ಕೈಗಾರಿಕೆಗಳ ಅಭಿವೃದ್ಧಿಗೆ ಸಕಲ ಪ್ರಯತ್ನ

h17-Shettar 1
Published on

ಹುಬ್ಬಳ್ಳಿ: ಕೈಗಾರಿಕೆ ಅಭಿವೃದ್ಧಿ ಪ್ರದೇಶಗಳ ನಿವೇಶನ ದರ ಪರಿಷ್ಕರಣೆ, ಮೂಲಸೌಕರ್ಯಗಳ ನಿರ್ವಹಣೆಗೆ ವಿಧಿಸುವ ತೆರಿಗೆ ಆಕರಣೆ ಸೇರಿ ಕೆಲ ನಿಯಮಗಳ ಸಡಿಲಿಕೆ ಕುರಿತು ಸಚಿವ ಸಂಪುಟದಲ್ಲಿ ರ್ಚಚಿಸಿ ಶೀಘ್ರವೇ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಭರವಸೆ ನೀಡಿದರು.

ಎಂ.ತಿಮ್ಮಸಾಗರ, ತಾರಿಹಾಳ, ಗಾಮನಗಟ್ಟಿ, ಇಟ್ಟಿಗಟ್ಟಿ ಹಾಗೂ ಧಾರವಾಡದ ಬೇಲೂರು, ಮುಮ್ಮಿಗಟ್ಟಿ ಕೈಗಾರಿಕೆ ಅಭಿವೃದ್ಧಿ ಪ್ರದೇಶಗಳು ಮತ್ತು ಕೆಎಸ್​ಎಸ್​ಐಡಿಸಿಯ ಕೈಗಾರಿಕೆ ವಸಾಹತು ಪ್ರದೇಶಗಳಿಗೆ ಅವರು ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು. ಸ್ಥಳೀಯ ಉದ್ಯಮಿಗಳ ಅಹವಾಲುಗಳನ್ನು ಆಲಿಸಿದರು. ಮೂಲಸೌಕರ್ಯಗಳ ಅಭಿವೃದ್ಧಿ, ವಸತಿ ಗೃಹಗಳ ಹಂಚಿಕೆ, ಗಾಮನಗಟ್ಟಿ ಮಹಿಳಾ ಉದ್ಯಮಿ ಪಾರ್ಕ್ ನಿವೇಶನಗಳ ಹಂಚಿಕೆ ಕುರಿತು ಶೀಘ್ರ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ನಂತರ ನಗರದ ಖಾಸಗಿ ಹೋಟೆಲ್​ನಲ್ಲಿ ಕೈಗಾರಿಕೆ ಉದ್ಯಮಿಗಳ ಸಂಘದ ಪದಾಧಿಕಾರಿಗಳೊಂದಿಗೆ ಅನೌಪಚಾರಿಕ ಸಭೆ ನಡೆಸಿದರು.

ಕರೊನಾ ನಿಯಂತ್ರಣಕ್ಕಾಗಿ ಲಾಕ್​ಡೌನ್ ಜಾರಿ, ಈಗ ಮಳೆ ಕಾರಣದಿಂದ ಎಂ.ತಿಮ್ಮಸಾಗರ ಕೈಗಾರಿಕೆ ಪ್ರದೇಶದ ಮೂಲ ಸೌಕರ್ಯಗಳ ಅಭಿವೃದ್ಧಿಯಲ್ಲಿ ವಿಳಂಬವಾಗಿದೆ. ಕಾಮಗಾರಿಗಳು ಪೂರ್ಣಗೊಂಡ ಬಳಿಕ ಇದು ಮಾದರಿ ಕೈಗಾರಿಕೆ ಪ್ರದೇಶವಾಗಿ ಅಭಿವೃದ್ಧಿ ಹೊಂದಲಿದೆ ಎಂದರು.

ಹೊಸ ಕೈಗಾರಿಕೆ ನೀತಿ, ಭೂ ಸುಧಾರಣೆ ಕಾಯ್ದೆಯ ತಿದ್ದುಪಡಿಗಳಿಂದ ಬಹಳಷ್ಟು ಉದ್ಯಮಿಗಳು ಬಂಡವಾಳ ಹೂಡಿಕೆಗೆ ಉತ್ಸುಕರಾಗಿದ್ದಾರೆ. ಹುಬ್ಬಳ್ಳಿ- ಧಾರವಾಡ ಸೇರಿ ರಾಜ್ಯದ ಎರಡನೇ ಹಂತದ ನಗರಗಳಲ್ಲಿ ಉದ್ಯಮಗಳು ತಲೆ ಎತ್ತಲಿವೆ. ಧಾರವಾಡದಲ್ಲಿ ಎಫ್​ಎಂಸಿಜಿ ಕ್ಲಸ್ಟರ್ ಸ್ಥಾಪನೆಗೆ ಉಲ್ಲಾಸ ಕಾಮತ್ ಅಧ್ಯಕ್ಷತೆಯಲ್ಲಿ ವಿಜನ್ ಗ್ರೂಪ್ ರಚಿಸಲಾಗಿದೆ. ಈ ಸಮಿತಿ ಈಗಾಗಲೇ ಕಾರ್ಯ ಆರಂಭಿಸಿದೆ ಎಂದರು.

ಕೋವಿಡ್ ಪರಿಸ್ಥಿತಿಯಲ್ಲಿಯೂ ಅಂದಾಜು 30 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆಗೆ ಪ್ರಸ್ತಾವನೆ ಬಂದಿದ್ದು, ಸರ್ಕಾರ ಅನುಮೋದನೆ ನೀಡಿದೆ. ಇದರಿಂದ 45 ಸಾವಿರ ಉದ್ಯೋಗ ಸೃಷ್ಟಿಯಾಗಲಿವೆ. ಈ ಕುರಿತು ಬೆಂಗಳೂರಿನಲ್ಲಿ ಮಂಗಳವಾರ, ಬುಧವಾರ ಅಧಿಕಾರಿಗಳೊಂದಿಗೆ ಸಭೆಯಲ್ಲಿ ರ್ಚಚಿಸುತ್ತೇನೆ. ಕೆಐಎಡಿಬಿ ಹಾಗೂ ಕೆಎಸ್​ಎಸ್​ಐಡಿಸಿ ಸರ್ಕಾರದ ಸ್ವಾಯತ್ತ ಸಂಸ್ಥೆಗಳಾಗಿದ್ದು, ಲಾಭದ ಉದ್ದೇಶವಿಲ್ಲದೆ ಆದಾಯ, ಖರ್ಚು ಸರಿದೂಗಿಸಿಕೊಂಡು ಉದ್ಯಮಿಗಳಿಗೆ ಸೌಕರ್ಯ ಕಲ್ಪಿಸುತ್ತಿವೆ. ಉದ್ಯೋಗ ಸೃಜನೆಯಲ್ಲಿ ಸಣ್ಣ ಕೈಗಾರಿಕೆಗಳ ಪಾತ್ರ ಮಹತ್ವದ್ದಾಗಿದೆ. ಪ್ರತಿ ವರ್ಷ ನಿವೇಶನ ದರ ಪರಿಷ್ಕರಿಸುವ ಪದ್ಧತಿ ಕೈಬಿಡಲು ಮುಖ್ಯಮಂತ್ರಿಯವರನ್ನು ಕೋರಲಾಗುವುದು. ತಾರಿಹಾಳ ಪ್ರದೇಶದಲ್ಲಿ ಟೌನ್​ಶಿಪ್ ಅಭಿವೃದ್ಧಿಪಡಿಸಲಾಗುವುದು ಎಂದರು.

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ (ಕೆಎಸ್​ಎಸ್​ಐಡಿಸಿ) ಅಧ್ಯಕ್ಷ, ರೋಣ ಶಾಸಕ ಕಳಕಪ್ಪ ಬಂಡಿ ಮಾತನಾಡಿ, ನಿಗಮವು ಉದ್ಯಮಿಗಳನ್ನು ಪ್ರೋತ್ಸಾಹಿಸುತ್ತದೆ. ನಿವೇಶನ ದರದ ಪರಿಷ್ಕರಣೆಯಲ್ಲಿ ನ್ಯಾಯಯುತವಾದ ದರ ನಿಗದಿ ಪಡಿಸಲಾಗುವುದು ಎಂದರು.

ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಕೆಐಎಡಿಬಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್. ಶಿವಶಂಕರ, ಕೆಎಸ್​ಎಸ್​ಐಡಿಸಿ ವ್ಯವಸ್ಥಾಪಕ ನಿರ್ದೇಶಕ ಮಹೇಶ ಶಿರೂರ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ, ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ಮೋಹನ ಬರಮಕ್ಕನವರ, ಕೆಐಎಡಿಬಿ ಅಭಿವೃದ್ಧಿ ಅಧಿಕಾರಿ ಮನೋಹರ ವಡ್ಡರ್, ಮತ್ತಿತರರು ಉಪಸ್ಥಿತರಿದ್ದರು.

ಕೈಗಾರಿಕೋದ್ಯಮ ಸಂಘಟನೆಗಳ ಪದಾಧಿಕಾರಿಗಳಾದ ಮಹೇಂದ್ರ ಲದ್ದಡ, ಕವಿತಾ ನಾಯ್ಕರ್, ವಿಶ್ವನಾಥ ಗೌಡರ, ಶ್ಯಾಮ್ ಕೋಲ್ಹಾರ, ಶ್ರೀಕಾಂತ ಶೆಟ್ಟಿ, ಆರ್.ಜಿ.ಭಟ್ ಮತ್ತಿತರರು ಮಾತನಾಡಿದರು.

ಮಹಿಳಾ ಉದ್ಯಮಿಗಳಿಗೆ ಉತ್ತೇಜನ ನೀಡುವ ಸಲುವಾಗಿ ಗಾಮನಗಟ್ಟಿ ಮಹಿಳಾ ಉದ್ಯಮಿ ಪಾರ್ಕ್ ನಿರ್ವಿುಸಲಾಗಿದೆ. ಅಂದಾಜು 300 ನಿವೇಶನಗಳಿದ್ದು, 400ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶೀಘ್ರವೇ ನಿವೇಶನ ಹಂಚಿಕೆ ಮಾಡಲಾಗುವುದು. | ಜಗದೀಶ ಶೆಟ್ಟರ್, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net