಿರುವೆ. ವರದಿ ಪಡೆದು ನಮ್ಮ ಸಿಬ್ಬಂದಿ ತಪ್ಪೆಸಗಿದ್ದಲ್ಲಿ ಕ್ರಮ ಕೈಗೊಳ್ಳುವೆ. ಯಶೋದಾ ವಂಟಗೋಡಿ. ಎಸ್ಪಿ ಕೊಪ್ಪಳ.
ಯಶೋದಾ ವಂಟಗೋಡಿ. ಎಸ್ಪಿ ಕೊಪ್ಪಳ.