

ಚಿತ್ರದುರ್ಗ: ಹಿರಿಯೂರು ತಾಲೂಕಿನ ಮೇಟಿಕುರ್ಕೆ ಮತ್ತು ಕರಿಯೋಬನಹಳ್ಳಿ ಗ್ರಾಮಗಳ ಸುತ್ತಮುತ್ತಲಿನ 1,156 ಎಕರೆ ಪ್ರದೇಶವನ್ನು ಕೈಗಾರಿಕಾ ಪ್ರದೇಶವಾಗಿ ಅಭಿವೃದ್ಧಿಪಡಿಸಲು 2022ರಲ್ಲೇ ರಾಜ್ಯಪತ್ರ ಹೊರಡಿಸಿದೆ. ಆದರೆ, ಈಗಿನ ಜಿಲ್ಲಾ ಉಸ್ತುವಾರಿ ಸಚಿವರು ಅಡ್ಡಿಪಡಿಸುತ್ತಿದ್ದಾರೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಹಿರಿಯೂರು ತಾಲೂಕು ಅಧ್ಯಕ್ಷ ಶಂಕರಪ್ಪ ದೂರಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಭಾಗದ ಜಮೀನುಗಳು ಕೈಗಾರಿಕಾ ವಲಯ ಸ್ಥಾಪನೆಗೆ ಯೋಗ್ಯವಾಗಿಲ್ಲ. ಇಲ್ಲಿ ರಿಯಲ್ ಎಸ್ಟೇಟ್ ದಂಧೆ ನಡೆಯುತ್ತಿದೆ ಎಂದು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಮುಖ್ಯ ಕಾರ್ಯದರ್ಶಿಗೆ ಸಚಿವ ಡಿ.ಸುಧಾಕರ್ ಪತ್ರ ಬರೆದಿರುವುದು ಸರಿಯಲ್ಲ. ನಮಗೆ ಪೂರಕವಾಗಿ ಸ್ಪಂದಿಸಿ ಬರೆದ ಪತ್ರ ಹಿಂಪಡೆಯಬೇಕು. ಇಲ್ಲದಿದ್ದರೆ ಹೋರಾಟ ನಡೆಲಾಗುವುದು ಎಂದು ಎಚ್ಚರಿಸಿದರು.
ಈಗಾಗಲೇ ದಾವಣಗೆರೆ ಭೂಸ್ವಾಧೀನ ಕಚೇರಿ ಅಧಿಕಾರಿಗಳು ಕರಿಯೋಬನಹಳ್ಳಿ ಹಾಗೂ ಮೇಟಿಕುರ್ಕೆ ಭಾಗದ ರೈತರಿಗೆ ಅನೇಕ ಬಾರಿ ನೋಟಿಸ್ ನೀಡಿ, ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಸಭೆ ನಡೆಸಿ, ಪರಿಹಾರ ವಿಚಾರವಾಗಿ ಪ್ರಸ್ತಾಪಿಸಿ ಪ್ರತಿ ಎಕರೆಗೆ 35 ರಿಂದ 45 ಲಕ್ಷ ರೂ. ನೀಡುವುದಾಗಿ ತೀರ್ಮಾನಿಸಿದ್ದಾರೆ. ಆದರೆ, ನಮ್ಮದು ಫಲವತ್ತಾದ ಭೂಮಿಯಾಗಿದ್ದು, ಕೈಗಾರಿಕಾ ಪ್ರದೇಶ ನಿರ್ಮಾಣಕ್ಕೆ ಯೋಗ್ಯವಾಗಿದೆ. ಆದ್ದರಿಂದ ಎಕರೆಗೆ 1 ಕೋಟಿ ರೂ. ನೀಡಬೇಕೆಂಬ ಬೇಡಿಕೆ ಇಟ್ಟಿದ್ದೇವೆ. ಜು. 7ರಂದು ಮೊದಲ ಕಂತು ಪರಿಹಾರವಾಗಿ 100 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದರು.
ಇಷ್ಟೆಲ್ಲ ಬೆಳವಣಿಗೆ ಮಧ್ಯೆ ಸಚಿವರು ಯೋಗ್ಯವಾಗಿಲ್ಲವೆಂದು ಪತ್ರ ಬರೆದಿರುವ ಕುರಿತು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಸದ್ಯ ಹಿರಿಯೂರು ತಾಲೂಕಿನಲ್ಲಿ 3 ಕೈಗಾರಿಕೆಗಳು ಆರಂಭವಾಗಿ ಯಶಸ್ವಿಯಾಗಿ ನಡೆಯುತ್ತಿದೆ. ಅತ್ಯಂತ ಹಿಂದುಳಿದ ತಾಲೂಕಿನಲ್ಲಿ ಕೈಗಾರಿಕಾ ಕಾರಿಡಾರ್ ಆದಲ್ಲಿ ಸಾವಿರಾರು ನಿರುದ್ಯೋಗಿಗಳಿಗೆ ಕೆಲಸ ಸಿಗುತ್ತದೆ ಎಂದು ಹೇಳಿದರು.
ಮಂಡಳಿ ಟೆಂಡರ್ ಕೂಡ ಕರೆದಿದ್ದು, ಕೈಗಾರಿಕಾ ಬಡಾವಣೆ ಪ್ರಕ್ರಿಯೆ ಆರಂಭಗೊಂಡಿದೆ. ಹೀಗಿರುವಾಗ ಅಡ್ಡಗಾಲು ಹಾಕುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ವೀರೇಂದ್ರಸ್ವಾಮಿ, ಮಹೇಶ್, ಬಸವರಾಜ ನಾಯ್ಕ, ಬಿ.ಟಿ.ತಿಪ್ಪೇಸ್ವಾಮಿ, ಟಿ.ಎನ್.ರಾಜು ಇತರರಿದ್ದರು.
ಮಗ್‌ಶಾಟ್ (ಶಂಕರಪ್ಪ)