

ಸಾಗರ: ಮಲೆನಾಡಿನಲ್ಲಿ ಕೈಗಾರಿಕೋದ್ಯಮ ಸವಾಲಿನ ಕೆಲಸ. ಹಾಗಾಗಿ ಉದ್ಯಮಿಗಳನ್ನು ಸತಾಯಿಸಬೇಡಿ ಎಂದು ಶಾಸಕ ಹರತಾಳು ಹಾಲಪ್ಪ ಎಚ್ಚರಿಸಿದರು.
ನಗರಸಭೆಯಲ್ಲಿ ಗುರುವಾರ ಮಂಗಳಬೀಸು ಮತ್ತು ರಾಮನಗರ ಕೈಗಾರಿಕಾ ವಸಾಹತು ಪ್ರದೇಶದ ಕೈಗಾರಿಕೋದ್ಯಮಿಗಳ ಅಹವಾಲು ಆಲಿಸಿ, ಕೈಗಾರಿಕಾ ಇಲಾಖೆ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಮಾತನಾಡಿದರು.
ಸೌಲಭ್ಯವನ್ನೇ ಕೊಡದೆ ಅವರಿಂದ ನಿವೇಶನ ಹಣ ಕಟ್ಟಿಸಿಕೊಂಡು ಸತಾಯಿಸುತ್ತಿರುವುದರ ವಿರುದ್ಧ ಸದನದಲ್ಲಿ ಸರ್ಕಾರದ ಗಮನ ಸೆಳೆದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುವುದು ಎಂದು ಎಚ್ಚರಿಸಿದರು.
ಮಂಗಳಬೀಸು ಮತ್ತು ರಾಮನಗರ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಸಣ್ಣ ಉದ್ಯಮಿಗಳು ಬದುಕು ಕಟ್ಟಿಕೊಳ್ಳಲು ನಿವೇಶನ ಖರೀದಿಸಿ ಉದ್ದಿಮೆ ಆರಂಭಿಸಲು ಮುಂದಾಗಿದ್ದಾರೆ. ಮಂಗಳಬೀಸು ಪ್ರದೇಶದಲ್ಲಿ ಸಣ್ಣಪುಟ್ಟ ಸಮಸ್ಯೆಗಳಿದ್ದು, ಅದನ್ನು ಬಗೆಹರಿಸಲು ನಗರಸಭೆ ಆಡಳಿತಕ್ಕೆ ಸೂಚಿಸಲಾಗಿದೆ. ಆದರೆ ರಾಮನಗರ ಪ್ರದೇಶದಲ್ಲಿ ನಿವೇಶನ ಪಡೆದವರಿಗೆ ಯಾವುದೆ ಸೌಲಭ್ಯ ಕೊಡದಿರುವುದು ನನ್ನ ಗಮನಕ್ಕೆ ಬಂದಿದೆ ಎಂದು ಹೇಳಿದರು.
ಕಳೆದೆರಡು ವರ್ಷದಿಂದ ರಾಮನಗರದಲ್ಲಿ ಕೈಗಾರಿಕೆ ಆರಂಭಿಸಲು ನಿವೇಶನ ಖರೀದಿಸಿದವರಿಗೆ ಸೌಲಭ್ಯ ಕೊಡದೆ ಸತಾಯಿಸಲಾಗುತ್ತಿದೆ. ಒಬ್ಬರ ಹೆಸರಿಗೆ ಮಂಜೂರಾದ ನಿವೇಶನವನ್ನು ಹಣ ಕಟ್ಟಿಲ್ಲ ಎಂದು ಮತ್ತೊಬ್ಬರಿಗೆ ಮಂಜೂರು ಮಾಡಲಾಗಿದೆ. ಸೌಲಭ್ಯವೇ ಕೊಡದೆ ಹಣ ಕಟ್ಟಿ ಎಂದು ಹೇಳುತ್ತಿರುವ ಅಧಿಕಾರಿಗಳ ವರ್ತನೆ ಸರಿಯಲ್ಲ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಲಾಯರ್ ನೋಟಿಸ್ ಕೊಡಲು ಫಲಾನುಭವಿಗಳಿಗೆ ಹೇಳಿದ್ದೇನೆ. ಕೈಗಾರಿಕೋದ್ಯಮಿಗಳಿಗೆ ಯಾವುದೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಅಭಯ ನೀಡಿದರು.