

ಮೈಸೂರು: ಹೂಟಹಳ್ಳಿ ನಗರಸಭೆಯಿಂದ ಕೈಗಾರಿಕೆಗಳಿಗೆ ವಿಧಿಸುತ್ತಿರುವ ತೆರಿಗೆಯನ್ನು ಪರಾಮರ್ಶಿಸಿ ಸೂಕ್ತ ತೆರಿಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು.
ಮೈಸೂರು ಕೈಗಾರಿಕೋದ್ಯಮಿಗಳಿಂದ ಹೆಬ್ಬಾಳು ಕೈಗಾರಿಕಾ ವಸಾಹತು ಸಮುದಾಯ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಕೈಗಾರಿಕೋದ್ಯಮಿಗಳು, ಅಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೈಗಾರಿಕೆಗಳಿಗೆ ಯಾವ ಪ್ರಮಾಣದಲ್ಲಿ ತೆರಿಗೆ ವಿಧಿಸಬೇಕು ಎನ್ನುವ ಕುರಿತು ಸಂಬಂಧಪಟ್ಟ ಗ್ರಾಮ ಪಂಚಾಯಿತಿ, ನಗರಸಭೆ ಹಾಗೂ ನಗರಪಾಲಿಕೆಯಿಂದ ಮಾಹಿತಿ ತರಿಸಿಕೊಳ್ಳಲಾಗುವುದು. ಬಳಿಕ ಚರ್ಚಿಸಿ ಉದ್ಯಮಿಗಳಿಗೆ ಪೂರಕವಾದ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈಗ ಇರುವ ಸಣ್ಣ ಕೈಗಾರಿಕೆ, ಮಧ್ಯಮ ಮತ್ತು ದೊಡ್ಡ ಕೈಗಾರಿಕೆಗಳ ಆಸ್ತಿ ತೆರಿಗೆ ತಾರತಮ್ಯ ಹೋಗಲಾಡಿಸುವ ಬಗ್ಗೆ ಪರಿಶೀಲಿಸಲಾಗುವುದು. ಕೆಐಎಡಿಬಿ ಮತ್ತು ಕೆಎಸ್‌ಎಸ್‌ಐಡಿಸಿ ಅಭಿವೃದ್ಧಿ ಪಡಿಸಿರುವ ಕೈಗಾರಿಕಾ ಪ್ರದೇಶಗಳನ್ನು ಹೂಟಗಳ್ಳಿ ನಗರಸಭೆಗೆ ಹಸ್ತಾಂತರಿಸಲಾಗುವುದು. ಹೂಟಗಳ್ಳಿ ನಗರಸಭೆಯಿಂದ ಬೀದಿ ದೀಪ, ರಸ್ತೆ, ಕಸ ನಿರ್ವಹಣೆ ಮಾಡಲು ನಿರ್ದೇಶನ ನೀಡಲಾಗುವುದು. ಈಗ ಇರುವ ರಾಶಿ ಕಸ, ಡಬ್ರಿಸ್ ಅನ್ನು ಒಮ್ಮೆ ವಿಲೇವಾರಿ ಮಾಡಲು ನಗರಪಾಲಿಕೆಗೆ ತಿಳಿಸುವುದಾಗಿ ಹೇಳಿದರು.
ಇದಕ್ಕೂ ಮುನ್ನಾ ವಿಷಯ ಪ್ರಸ್ತಾಪಿಸಿದ ಮೈಸೂರು ಕೈಗಾರಿಕೆಗಳ ಸಂಘದ ಕಾರ್ಯದರ್ಶಿ ಸುರೇಶ್‌ಕುಮಾರ್ ಜೈನ್ ಮಾತನಾಡಿ, ಹೂಟಗಳ್ಳಿ ನಗರಸಭೆ ರಚನೆಯಾಗಿದ್ದು ಇದರವ್ಯಾಪ್ತಿಗೆ ಹೂಟಗಳ್ಳಿ ,ಬೆಳವಾಡಿ ,ಹೆಬ್ಬಾಳು , ಕೂರ್ಗಳ್ಳಿ , ಹಿನಕಲ್ ಗ್ರಾಮ ಪಂಚಾಯಿತಿಯ 28 .48 ಚದರ ಕಿಲೋ ಮೀಟರ್ ಪ್ರದೇಶ ಸೇರಿದೆ. ಆದರೆ ನಗರಸಭೆ ಹಾಗೂ ಕೈಗಾರಿಕಾ ಅಭಿವೃದ್ಧಿ ಮಂಡಳಿ ಎರಡು ಕಡೆ ಉದ್ಯಮಿಗಳು ತೆರಿಗೆ ಪಾವತಿಸುವ ಸ್ಥಿತಿ ಉಂಟಾಗಿದೆ. ಆದ್ದರಿಂದ ಹೂಟಗಳ್ಳಿ ನಗರಸಭೆಗೆ ಮಾತ್ರ ತೆರಿಗೆ ಪಾವತಿಸಬೇಕು, ಮುಂದೆ ನಗರಸಭೆಯೇ ಕೈಗಾರಿಕಾ ಪ್ರದೇಶದ ಮೂಲಸೌಲಭ್ಯವನ್ನು ನಿರ್ವಹಣೆ ಮಾಡಬೇಕು ಎಂದು ಕೋರಿದರು.
ಹಾಲಿ ಕೈಗಾರಿಕಾ ಪ್ರದೇಶದ ನಿರ್ವಹಣೆಯನ್ನು ಕೆಐಎಡಿಬಿ ಗೆ ನಿರ್ವಹಣಾ ವೆಚ್ಚ ಪಾವತಿಸುವುದರಿಂದ ಬಹುತೇಕ ಕೈಗಾರಿಕೆಗಳು ಸ್ಥಳೀಯ ಸಂಸ್ಥೆಗಳಿಗೆ ತೆರಿಗೆ ಪಾವತಿಸಿರುವುದಿಲ್ಲ. ಆದರೆ ಈಗ ತೆರಿಗೆ ದಂಡ ವಿಧಿಸಿರುವುದರಿಂದ ದಂಡ ಮೊತ್ತ ಮನ್ನಾ ಮಾಡುವ ಜತೆಗೆ ಒಂದೇ ಬಾರಿಗೆ ತೆರಿಗೆ ಪಾವತಿ ಮಾಡುವ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಕೈಗಾರಿಕಾ ಪಟ್ಟಣ ಪ್ರಾಧಿಕಾರ ರಚನೆ ಮಾಡುವ ಮೂಲಕ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಶೇ.70ರಷ್ಟು ಹಣ ವಿನಿಯೋಗಿಸಲು ಅವಕಾಶ ನೀಡಬೇಕು. ಆದ್ದರಿಂದ ಪ್ರಾಧಿಕಾರ ರಚನೆಗೆ ಶೀಘ್ರ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.
ತೆರಿಗೆ ಪಾವತಿಸಿದ ಎಲ್ಲ ಆಸ್ತಿಗಳಿಗೆ ಸಕಾಲ ಯೋಜನೆಯ ಅವಧಿಯಲ್ಲಿ ಖಾತೆ ಮಾಡಿ ನಮೂನೆ-3 ವಿತರಿಸಬೇಕು. ಈಗಾಗಲೇ ಕೆಐಎಡಿ ಬಿ ಗೆ ಪಾವತಿಸಿರುವ ತೆರಿಗೆ ಮೊತ್ತವನ್ನು ಕಳೆದು ಬಾಕಿ ತೆರಿಗೆ ಮೊತ್ತ ಸ್ವೀಕರಿಸಬೇಕು, ಪರವಾನಗಿ ಪಡೆಯುವ ವ್ಯವಸ್ಥೆಯನ್ನು ಏಕರೂಪಗೊಳಿಸಬೇಕು, ಒಂದೇ ಕಡೆ ದೊರೆಯುವಂತೆ ಮಾಡಬೇಕು ಎಂದರು.
ಪ್ರಸ್ತುತ ಹೂಟಗಳ್ಳಿ ನಗರಸಭೆ ಆಸ್ತಿ ತೆರಿಗೆ ಏರಿಕೆ ಮಾಡಿದ್ದು, ನಗರಪಾಲಿಕೆಗಿಂತಲೂ ನಗರಸಭೆಯಲ್ಲಿಯೇ ತೆರಿಗೆ ಏರಿಕೆ ಅಗಿದೆ. ನಗರಪಾಲಿಕೆಯಲ್ಲಿಯೇ ಸಣ್ಣ, ಮಧ್ಯಮ ಬಾರಿ ಕೈಗಾರಿಕೆ ಎನ್ನುವ ವಿಂಗಡಣೆ ಇಲ್ಲದೇ ಏಕರೂಪದ ತೆರಿಗೆ ನಿಗದಿ ಪಡಿಸಲಾಗಿದೆ. ಆದರೆ ನಗರಸಭೆಯಲ್ಲಿ ಮಾತ್ರ ಅವೈಜ್ಞಾನಿಕವಾಗಿ ವಿಂಗಡಣೆ ಮಾಡಲಾಗಿದೆ ಎಂದು ದೂರಿದರು.
ಕೈಗಾರಿಕಾ ಉಪಯೋಗದ ಖಾಲಿ ನಿವೇಶನಗಳಿಗೆ ಚದರ ಅಡಿಗೆ 20 ಪೈಸೆ , ವಸತಿ ಕಟ್ಟಡ 0.50 ಪೈಸೆ, ವಾಣಿಜ್ಯ ಕಟ್ಟಡ 1.50 ರೂ. ಸಣ್ಣ ಕೈಗಾರಿಕೆ ಕಟ್ಟಡ ಒಂದು ರೂಪಾಯಿ , ಮದ್ಯಮ ಕೈಗಾರಿಕೆ ಕಟ್ಟಡ 1.50 ರೂ , ಭಾರೀ ಕೈಗಾರಿಕೆ ಕಟ್ಟಡ 2 ರೂ. ಎಂದು ವಿಂಗಡಿಸಿ ತೆರಿಗೆ ವಿಧಿಸಲಾಗುತ್ತಿದೆ ಎಂದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದಿನೇಶ್, ಹೂಟಗಳ್ಳಿ ನಗರ ಸಭೆ ಆಯುಕ್ತ ನರಸಿಂಹಮೂರ್ತಿ, ಹೆಬ್ಬಾಳು ಕೈಗಾರಿಕಾ ವಸಾಹತು ತಯಾರಕರ ಸಂಘದ ಅಧ್ಯಕ್ಷ ಪ್ರಕಾಶ್‌ಗೌಡ, ಕಾರ್ಯದರ್ಶಿ ರಾಮಕೃಷ್ಣ, ಮಾಜಿ ಅಧ್ಯಕ್ಷ ಜಯಂತ್ ಹೆಗಡೆ , ಕಾಸಿಯಾ ಪ್ರತಿನಿಧಿಗಳಾದ ಮಂಜುನಾಥ್, ಸತೀಶ್, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಲಿಂಗರಾಜು ಇತರರು ಇದ್ದರು.