ಕೈಗಾರಿಕೆಗಳ ಸ್ಥಾಪನೆಗೆ ಭೂಮಿ ಶೋಧ

01
Published on

ಶಹಾಪುರ : ನಗರದಲ್ಲಿ ಕೈಗಾರಿಕೋದ್ಯಮಗಳ ಸ್ಥಾಪನೆಗಾಗಿ ವಿವಿಧ ಕಡೆ ಲಭ್ಯವಿರುವ ಸರ್ಕಾರಿ ಜಮೀನನ್ನು ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಖುದ್ದಾಗಿ ಅಧಿಕಾರಿಗಳೊಂದಿಗೆ ಪರಿಶೀಲಿಸಿದರು.

ಈ ವೇಳೆ ಮಾತನಾಡಿ, ನಗರದಲ್ಲಿನ ನಿವೇಶನ ರಹಿತ ಕುಟುಂಬಗಳಿಗೆ ವಸತಿ ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೇ ಸುಮಾರು ೮ ಎಕರೆ ಜಮೀನು ಲಭ್ಯವಾಗಿದೆ. ಇನ್ನೂ ಹೆಚ್ಚು ಸಿಕ್ಕರೆ ಸರ್ಕಾರದಿಂದ ಖರೀದಿಸಿ ಹಲವು ಸಮುದಾಯಗಳಿಗೆ ವಸತಿ ಸೌಕರ್ಯ ಮತ್ತು ಉಳಿದ ಜಮೀನನ್ನು ಸ್ಮಶಾನಕ್ಕಾಗಿ ಮೀಸಲಿಡಲಾಗುವುದು ಎಂದು ಹೇಳಿದರು.

ನಗರದ ಜನತೆಗೆ ಹಾಗೂ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ೪ ಗ್ರಾಮಗಳಿಗೆ ಕುಡಿವ ನೀರಿನ ಸೌಲಭ್ಯಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ೧೨೦ ಕೋಟಿ ರೂ. ಅನುದಾನವನ್ನು ಅಮೃತ ೨.೦ ಯೋಜನೆಯಡಿ ಮಂಜೂರು ಮಾಡಿದ್ದಾರೆ. ಅಂದಾಜು ಪತ್ರಿಕೆ ಸಿದ್ದಪಡಿಸುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಗರದ ಜನತೆಗೆ ೭೦ ಕೋಟಿ ರೂ.ವೆಚ್ಚದಲ್ಲಿ ಭೀಮಾ ನದಿಯಿಂದ ಪೈಪ್‌ಲೈನ್ ಮೂಲಕ ಫಿಲ್ಟರ್‌ಬೆಡ್ ಕೆರೆಗೆ ನೀರು ಸರಬರಾಜು ಮಾಡುವ ಕಾಮಗಾರಿ ಮುಕ್ತಾಯದ ಹಂತಕ್ಕೆ ತಲುಪಿದೆ ಎಂದು ಹೇಳಿದರು.

ಕೆರೆಯಿಂದ ನಗರದ ಎಲ್ಲ ವಾರ್ಡ್ಗಳಲ್ಲಿ ದಿನದ ೨೪ ಗಂಟೆ ಕುಡಿವ ನೀರಿನ ಸೌಲಭ್ಯ ಒದಗಿಸಲು ೧೫೦ ಕೋಟಿ ರೂ. ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಯೋಜನೆಗೆ ಸಧ್ಯ ೯೫ ಕೋಟಿ ರೂ.ಬಿಡುಗಡೆಯಾಗಿದೆ. ಅಲ್ಲದೆ ಕ್ಷೇತ್ರದಲ್ಲಿನ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಗ್ರಾಮಗಳಾದ ಹುಲಕಲ್, ಕೆಂಚನಕವಿ, ಶಖಾಪುರ ಮತ್ತು ಅಳ್ಳಳ್ಳಿ ಗ್ರಾಮಗಳಿಗೆ ಕುಡಿವ ನೀರು ಸರಬರಾಜು ಯೋಜನೆಗೆ ೨೫ಕೋಟಿ ರೂ.ಮಂಜೂರು ಮಾಡಲಾಗಿದ್ದು ಅಂದಾಜು ಪತ್ರಿಕೆ ಸಿದ್ದಪಡಿಸಿ ೨ ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಲಾಗುವುದು ಎಂದು ಹೇಳಿದರು.

ತಹಸಿಲ್ದಾರ್ ಉಮಾಕಾಂತ ಹಳ್ಳೆ, ಪೌರಾಯುಕ್ತ ರಮೇಶ ಬಡಿಗೇರ, ವಸಂತ ಸುರಪುರಕರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net